ಅಜಿತ್ ಪವಾರ್ ಸಾವಿನ ಹಿಂದಿದೆಯಾ ರಾಜಕೀಯ ನಂಟು? ಮಮತಾ ಬ್ಯಾನರ್ಜಿ ಆರೋಪ ಯಾರ ಮೇಲೆ?
Maharashtra Plane crash: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ದುರ್ಮರಣದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಯು ರಾಜಕೀಯಕ್ಕೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಿದ್ದಾರೆ.
ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ (Maharashtra Plane crash) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajith Pawar) ಅವರ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ. ಜೊತೆಗೆ, ಈ ದುರ್ಘಟನೆಯನ್ನು ಅಜಿತ್ ಪವಾರ್ ಅವರ ರಾಜಕೀಯ ಪಯಣದೊಂದಿಗೆ ಸಂಪರ್ಕಿಸುವ ಕೆಲವು ಪ್ರಶ್ನೆಗಳನ್ನೂ ಅವರು ಎತ್ತಿದ್ದಾರೆ.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜಕೀಯ ನಾಯಕರು ಕೂಡ ಈ ದೇಶದಲ್ಲಿ ಸುರಕ್ಷಿತವಾಗಿಲ್ಲ, ಸಾಮಾನ್ಯ ಜನರು ಕೂಡ ಸುರಕ್ಷಿತವಾಗಿಲ್ಲ ಎಂದು ಅವರು ಹೇಳಿದರು. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಯಿತು ಎಂದು ಹೇಳಿದರು.
ವಿಮಾನ ಅಪಘಾತದ ನಂತರ ಅಜಿತ್ ಪವಾರ್ ಮೃತದೇಹವನ್ನು ಗುರುತಿಸಿದ್ದು ಹೇಗೆ? ಆ ಒಂದು ವಸ್ತು ನೀಡ್ತಾ ಸುಳಿವು?
ಎರಡು ದಿನಗಳ ಹಿಂದೆ, ಅಜಿತ್ ಪವಾರ್ ಅವರು ಬಿಜೆಪಿ (ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟ) ತೊರೆಯಲು ಸಿದ್ಧರಿದ್ದಾರೆ ಎಂದು ಬೇರೆ ಪಕ್ಷದ ಯಾರೋ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದುಬಂದಿತು. ಆದರೀಗ ಇಂದು ಈ ದುರಂತ ಸಂಭವಿಸಿದೆ ಎಂದು ಅವರು ಹೇಳಿದರು.
ತನಿಖೆಗೆ ನ್ಯಾಯಾಲಯದ ಮೇಲ್ವಿಚಾರಣೆಗೆ ಕರೆ ನೀಡಿದ ಅವರು, ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ನಂಬಿಕೆ ಇದೆ. ಬೇರೆ ಯಾವುದೇ ಸಂಸ್ಥೆಯ ಮೇಲೆ ನಂಬಿಕೆ ಇಲ್ಲ. ಎಲ್ಲಾ (ಕೇಂದ್ರ) ಸಂಸ್ಥೆಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಿಕೊಂಡಿವೆ ಎಂದು ಆರೋಪಿಸಿದರು.
ಇಲ್ಲಿದೆ ವಿಡಿಯೊ:
VIDEO | Kolkata: On Maharashtra Deputy CM Ajit Pawar’s demise in a plane crash, West Bengal CM Mamata Banerjee (@MamataOfficial) said,
— Press Trust of India (@PTI_News) January 28, 2026
“I am deeply shocked to hear the news of Maharashtra Deputy Chief Minister Ajit Pawar’s death in a plane crash this morning. Even political… pic.twitter.com/NZjWPBrNgH
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಪ್ರಮುಖ ವಿರೋಧಿಯಾಗಿರುವ ಮಮತಾ ಬ್ಯಾನರ್ಜಿ ಅವರು, ಅಜಿತ್ ಪವಾರ್ ಅವರ ಕುಟುಂಬಕ್ಕೆ, ಮಹಾರಾಷ್ಟ್ರದ ಜನತೆಗೆ ಹಾಗೂ ಅವರ ಮಾವ ಮತ್ತು ಕುಟುಂಬದ ಹಿರಿಯರಾದ ಶರದ್ ಪವಾರ್ ಅವರಿಗೆ ಸಮಾಧಾನ ಹೇಳಿದ್ದಾರೆ.
ಇದೀಗ ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಬಿಜೆಪಿ ಕಠಿಣ ಸವಾಲು ಎಸೆಯುತ್ತಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರಿ 28) ಬೆಳಗ್ಗೆ ವಿಮಾನ ಅಪಘಾತಕ್ಕೀಡಾಗಿ ಮೃತಪಟ್ಟ ಐವರಲ್ಲಿ ಅಜಿತ್ ಪವಾರ್ ಸೇರಿದ್ದಾರೆ. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುತ್ತಿದ್ದ ಚಾರ್ಟರ್ಡ್ ಜೆಟ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು. ವಿಮಾನಯಾನ ನಿಯಂತ್ರಕ ಡಿಜಿಸಿಎ ಪ್ರಕಾರ, ಸಿಬ್ಬಂದಿ ಸೇರಿದಂತೆ ಐದು ಜನರು ವಿಮಾನದಲ್ಲಿದ್ದರು.
ಇನ್ನು ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ತನಿಖೆಗೆ ಕರೆ ನೀಡಿದರು. ಆದರೆ, ರಾಜಕೀಯವನ್ನು ಅವರು ಉಲ್ಲೇಖಿಸಿಲ್ಲ. ಈ ದುರ್ಘಟನೆ ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲರಿಗೂ ನೋವುಂಟು ಮಾಡಿದೆ. ನಾವು ಅವರ ದುಃಖವನ್ನು ಹಂಚಿಕೊಳ್ಳುತ್ತೇವೆ. ಈ ನಷ್ಟವನ್ನು ಸಹಿಸುವ ಶಕ್ತಿಯನ್ನು ಅವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಖರ್ಗೆ ತಿಳಿಸಿದರು.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಮಮತಾ ಬ್ಯಾನರ್ಜಿ ಒತ್ತಾಯಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಎಲ್ಲಾ ನಾಯಕರು, ತುರ್ತು ಕೆಲಸಕ್ಕಾಗಿ ಪ್ರಯಾಣಿಸುತ್ತಲೇ ಇರುತ್ತಾರೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಅಹಮದಾಬಾದ್‌ನಲ್ಲಿ ದೊಡ್ಡ ವಿಮಾನವೇ ಪತನಗೊಂಡ ಘಟನೆ ನಡೆದಿದೆ. ಇದು ಸಣ್ಣ ವಿಮಾನವಾಗಿತ್ತು. ಆದರೂ ಇದು ಏಕೆ ಸಂಭವಿಸಿತು? ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.