ಬೆಂಗಳೂರು: 2026ರ ಮೊದಲ ಸೂರ್ಯಗ್ರಹಣ ಈಗಾಗಲೇ ಮುಕ್ತಾಯಗೊಂಡಿದ್ದು, ಇದೀಗ ವರ್ಷದ ಮೊದಲ ಚಂದ್ರಗ್ರಹಣ (Chandra Grahana) ಮಾರ್ಚ್ 3, ಅಂದರೆ ಇಂದು ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಈ ಗ್ರಹಣವು ಸಿಂಹ ರಾಶಿ ಮತ್ತು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ. ಚಂದ್ರಗ್ರಹಣವು ಭೂಮಿ ಸೂರ್ಯ ಮತ್ತು ಚಂದ್ರನ ಮಧ್ಯೆ ಬಂದಾಗ ಸಂಭವಿಸುವ ಖಗೋಳೀಯ ಘಟನೆ. ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ವಿಜ್ಞಾನ ಪ್ರಕಾರ ಇದು ಸಹಜ ಖಗೋಳ ಪ್ರಕ್ರಿಯೆಯಾದರೂ, ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳಲ್ಲಿ ಇದಕ್ಕೆ ವಿಶೇಷ ಮಹತ್ವ ನೀಡಲಾಗಿದೆ.
ಅಲ್ಲದೇ ಹಿಂದೂ ಧರ್ಮಗ್ರಂಥಗಳಲ್ಲಿ ಚಂದ್ರಗ್ರಹಣವನ್ನು ಸಂವೇದನಾಶೀಲ ಕಾಲವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಮಾನಸಿಕ ಶಾಂತಿ, ಪ್ರಾರ್ಥನೆ ಮತ್ತು ನಿಯಮ ಪಾಲನೆಗೆ ಆದ್ಯತೆ ನೀಡಬೇಕೆಂದು ಪುರಾಣಗಳು ಸೂಚಿಸುತ್ತವೆ.
ಹಾಗಾದ್ರೆ ಬನ್ನಿ ಗ್ರಹಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳೇನು..? ಯಾವ ಕೆಲಸಗಳನ್ನು ಮಾಡಬಾರದು..? ಎಂಬುದನ್ನು ತಿಳಿದುಕೊಳ್ಳೋಣಾ
ವಿಗ್ರಹಗಳಿಗೆ ಸ್ಪರ್ಶ ಮಾಡಬೇಡಿ
ಗ್ರಹಣದ ಸಮಯದಲ್ಲಿ ದೇವರ ವಿಗ್ರಹಗಳನ್ನು ಮುಟ್ಟಬಾರದು ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮನೆಯ ಪೂಜಾ ಸ್ಥಳವನ್ನು ಬಟ್ಟೆ ಅಥವಾ ಪರದೆಗಳಿಂದ ಮುಚ್ಚಬೇಕು ಎಂಬ ಸಲಹೆ ನೀಡಲಾಗುತ್ತದೆ. ಇದೇ ಕಾರಣದಿಂದ ದೇವಾಲಯಗಳ ಬಾಗಿಲುಗಳನ್ನೂ ಗ್ರಹಣ ಅವಧಿಯಲ್ಲಿ ಮುಚ್ಚಲಾಗುತ್ತದೆ.
ಆಹಾರ ಸೇವನೆ ತಪ್ಪಿಸಿ
ಗ್ರಹಣ ಸಮಯದಲ್ಲಿ ಆಹಾರ ಹಾಗೂ ಪಾನೀಯ ಸೇವನೆಯನ್ನು ತಪ್ಪಿಸುವುದು ಉತ್ತಮ ಎಂದು ಹೇಳಲಾಗಿದೆ. ಅಗತ್ಯವಿದ್ದಲ್ಲಿ ತುಳಸಿ ಎಲೆ ಹಾಕಿದ ನೀರನ್ನು ಮಾತ್ರ ಸೇವಿಸಬಹುದು. ಆದರೆ ಗರ್ಭಿಣಿಯರು, ಮಕ್ಕಳು ಹಾಗೂ ವೃದ್ಧರಿಗೆ ವಿನಾಯಿತಿ ನೀಡಲಾಗಿದೆ. ಈ ಸಮಯದಲ್ಲಿ ಹೊರಗಿನವರಿಂದ ಯಾವುದೇ ವಸ್ತುಗಳನ್ನು ಸ್ವೀಕರಿಸದಿರುವುದು ಒಳಿತು ಎಂದು ಹೇಳಲಾಗಿದೆ.
ಗರ್ಭಿಣಿಯರಿಗಾಗಿ ವಿಶೇಷ ಸೂಚನೆ
ಚಂದ್ರಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಹೊರಗೆ ಹೋಗುವುದನ್ನು ಅಥವಾ ಗ್ರಹಣದ ನೆರಳಿಗೆ ಒಳಪಡುವುದನ್ನು ತಪ್ಪಿಸಬೇಕು ಎಂಬ ನಂಬಿಕೆ ಇದೆ. ಇದು ಭ್ರೂಣದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಗರ್ಭಿಣಿಯರು ತೆಂಗಿನಕಾಯಿ ಹತ್ತಿರ ಇಟ್ಟುಕೊಂಡು ವಿಶ್ರಾಂತಿ ಪಡೆಯುವ ಪದ್ಧತಿಯೂ ಇದೆ.
ದೈಹಿಕ ನಿಯಮಗಳು
ಧರ್ಮಗ್ರಂಥಗಳ ಪ್ರಕಾರ, ಗ್ರಹಣ ಅವಧಿಯಲ್ಲಿ ದೈಹಿಕ ಸಂಪರ್ಕವನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಗರ್ಭಧಾರಣೆ ಆಗುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ಶ್ರೇಯಸ್ಕರ ಎಂದು ನಂಬಲಾಗಿದೆ.
ವೃದ್ಧರು ಮತ್ತು ಅಶಕ್ತರ ಕಡೆ ಗಮನ
ಗ್ರಹಣದ ಸಮಯದಲ್ಲಿ ಮನೆಯಲ್ಲಿರುವ ವೃದ್ಧರು ಮತ್ತು ಅಶಕ್ತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾರನ್ನೂ ಅವಮಾನಿಸದೆ ಸಹಾಯ ಮಾಡುವುದನ್ನು ಶ್ರೇಷ್ಠ ಕರ್ಮವೆಂದು ಪರಿಗಣಿಸಲಾಗಿದೆ. ಗ್ರಹಣದ ವೇಳೆ ನಿರ್ಜನ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ.
ಶುಭ ಕಾರ್ಯಗಳನ್ನು ಮುಂದೂಡಿ
ಗ್ರಹಣದ ಸಮಯದಲ್ಲಿ ಯಾವುದೇ ಶುಭಕಾರ್ಯಗಳನ್ನು ಕೈಗೊಳ್ಳಬಾರದು ಎಂದು ಹೇಳಲಾಗಿದೆ. ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು, ಹೊಲಿಗೆ ಅಥವಾ ಅಡುಗೆ ಮಾಡುವುದು ಬಾಹಿರವಾಗಿದ್ದು, ಈ ವೇಳೆ ದಾನ ಮಾಡುವುದನ್ನು ಉತ್ತಮ ಕಾರ್ಯವೆಂದು ಪರಿಗಣಿಸಲಾಗಿದೆ.