ಬೆಂಗಳೂರು: ನವರಾತ್ರಿಯ (Navaratri 2025) ಎಂಟನೇ ದಿನ ಸೋಮವಾರ ಮಹಾ ಅಷ್ಟಮಿ (Maha astami). ಈ ದಿನ ಪಾರ್ವತಿ ದೇವಿಯ (Parvati Devi) ಸೌಮ್ಯ, ಶಾಂತ ರೂಪವಾದ ಮಹಾಗೌರಿಯನ್ನು (Maha Gauri) ಆರಾಧಿಸಲಾಗುತ್ತದೆ. ಮಹಾಗೌರಿಯು 16ನೇ ವಯಸ್ಸಿನವಳಾಗಿದ್ದು ಗೂಳಿ ಮೇಲೆ ಕುಳಿತು ಸವಾರಿ ಮಾಡುತ್ತಾಳೆ. ಈಕೆಯ ಕೈಗಳಲ್ಲಿ ತ್ರಿಶೂಲ ಮತ್ತು ಢಮರು ಹಿಡಿದಿದ್ದಾಳೆ. ಆಕೆಯ ಇನ್ನೆರಡು ಕೈಗಳು ಅಭಯ ಮುದ್ರೆಯಲ್ಲಿದೆ. ಗೌರಿ ಎಂದರೆ ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಮಹಾಗೌರಿಯು ಬಿಳಿ ವರ್ಣದ ಸೀರೆ ಉಟ್ಟಿರುತ್ತಾಳೆ. ಆಕೆಯ ಮುಖವು ಹೊಳೆಯುವ ಚಂದ್ರನಂತೆ ತಂಪಾಗಿರುತ್ತದೆ. ಇವಳನ್ನು ಪೂಜಿಸುವುದರಿಂದ ಪಾಪಗಳು ನಾಶವಾಗುತ್ತದೆ, ದುಃಖಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
ಹಿನ್ನೆಲೆ
ಮಾನವ ರೂಪದಲ್ಲಿ ಜನ್ಮ ತಾಳಿದ ಪಾರ್ವತಿ ದೇವಿಗೆ ಶಿವನ್ನು ಪಡೆಯುವುದೇ ಗುರಿಯಾಗಿತ್ತು. ನಾರದ ಮುನಿಗಳ ಸಲಹೆಯಂತೆ ದೇವಿಯು ಕಠಿಣ ತಪಸ್ಸನ್ನು ಮಾಡುತ್ತಾಳೆ. ಈ ವೇಳೆ ಅನ್ನಾಹಾರ, ನೀರನ್ನು ಕೂಡ ತ್ಯಜಿಸುತ್ತಾಳೆ. ಧೂಳು, ಸೂರ್ಯನ ಬಿಸಿಲಿಗೆ ಒಡ್ಡಿ ಆಕೆಯ ದೇಹ ಸಂಪೂರ್ಣ ಕಪ್ಪಾಗುತ್ತದೆ. ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಸಂತುಷ್ಟನಾದ ಶಿವ ಈಕೆಯನ್ನು ಮೊದಲಿನಂತೆ ಮಾಡಲು ಗಂಗೆಯ ಪವಿತ್ರ ಜಲವನ್ನು ಎರೆಯುತ್ತಾನೆ. ಇದರಿಂದ ಆಕೆ ಕಾಂತಿ ಪಡೆದು ಹೊಳೆಯತೊಡಗಿದಳು. ಬಳಿಕ ಆಕೆಯು ಮಹಾಗೌರಿ ಹೆಸರನ್ನು ಪಡೆದಳು. ಶಿವನು ಆಕೆಯ ತಪಸ್ಸಿಗೆ ಮೆಚ್ಚಿ ವಿವಾಹವಾಗುತ್ತಾನೆ.
ಇನ್ನೊಂದು ಕಥೆಯಲ್ಲಿ ತಪಸ್ಸು ಮಾಡುತ್ತಿದ್ದ ಗೌರಿಯ ಬಳಿ ಹಸಿದಿದ್ದ ಸಿಂಹವೊಂದು ಬಂದು ಆಕೆ ತಪಸ್ಸು ಮಾಡುತ್ತಿರುವುದನ್ನು ನೋಡಿ ಅಲ್ಲೇ ಕುಳಿತಿತು. ಗೌರಿ ಕಣ್ಣು ಬಿಟ್ಟಾಗ ಬಡಕಲಾಗಿದ್ದ ಸಿಂಹವನ್ನು ನೋಡಿ ಕರಗಿದಳು. ಹಸಿದಿದ್ದರೂ ತನ್ನ ತಪಸ್ಸಿಗೆ ಭಂಗವಾಗದಂತೆ ಸಿಂಹವನ್ನು ಗೌರಿಯು ತನ್ನ ವಾಹನವನ್ನಾಗಿ ಮಾಡಿಕೊಂಡಳು. ಹೀಗೆ ಗೌರಿಗೆ ಸಿಂಹ ಮತ್ತು ಎತ್ತು ಎರಡು ವಾಹನಗಳಾಗಿವೆ.
ಆರಾಧನೆಯಿಂದ ಏನು ಫಲ?
ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ. ಸಮೃದ್ಧಿ ಹಾಗೂ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ. ಮನಸ್ಸಿನಲ್ಲಿರುವ ಗೊಂದಲ ನಿವಾರಣೆಯಾಗುತ್ತದೆ. ಯಶಸ್ವಿ ಜೀವನ ನಡೆಸಲು ಶಕ್ತಿ ತುಂಬುತ್ತದೆ. ಸಂಪತ್ತು, ಆಯುಷ್ಯ ವೃದ್ಧಿಯಾಗುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: Fire Accident: ಶಾರ್ಟ್ ಸರ್ಕ್ಯೂಟ್‌ನಿಂದ ಫ್ಲ್ಯಾಟ್‌ನಲ್ಲಿ ಬೆಂಕಿ; ಬಾಲಿವುಡ್ ಬಾಲ ಕಲಾವಿದ, ಸಹೋದರ ಸಾವು
ಮಹಾಗೌರಿ ದೇವಾಲಯ
ಕರ್ನಾಟಕದಲ್ಲಿ ಸುಪ್ರಸಿದ್ದ ಕಾತ್ಯಾಯಿನಿ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಕರಾವಳಿ ಪಟ್ಟಣವಾದ ಅವೆರ್ಸಾದಲ್ಲಿದೆ. ಶ್ರೀ ಕಾತ್ಯಾಯಿನಿ ಬಾಣೇಶ್ವರ ದೇವಾಲಯವು ಮಹಾ ಗೌರಿಗೆ ಸಮರ್ಪಿತವಾಗಿದೆ.