ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lunar Eclipse 2026: ಹೋಳಿ ದಿನವೇ 2026ರ ಮೊದಲ ಚಂದ್ರ ಗ್ರಹಣ: ಭಾರತದಲ್ಲಿ ಎಷ್ಟು ಹೊತ್ತು ಗೋಚರಿಸಲಿದೆ? ಪಾಲಿಸಬೇಕಾದ ನಿಯಮಗಳು ಏನು? ಇಲ್ಲಿದೆ ಮಾಹಿತಿ

2026ರ ಮೊದಲ ಚಂದ್ರಗ್ರಹಣವು ಮಾರ್ಚ್ 3ರಂದು ಹೋಳಿ ಹಬ್ಬದ ದಿನವೇ ಸಂಭವಿಸಲಿದೆ. ಅಪರಾಹ್ನ 3:20ರಿಂದ ಸಂಜೆ 6:47ರವರೆಗೆ ಗ್ರಹಣ ನಡೆಯಲಿದೆ. ಭಾರತದಲ್ಲಿ ಚಂದ್ರೋದಯದ ಸಮಯದ ಕಾರಣದಿಂದ ಅಂತಿಮ ಹಂತ ಮಾತ್ರ ಸುಮಾರು 25–30 ನಿಮಿಷಗಳವರೆಗೆ ಗೋಚರಿಸಲಿದೆ. ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಹೆಚ್ಚು ಅವಧಿ ಕಾಣುವ ಸಾಧ್ಯತೆ ಇದೆ. ಗ್ರಹಣದ 9 ಗಂಟೆಗಳ ಮೊದಲು ಸೂತಕ ಕಾಲ ಪ್ರಾರಂಭವಾಗುತ್ತಿದ್ದು, ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ನಡೆಸುವಂತಿಲ್ಲ.

ಹೋಳಿ ದಿನವೇ 2026ರ ಮೊದಲ ಚಂದ್ರಗ್ರಹಣ

ಚಂದ್ರ ಗ್ರಹಣ (ಸಂಗ್ರಹ ಚಿತ್ರ) -

Profile
Sushmitha Jain Mar 3, 2026 8:00 AM

ಬೆಂಗಳೂರು, ಮಾ. 3: ಭಾರತದಲ್ಲಿ ಚಂದ್ರ ಗ್ರಹಣವು ಧಾರ್ಮಿಕ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ. 2026ರ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಪೂರ್ಣಿಮೆಯಂದು, ಅಂದರೆ ಮಾರ್ಚ್ 3ರಂದು ಸಂಭವಿಸಲಿದೆ (Lunar Eclipse 2026). ವಿಶೇಷವೆಂದರೆ, ಇದೇ ದಿನ ಬಣ್ಣಗಳ ಹಬ್ಬ ಹೋಳಿ ಆಚರಿಸಲಾಗುತ್ತದೆ. ಈ ಬಾರಿ ಸಂಭವಿಸುವುದು ಪೆನುಂಬ್ರಲ್ ಚಂದ್ರ ಗ್ರಹಣವಾಗಿದ್ದು, ಗ್ರಹಣದ ದೃಶ್ಯ ಭಾರತದಲ್ಲಿ ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ.

ಗ್ರಹಣದ ಸಮಯ

ಮಾರ್ಚ್ 3ರಂದು ಅಪರಾಹ್ನ 3:20ಕ್ಕೆ ಗ್ರಹಣ ಪ್ರಾರಂಭವಾಗಲಿದೆ. ಸಂಜೆ 6:47ಕ್ಕೆ ಇದು ಮುಕ್ತಾಯಗೊಳ್ಳಲಿದೆ. ಒಟ್ಟು ಅವಧಿ 3 ಗಂಟೆ 27 ನಿಮಿಷಗಳಾಗಿರುತ್ತದೆ. ಸಂಪೂರ್ಣ ಖಗ್ರಾಸ ಹಂತ ಸಂಜೆ 4:34ರ ಸುಮಾರಿಗೆ ಸಂಭವಿಸಲಿದೆ.

