ಬೆಂಗಳೂರು: ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿಯನ್ನು (Ganesha Festival) ದೇಶಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಇದೇ ದಿನ ವಿಘ್ನವಿನಾಶಕ ಗಣೇಶನ ಅವತಾರವಾಯಿತು ಎನ್ನಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿಯಂದು ಮನೆಗಳನ್ನು ಅಲಂಕರಿಸಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವವರು ಪೂಜೆಯ ಜೊತೆಗೆ ಕೆಲವು ವಸ್ತುಗಳನ್ನು ಗಣೇಶನ ಸನ್ನಿಧಿಯಲ್ಲಿ ಇಡುವುದು ಮಂಗಳಕರವೆಂದು ವಾಸ್ತು ಹಾಗೂ ಧಾರ್ಮಿಕ ನಂಬಿಕೆಗಳಲ್ಲಿ ಹೇಳಲಾಗಿದೆ. ಇವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ, ಸಂತೋಷ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಗಣೇಶ ಚತುರ್ಥಿಯಂದು ವಾಸ್ತು ಶಾಸ್ತ್ರದ ಸಲಹೆಯಂತೆ (Vastu Tips) ಮನೆಗೆ ತರಬಹುದಾದ ಆ ಶುಭ ವಸ್ತುಗಳು ಯಾವುವು? ಇಲ್ಲಿದೆ ಮಾಹಿತಿ.
ಲಕ್ಷ್ಮೀ ಗಣಪತಿ
ಗಣೇಶನೊಂದಿಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮೀ ದೇವಿಯ ವಿಗ್ರಹವನ್ನು ಗಣೇಶನ ಪಕ್ಕದಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗಿ, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ಯಾವುದೇ ಶುಭ ಕಾರ್ಯಕ್ಕೂ ಮುನ್ನ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಗಣೇಶನ ಆರಾಧನೆಯಿಂದ ವಿಘ್ನಗಳು ದೂರವಾಗುತ್ತವೆ ಎಂಬ ನಂಬಿಕೆಯಿದ್ದು, ಲಕ್ಷ್ಮೀ ದೇವಿಯ ಅನುಗ್ರಹವೂ ದೊರೆತರೆ ಜೀವನದಲ್ಲಿ ಶುಭ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಗಣೇಶ ಚತುರ್ಥಿಯಂದು ಲಕ್ಷ್ಮೀ ಸಮೇತ ಗಣೇಶನನ್ನು ಪೂಜಿಸುವುದು ವಿಶೇಷವೆಂದು ಪರಿಗಣಿಸಲಾಗಿದೆ.
ಸ್ಪಟಿಕ
ಗಣೇಶ ಚತುರ್ಥಿಯಂದು ಮನೆಗೆ ಸ್ಪಟಿಕವನ್ನು ತಂದು ಗಣೇಶನ ಮುಂದೆ ಇಟ್ಟು ಪೂಜಿಸುವುದು ಶುಭಕರವೆಂದು ವಾಸ್ತು ನಂಬಿಕೆ ಹೇಳುತ್ತದೆ. ಸ್ಪಟಿಕವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ.
ಗಣೇಶನ ಸನ್ನಿಧಿಯಲ್ಲಿ ಸ್ಪಟಿಕವನ್ನು ಇಟ್ಟು ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜೊತೆಗೆ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ ಹಾಗೂ ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎಂದು ನಂಬಲಾಗುತ್ತದೆ. ಗ್ರಹಬಲ ಹೆಚ್ಚಿಸಲು ಸಹ ಇದು ಸಹಕಾರಿ ಎಂಬ ನಂಬಿಕೆ ಇದೆ.
Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ಕವಡೆ
ಕವಡೆಯನ್ನು ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಕವಡೆಯನ್ನು ಮನೆಗೆ ತಂದು ಗಣೇಶನ ಪೂಜೆಯಲ್ಲಿ ಬಳಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ವೃತ್ತಿ ಜೀವನದಲ್ಲಿ ಎದುರಾಗುವ ಅಡೆತಡೆಗಳು, ಕೆಲಸದ ಒತ್ತಡ ಹಾಗೂ ಸಮಸ್ಯೆಗಳು ದೂರವಾಗಿ ಪ್ರಗತಿ ಸಾಧಿಸಲು ಇದು ಶುಭಕರವೆಂದು ವಾಸ್ತು ನಂಬಿಕೆ ಹೇಳುತ್ತದೆ. ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವವರು ಪೂಜೆಯ ವೇಳೆ ಕವಡೆಯನ್ನು ಇಟ್ಟು ಆರಾಧಿಸಬಹುದು.
ಕಮಲದ ಬೀಜ
ಕಮಲವು ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದದ್ದು ಎಂದು ನಂಬಲಾಗುತ್ತದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಹಾಗೂ ಹೋಮಗಳಲ್ಲಿ ಕಮಲದ ಬೀಜಗಳನ್ನು ಬಳಸುವ ಸಂಪ್ರದಾಯವೂ ಇದೆ. ಇದು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.
ಗಣೇಶ ಚತುರ್ಥಿಯಂದು ಕಮಲದ ಬೀಜಗಳನ್ನು ಮನೆಗೆ ತಂದು ಗಣೇಶ ಪೂಜೆಯಲ್ಲಿ ಬಳಸುವುದು ವಾಸ್ತು ಪ್ರಕಾರ ಶುಭಕರವೆಂದು ಹೇಳಲಾಗುತ್ತದೆ. ಗಣೇಶನ ಮೂರ್ತಿಯ ಬಲಭಾಗದಲ್ಲಿ, ಪೂರ್ವ ದಿಕ್ಕಿಗೆ ಇರಿಸಿ ಪೂಜಿಸುವುದು ಮಂಗಳಕರವೆಂಬ ನಂಬಿಕೆಯಿದೆ.
ಹೀಗಾಗಿ ಗಣೇಶ ಚತುರ್ಥಿಯಂದು ಗಣಪತಿಯನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿ, ಈ ವಸ್ತುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಮನೆಗೆ ಸಕಾರಾತ್ಮಕತೆ, ಸಂತೋಷ ಹಾಗೂ ಸಮೃದ್ಧಿ ಬರಲಿ ಎಂಬ ಆಶಯದೊಂದಿಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಇವೆಲ್ಲವೂ ಧಾರ್ಮಿಕ ಹಾಗೂ ವಾಸ್ತು ನಂಬಿಕೆಗಳನ್ನಾಧರಿಸಿದ ಆಚರಣೆಗಳಾಗಿವೆ.