ನವದೆಹಲಿ: ಭೂಮಿಗೆ ಹೊರೆಯದವರಿಗಾಗಿ ಯಮರಾಜ ಕಾಯುತ್ತಿರುತ್ತಾನೆ ಎಂದು ತಮ್ಮ ಸರ್ಕಾರದ ಎನ್ ಕೌಂಟರ್ ಬಗ್ಗೆ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಅಭಿವೃದ್ಧಿಯನ್ನು ಕಾಣಬೇಕಾದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪುನಃಸ್ಥಾಪನೆಯಾಗಬೇಕು ಎಂದು ಹೇಳಿದರು. ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯವು ಆರ್ಥಿಕತೆಯಲ್ಲಿ 2029- 30ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆದಾಯಗಳಿಸಬೇಕು ಇದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ವ್ಯವಸ್ಥೆಯ ಮೇಲೆ ಹೊರೆಯಾಗಿರುವವರನ್ನು ಭೂಮಿಯನ್ನು ಮುಕ್ತಗೊಳಿಸಬೇಕು. ಅವರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಭೂಮಿಗೆ ಹೊರೆಯಾದವರಿಗೆ ಯಮರಾಜ ಕಾಯುತ್ತಿರುತ್ತಾನೆ ಎಂದು ದುಷ್ಕರ್ಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರ ಮನೆ ಖರೀದಿದಾರರಿಗೆ ಹೇಗೆ ಸಹಾಯ ಮಾಡುತ್ತಿದೆ ಮತ್ತು ಮುಂದಿನ ಅಭಿವೃದ್ಧಿ ದೃಷ್ಟಿಕೋನ ಹೇಗಿದೆ ಎನ್ನುವ ಕುರಿತು ವಿವರಿಸಿದರು.
ತಾವು ಮುಖ್ಯಮಂತ್ರಿಯಾದ ಮೇಲೆ ನಡೆದಿರುವ ಅಭಿವೃದ್ಧಿ ಕಾರ್ಯಗಳಲ್ಲಿ ರಾಮ ಮಂದಿರದ ಶಿಲಾನ್ಯಾಸ, ಅದರ ನಿರ್ಮಾಣ ಮತ್ತು ದೇವಾಲಯದಲ್ಲಿ ಧರ್ಮ ಧ್ವಜ ಸ್ಥಾಪನೆ ಅತ್ಯಂತ ಅಭೂತಪೂರ್ವ ಕ್ಷಣಗಳು ಎಂದು ಅವರು ಹೇಳಿದರು.
500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗಿದೆ. ಧರ್ಮ ಧ್ವಜವನ್ನೂ ಹರಿಸಲಾಗಿದೆ. ಇದರಲ್ಲಿ ನನ್ನ ಹಿಂದಿನ ಮೂರು ತಲೆಮಾರುಗಳ ಹೋರಾಟವಿದೆ. ಆದರೆ ಪರಂಪರೆ, ದೇಶ ಮತ್ತು ಧರ್ಮದ ಕಡೆಗೆ ಕರ್ತವ್ಯವನ್ನು ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂದರು.
ಪ್ರತಿಯೊಂದು ಸಮಾಜವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಎಂದ ಅವರು, ದೇಶದ ಅಭಿವೃದ್ಧಿಗಾಗಿ, ಭವಿಷ್ಯದ ಪೀಳಿಗೆಗೆ ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸಲು ರಾಮ ಜನ್ಮಭೂಮಿ ಅಭಿಯಾನ ಅಗತ್ಯವಾಗಿತ್ತು ಎಂದು ಯೋಗಿ ಹೇಳಿದರು.
ಭಾರತದ ಪ್ರಧಾನಿ ಜಗತ್ತಿನಲ್ಲೇ ಪ್ರಭಾವಶಾಲಿ ನಾಯಕ: ಮೋದಿಯನ್ನು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್
2027 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಮತ್ತು 2047 ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶ ಕೆಲಸ ಮಾಡಲೇಬೇಕು. ಈ ಹಿನ್ನೆಲೆಯಲ್ಲಿಯೇ ಉತ್ತರ ಪ್ರದೇಶ ವಿಧಾನಸಭೆಯು ಆಗಸ್ಟ್‌ನಲ್ಲಿ 27 ಗಂಟೆಗಳ ಕಾಲ ನಿರಂತರ ಚರ್ಚೆ ನಡೆಸಿ ಒಂದು ದೃಷ್ಟಿಕೋನವನ್ನು ರೂಪಿಸಿದೆ. ಇದರ ಪ್ರಕಾರ 2029- 30 ರ ವೇಳೆಗೆ ಉತ್ತರ ಪ್ರದೇಶವು 1 ಟ್ರಿಲಿಯನ್ ಡಾಲರ್ ಮತ್ತು 2047 ರ ವೇಳೆಗೆ 6 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.