ಭಾರತದಲ್ಲಿ ಗೋಚರತೆ

ಗ್ರಹಣದ ದಿನ ಭಾರತದಲ್ಲಿ ಚಂದ್ರೋದಯ ಸಂಜೆ 6:22ಕ್ಕೆ ಸಂಭವಿಸುತ್ತದೆ. ಗ್ರಹಣವು 6:47ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ದೇಶದ ಬಹುತೇಕ ಭಾಗಗಳಲ್ಲಿ ಸುಮಾರು 20ರಿಂದ 30 ನಿಮಿಷಗಳವರೆಗೆ ಮಾತ್ರ ಗ್ರಹಣದ ಅಂತಿಮ ಹಂತ ಗೋಚರಿಸಲಿದೆ. ಇದು ‘ಗ್ರಸ್ತೋದಯ’ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಚಂದ್ರನು ಉದಯಿಸುವಾಗಲೇ ಗ್ರಹಣ ನಡೆಯುತ್ತಿರುವ ಸ್ಥಿತಿಯಲ್ಲಿರುತ್ತಾನೆ.

ಶಿವ ಆರಾಧನೆಗೆ ಸೋಮವಾರ ಶ್ರೇಷ್ಠ; ಈ ನಿಯಮ ಪಾಲಿಸಿ ಉಪವಾಸ ವ್ರತ ಮಾಡಿದರೆ ಈಶ್ವರನ ಅನುಗ್ರಹ ಖಚಿತ!

ದೆಹಲಿಯು, ಮುಂಬೈ ಹಾಗೂ ಉತ್ತರ ಭಾರತದ ಹಲವೆಡೆ 25ರಿಂದ 35 ನಿಮಿಷಗಳವರೆಗೆ ದೃಶ್ಯ ಲಭ್ಯವಾಗಬಹುದು. ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚು ಅವಧಿ, ಅಂದಾಜು 50ರಿಂದ 60 ನಿಮಿಷಗಳವರೆಗೆ ಗ್ರಹಣವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಎಲ್ಲೆಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ?

ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಈಶಾನ್ಯ ಭಾಗಗಳಲ್ಲಿ ಗ್ರಹಣದ ಕೊನೆಯ ಹಂತ ಸ್ಪಷ್ಟವಾಗಿ ಗೋಚರಿಸಲಿದೆ. ಉಳಿದ ರಾಜ್ಯಗಳಲ್ಲಿ ಖಗ್ರಾಸ ಹಂತ ಕಾಣಿಸದೇ, ಅಂತಿಮ ಹಂತ ಮಾತ್ರ ವೀಕ್ಷಣೆಗೆ ಲಭ್ಯವಾಗಲಿದೆ.

ಸೂತಕ ಕಾಲದ ನಿಯಮಗಳು

ಚಂದ್ರ ಗ್ರಹಣದ ಸೂತಕ ಅವಧಿ ಗ್ರಹಣ ಆರಂಭಕ್ಕೂ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಹೀಗಾಗಿ, ಮಾರ್ಚ್ 3ರಂದು ಬೆಳಿಗ್ಗೆ 6:20ರಿಂದಲೇ ಸೂತಕ ಜಾರಿಯಾಗಲಿದೆ. ಈ ಅವಧಿಯಲ್ಲಿ ದೇವಾಲಯಗಳ ಬಾಗಿಲುಗಳನ್ನು ಮುಚ್ಚುವುದು, ಪೂಜೆ ಹಾಗೂ ಶುಭಕಾರ್ಯಗಳನ್ನು ನಿರ್ವಹಿಸದಿರುವುದು ಸಂಪ್ರದಾಯ.

ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ವಿಗ್ರಹಗಳನ್ನು ಮುಚ್ಚಿಡುವುದು, ಆಹಾರದ ಮೇಲೆ ತುಳಸಿ ಅಥವಾ ಕುಶ ಹುಲ್ಲು ಇಡುವುದು, ಗ್ರಹಣ ಸಮಯದಲ್ಲಿ ನಿದ್ರೆ ಮಾಡದಿರುವುದು ಮುಂತಾದ ಆಚರಣೆಗಳನ್ನು ಅನುಸರಿಸಲಾಗುತ್ತದೆ. ಆದಾಗ್ಯೂ, ಜಪ, ಧ್ಯಾನ ಹಾಗೂ ಪ್ರಾರ್ಥನೆಗಳನ್ನು ಈ ಅವಧಿಯಲ್ಲಿ ಮಾಡಬಹುದು ಎಂದು ಹೇಳಲಾಗಿದೆ. ಒಟ್ಟಾರೆ, ಹೋಳಿ ದಿನದಂದು ಸಂಭವಿಸುವ ಈ ಅಪರೂಪದ ಚಂದ್ರಗ್ರಹಣವು ಧಾರ್ಮಿಕ ಭಾವನೆಗಳ ಜತೆಗೆ ಕುತೂಹಲಕ್ಕೂ ಕಾರಣವಾಗಲಿದೆ.