ಬೆಂಗಳೂರು: ಹಿಂದೂ ಪುರಾಣಗಳಲ್ಲಿ(Hindu Purana) ಸಾವು, ಆತ್ಮ, ಪುನರ್ಜನ್ಮ, ಸ್ವರ್ಗ, ನರಕ, ಪಾಪ ಕರ್ಮಗಳಿಗೆ ಶಿಕ್ಷೆ... ಹೀಗೆ ಮರಣಾನಂತರದ ನಮ್ಮೆಲ್ಲ ಕುತೂಹಲಗಳಿಗೆ ಶಾಸ್ತ್ರಬದ್ಧವಾದ ಉತ್ತರ ಸಿಗುವುದು ʼಗರುಡ ಪುರಾಣʼದಲ್ಲಿ(Garuda Puran). ಈ ʼಗರುಡ ಪುರಾಣʼವನ್ನು ಸರಿಯಾಗಿ ಓದಿಕೊಂಡವರು ತಮ್ಮ ಜೀವನದಲ್ಲಿ ಯಾವುದೇ ತಪ್ಪುಗಳನ್ನು ಮಾಡಲು ಹತ್ತು ಸಲ ಯೋಚನೆ ಮಾಡುತ್ತಾರೆ. ಅಂತಹ ʼಗರುಡ ಪುರಾಣʼದಲ್ಲಿ ವ್ಯಕ್ತಿಯ ಸಾವಿನ ಬಳಿಕ ಆತ್ಮದ ಏನಾಗುತ್ತದೆ? ಆತ್ಮವೊಂದು ಪುನರ್ಜನ್ಮ ತಾಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂಬುದರ ಬಗ್ಗೆ ಏನು ಹೇಳಲಾಗಿದೆ ಎಂಬ ವಿಚಾರಗಳನ್ನು ತಿಳಿದುಕೊಳ್ಳೋಣ.
ವ್ಯಕ್ತಿಯೊಬ್ಬನ ಸಾವಿನ ನಂತರದ 13 ದಿನಗಳ ಕಾಲ ʼಗರುಡ ಪುರಾಣʼವನ್ನು ಪಠಿಸಬೇಕು. ಇದರಿಂದ ಮೃತ ವ್ಯಕ್ತಿಯ ಆತ್ಮದ ಪರಲೋಕ ಪಯಣ ಸುಗಮವಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮೀಯರಲ್ಲಿದೆ.
ಗರುಡ ಪುರಾಣದಲ್ಲಿ ವಿವರಿಸಲಾಗಿರುವಂತೆ, ವ್ಯಕ್ತಿಯೊಬ್ಬನ ಸಾವಿನ ಬಳಿಕ ಆತನ ಆತ್ಮ ಈ ಲೋಕದಿಂದ ಬಹುದೂರವಿರುವ ಯಮಲೋಕಕ್ಕೆ ಸುದೀರ್ಘ ಪಯಣವನ್ನು ಕೈಗೊಳ್ಳುತ್ತದೆ. ಅಲ್ಲಿ ಆ ಆತ್ಮ ಶರೀರ ರೂಪದಲ್ಲಿದ್ದಾಗ ಮಾಡಿದ್ದ ಕರ್ಮಗಳ ಪರಿಶೀಲನೆ ಯಮಧರ್ಮರಾಯನ ಮುಂದೆ ನಡೆಯುತ್ತದೆ. ಯಮಲೋಕವನ್ನು ತಲುಪಲು ಆತ್ಮವೊಂದು 86 ಯೋಜನದಷ್ಟು ದೂರ ಪ್ರಯಾಣಿಸಬೇಕು ಎಂದು ʼಗರುಡ ಪುರಾಣʼದಲ್ಲಿ ಹೇಳಲಾಗಿದೆ. ಅಲ್ಲಿ ಆತ್ಮದ ಪಾಪ ಪುಣ್ಯಗಳ ಲೆಕ್ಕಾಚಾರದ ಬಳಿಕ, ಪಾಪ ಕರ್ಮಕ್ಕೆ ತಕ್ಕ ಶಿಕ್ಷೆ ಮತ್ತು ಪುಣ್ಯ ಕಾರ್ಯಕ್ಕೆ ಪುರಸ್ಕಾರ ದೊರೆಯುತ್ತದೆ.
ಮಂಗಳವಾರ ಆಂಜನೇಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ
ಇನ್ನು ಆತ್ಮಕ್ಕೆ ಪುನರ್ಜನ್ಮದ ಲೆಕ್ಕಾಚಾರ ಹೇಗಿರುತ್ತದೆ ಎಂದರೆ, ವ್ಯಕ್ತಿಯ ಸಾವಿನ ಬಳಿಕ ಆ ಆತ್ಮಕ್ಕೆ 3ರಿಂದ 40 ದಿನಗಳಲ್ಲಿ ಪುನರ್ಜನ್ಮ ಲಭಿಸುತ್ತದೆ ಎಂದು ʼಗರುಡ ಪುರಾಣʼದಲ್ಲಿ ಹೇಳಲಾಗಿದೆ. ಆತ್ಮದ ಪುನರ್ಜನ್ಮ ನಿರ್ಧಾರವು ಅದರ ಕರ್ಮಗಳ ಮೇಲೆ ನಿರ್ಧಾರವಾಗುತ್ತದೆ. ಪಾಪಾತ್ಮಗಳಿಗೆ ನರಕ ಲೋಕ ಪ್ರಾಪ್ತಿಯಾದ್ರೆ, ಪುಣ್ಯಾತ್ಮಗಳಿಗೆ ಸ್ವರ್ಗದ ಸುಖ ಲಭಿಸುತ್ತದೆ.
ವ್ಯಕ್ತಿಯ ಮರಣಾನಂತರ ಆತ್ಮಕ್ಕೆ ಕರ್ಮಾನುಸಾರ ಶಿಕ್ಷೆ ಲಭಿಸಿದ ಬಳಿಕ, ಅದಕ್ಕೆ ಇನ್ನೊಂದು ಹುಟ್ಟು ಲಭಿಸುತ್ತದೆ. ಮುಂದಿನ ಜನ್ಮದಲ್ಲಿ ಆ ಆತ್ಮದ ಹುಟ್ಟು ಹೇಗಿರಬೇಕು ಎಂಬುದೂ ಸಹ ಅವರವರ ಕರ್ಮದ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದು ʼಗರುಡ ಪುರಾಣʼದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.