ಬೆಂಗಳೂರು: ಭಾರತೀಯ ಇತಿಹಾಸದಲ್ಲಿ(Indian Histrory) ಜ್ಞಾನ, ತತ್ವ, ರಾಜತಾಂತ್ರಿಕತೆ ಮತ್ತು ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಅಗ್ರ ಸ್ಥಾನ ಪಡೆದಿರುವ ವ್ಯಕ್ತಿ ಎಂದರೆ ಆಚಾರ್ಯ ಚಾಣಕ್ಯ (Acharya Chanakya). ನುರಿತ ರಾಜತಾಂತ್ರಿಕರು, ತೀಕ್ಷ್ಣ ಬುದ್ಧಿಯ ತಂತ್ರಜ್ಞರು, ಪ್ರಸಿದ್ಧ ಗುರು ಮತ್ತು ಸಮರ್ಥ ಅರ್ಥಶಾಸ್ತ್ರಜ್ಞ ಚಾಣಕ್ಯರು ರಚಿಸಿದ ಚಾಣಕ್ಯ ನೀತಿ (Chanakya Niti) ಶತಮಾನಗಳಿಂದಲೂ ಜನರಿಗೆ ಮಾರ್ಗದರ್ಶನ ಮಾಡುತ್ತಿರುವ ಮಹತ್ವದ ಗ್ರಂಥವಾಗಿದೆ.
ಜೀವನದಲ್ಲಿ ಎದುರಾಗುವ ಸವಾಲುಗಳು, ವೈಯಕ್ತಿಕ ಸಂಬಂಧಗಳು, ಉದ್ಯೋಗ ಮತ್ತು ಹಣಕಾಸು ಸಮಸ್ಯೆಗಳಿಂದ ಹಿಡಿದು, ಯಶಸ್ಸು, ವೈಫಲ್ಯ ಮತ್ತು ಮಾನವೀಯ ಗುಣಗಳವರೆಗೂ ಚಾಣಕ್ಯರು ತಮ್ಮ ನೀತಿಗಳ ಮೂಲಕ ಅನೇಕ ಸೂತ್ರಗಳನ್ನು ವಿವರಿಸಿದ್ದಾರೆ. ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲೂ ಈ ತತ್ವಗಳು ಪ್ರಸ್ತುತವಾಗಿವೆ. ಪ್ರತಿಯೊಬ್ಬರೂ ಯಶಸ್ಸನ್ನು ಬಯಸುವರೇ. ಆದರೆ ಅಡೆತಡೆಗಳು ಎದುರಾದಾಗ ಅಥವಾ ಕನಸುಗಳು ತಡವಾದಾಗ ಅನೇಕರಲ್ಲಿ ನಿರಾಸೆ ಮೂಡುತ್ತದೆ. ಈ ಸಂದರ್ಭದಲ್ಲಿ ಚಾಣಕ್ಯರ ಮಾರ್ಗದರ್ಶನವು ಯಶಸ್ಸಿಗೆ ದಿಕ್ಕು ತೋರುವ ದಾರಿ ದೀಪವಾಗುತ್ತದೆ.
ಇಂತಹ ಅಮೂಲ್ಯ ಗ್ರಂಥದಲ್ಲಿ ಹೇಳಲಾದ ಕೆಲವು ಪ್ರಮುಖ ತತ್ವಗಳು ಇಂದಿಗೂ ಜನರನ್ನು ಸ್ಫೂರ್ತಿ ನೀಡುತ್ತಿದ್ದು, ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದ ಕೆಲವು ಪ್ರಮುಖ ಸಲಹೆಗಳು ಈ ಕೆಳಗಿನಂತಿವೆ.
ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ
ಮಾನವನ ವ್ಯಕ್ತಿತ್ವದಲ್ಲಿ ದೌರ್ಬಲ್ಯಗಳು ಸಹಜ. ಆದರೆ ಚಾಣಕ್ಯ ಪ್ರಕಾರ, ಅವನ್ನು ಬಹಿರಂಗಪಡಿಸುವುದು ಸೂಕ್ತವಲ್ಲ. ಏಕೆಂದರೆ ಇತರರು ನಿಮ್ಮ ದೌರ್ಬಲ್ಯವನ್ನು ಅಸ್ರ್ತ್ರವನ್ನಾಗಿ ಬಳಸಿಕೊಂಡು ಪಿತೂರಿ ಮಾಡಬಹುದು. ಅಲ್ಲದೇ ಇನ್ನೊಬ್ಬ ವ್ಯಕ್ತಿ ಆ ದೌರ್ಬಲ್ಯವನ್ನು ಬೇರೆಯವರ ಬಳಿಯೂ ಹೇಳುವ ಸಾಧ್ಯತೆ ಇದ್ದು ಅದು ದುರುಪಯೋಗಗೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಲಿದ್ದು, ಅವಮಾನಕ್ಕೆ ಈಡಾಗಬೇಕಾಗುತ್ತದೆ.
ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ
ಚಾಣಕ್ಯರು ಅರ್ಥಶಾಸ್ತ್ರದ ತಜ್ಞರಾಗಿದ್ದು, ಹಣದ ಬಳಕೆ ಬಗ್ಗೆ ಅನೇಕ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಲು ಹಣ ಉಳಿಸುವುದು ಅತ್ಯಂತ ಮುಖ್ಯ. ಆದ್ದರಿಂದ ಮನೆ, ಉದ್ಯೋಗ ಅಥವಾ ವ್ಯವಹಾರದಲ್ಲಿ ನೋಡಿ ಖರ್ಚು ಮಾಡುವಂತೆ ಹೇಳಿದ್ದು, ಹಣವನ್ನು ಸಮರ್ಥವಾಗಿ ಬಳಸಬೇಕು. ಅನಗತ್ಯ ಖರ್ಚುಗಳನ್ನೆಲ್ಲ ಕಡಿಮೆ ಮಾಡಿ, ಉಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.
ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ದುರಾದೃಷ್ಟ, ದಾರಿದ್ರ್ಯ ಕಾಡಲಿದೆ
ಮೂರ್ಖರೊಂದಿಗೆ ವಾದ ಮಾಡಬೇಡಿ
ಚಾಣಕ್ಯರು ವಾದ-ವಿವಾದಗಳ ಬಗ್ಗೆ ನೀಡಿದ ಸಲಹೆಗಳು ಅತ್ಯಂತ ಸ್ಪಷ್ಟ. ಜ್ಞಾನವಿಲ್ಲದವರೊಂದಿಗೆ ವಾದ ಮಾಡುವುದೇ ವ್ಯರ್ಥ. ಏನೂ ಪ್ರಯೋಜನವಾಗದೆ, ಸಮಯ, ಶಕ್ತಿಯ ನಷ್ಟವಾಗುತ್ತದೆ. ಅಲ್ಲದೆ ಇಂತಹ ವಾದಗಳಿಂದ ನಿಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದ್ದು, ಅನಗತ್ಯ ಕೋಪ ಮತ್ತು ಒತ್ತಡವನ್ನು ಹೆಚ್ಚಿಸುತ್ತವೆ. ಆದ್ದರಿಂದ ಅರ್ಥಪೂರ್ಣ ಚರ್ಚೆಗಳಿಗಷ್ಟೇ ಸಮಯ ನೀಡಿ ಎಂದು ಅವರು ಸಲಹೆ ನೀಡುತ್ತಾರೆ.
ನಂಬಿಕೆಗೆ ಅರ್ಹರಲ್ಲದವರನ್ನು ದೂರವಿರಿಸಿ
ಚಾಣಕ್ಯರ ಪ್ರಕಾರ, ನಿಮ್ಮ ನೋವನ್ನು, ಸೋಲನ್ನು ನೋಡಿ ಸಂತೋಷಪಡುವವರು ಅಥವಾ ನಿಮ್ಮ ಮಾತುಗಳನ್ನು ನಿರ್ಲಕ್ಷಿಸುವವರು ನಿಮ್ಮ ನಂಬಿಕೆಗೆ ಅರ್ಹರಲ್ಲ. ಇಂತಹ ಜನರು ನಿಮ್ಮ ಜೀವನದಲ್ಲಿ ತೊಂದರೆಗಳನ್ನು ಉಂಟು ಮಾಡುವುದೇ ಸಾಧ್ಯತೆ ಹೆಚ್ಚು. ಅವರ ಅಸೂಯೆ, ಅಹಂಕಾರ ಅಥವಾ ಕೆಟ್ಟ ಮನಸ್ಥಿತಿ ನಿಮ್ಮ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯಾರು ನಂಬಿಕೆಗೆ ಅರ್ಹರು, ಯಾರು ಅನರ್ಹರು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.
ನಿಮ್ಮ ಗುರಿ ಮತ್ತು ಕನಸುಗಳನ್ನು ಯಾರಿಗೂ ಹೇಳಬೇಡಿ
ಯಶಸ್ಸಿನ ಮಾರ್ಗದಲ್ಲಿ ಯೋಜನೆ, ತಂತ್ರ ಮತ್ತು ಸಮಯ ನಿರ್ವಹಣೆ ಮುಖ್ಯ. ಚಾಣಕ್ಯರು ಹೇಳುವುದೇನೆಂದರೆ, ಗುರಿಯನ್ನು ಸಮಯಕ್ಕಿಂತ ಮೊದಲು ಬಹಿರಂಗಪಡಿಸುವುದು ಅಡೆತಡೆಗಳಿಗೆ ಕಾರಣವಾಗಬಹುದು. ಕೆಲವರು ನಿಮ್ಮ ಸಾಧನೆಗೆ ಸಹಕರಿಸಬಹುದು. ಆದರೆ ಕೆಲವರು ಅಡ್ಡಿಪಡಿಸಬಹುದು. ಆದ್ದರಿಂದ ಗುರಿಯನ್ನು ಸಾಧಿಸುವ ತನಕ ಅದು ನಿಮ್ಮೊಳಗೇ ಉಳಿದರೆ ಒಳ್ಳೆಯದು ಚಾಣಕ್ಯರು ಹೇಳಿದ್ದು, ಅದಕ್ಕೆ ಬೇಕಾದ ಶ್ರದ್ಧೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಒಟ್ಟಾರೆ ಚಾಣಕ್ಯ ನೀತಿ ಕೇವಲ ತತ್ವಶಾಸ್ತ್ರವಲ್ಲ, ಅದು ನೂರಾರು ವರ್ಷಗಳ ಜ್ಞಾನ ಮತ್ತು ಅನುಭವದಿಂದ ಹೊರಬಂದ ಜೀವನ ಪಾಠ. ಇಂದಿನ ಸಂದರ್ಭದಲ್ಲಿ ಯುವಕರಿಂದ ಉದ್ಯೋಗಸ್ಥರ ತನಕ, ವೃತ್ತಿಜೀವನದಿಂದ ವೈಯಕ್ತಿಕ ಜೀವನದವರೆಗೂ, ಈ ತತ್ವಗಳನ್ನು ಅನುಸರಿಸಿದರೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸರಿಯಾದ ಆಯ್ಕೆಗಳನ್ನು ಮಾಡಲು ಮತ್ತು ಯಶಸ್ಸಿನತ್ತ ಸಾಗಲು ಸಹಾಯವಾಗುತ್ತದೆ.