ಬೆಂಗಳೂರು: ಭಾರತದಾದ್ಯಂತ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ವರ್ಷದ ಆರಂಭವನ್ನು ಸೂಚಿಸುವುದರಿಂದ ಜನರು ಹೊಸ ಆಶೆಗಳೊಂದಿಗೆ ಈ ದಿನವನ್ನು ಸ್ವಾಗತಿಸುತ್ತಾರೆ. ಯುಗಾದಿಯ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೊಗಟೆಗಳಿಂದ ತೋರಣ ಕಟ್ಟುವುದು ಹಾಗೂ ರಂಗೋಲಿ ಹಾಕುವುದು ಸಾಮಾನ್ಯ ಸಂಪ್ರದಾಯ. ಆಪ್ತರಿಗೆ ಬೇವು-ಬೆಲ್ಲ ಹಂಚುವ ಪದ್ಧತಿ ಯುಗಾದಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದು ಜೀವನದಲ್ಲಿ ಎದುರಾಗುವ ಕಹಿ ಮತ್ತು ಸಿಹಿ ಅನುಭವಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುತ್ತದೆ.
ಇನ್ನು ಯುಗಾದಿ ಹಬ್ಬದಂದು ಮನೆಯಲ್ಲೇ ವಿವಿಧ ಬಗೆಯ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಲಾಗುತ್ತದೆ. ಪಾಯಸ, ಒಬ್ಬಟ್ಟು (ಹೋಳಿಗೆ), ಬೇಳೆಸಾರು, ವಿವಿಧ ಪಲ್ಯಗಳು ಇತ್ಯಾದಿಗಳ ಜೊತೆಗೆ ಯುಗಾದಿ ಪಚಡಿ ಎಂಬ ವಿಶೇಷ ತಿನಿಸಿಗೂ ಮಹತ್ವ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇದು ಬಹಳ ಪ್ರಸಿದ್ಧವಾಗಿದ್ದು, ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಯುಗಾದಿ ಸಂದರ್ಭದಲ್ಲಿ ಪಚಡಿ ಮಾಡುವ ಪದ್ಧತಿ ಇದೆ.
ಪಚಡಿ ಎಂದರೆ ಏನು?
ಯುಗಾದಿ ಪಚಡಿ ಒಂದು ವಿಶೇಷವಾದ ಪಾನೀಯದಂತಿರುವ ತಿನಿಸಾಗಿದ್ದು, ಇದರಲ್ಲಿ ಆರು ವಿಭಿನ್ನ ರುಚಿಗಳು ಸೇರಿರುತ್ತವೆ. ಅವುಗಳು ಸಿಹಿ, ಹುಳಿ, ಉಪ್ಪು, ಕಾರು (ಮಸಾಲೆ), ಒಗರು ಮತ್ತು ಕಹಿ. ಈ ಆರು ರುಚಿಗಳು ಜೀವನದ ಆರು ಭಾವನೆಗಳನ್ನು ಪ್ರತಿನಿಧಿಸುತ್ತವೆ.
ಸಿಹಿ – ಸಂತೋಷ
ಹುಳಿ – ಆಶ್ಚರ್ಯ
ಉಪ್ಪು – ಆಸಕ್ತಿ
ಕಾರು – ಕೋಪ ಅಥವಾ ಉತ್ಸಾಹ
ಒಗರು – ಅಸಹ್ಯ ಅಥವಾ ಅಸಮಾಧಾನ
ಕಹಿ – ದುಃಖ
ಹೀಗಾಗಿ ಯುಗಾದಿ ಪಚಡಿ ಜೀವನದಲ್ಲಿ ಬರುವ ಎಲ್ಲ ರೀತಿಯ ಅನುಭವಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವಂತೆ ನಮಗೆ ನೆನಪಿಸುತ್ತದೆ. ಯುಗಾದಿಯ ದಿನ ಬೆಳಿಗ್ಗೆ ಮೊದಲು ಸೇವಿಸುವ ತಿನಿಸು ಇದಾಗಿದೆ. ಜೊತೆಗೆ ಇದರಲ್ಲಿ ಬಳಸುವ ಪದಾರ್ಥಗಳು ಆರೋಗ್ಯಕ್ಕೂ ಉತ್ತಮವಾಗಿವೆ. ಹಾಗಾದ್ರೆ ಬನ್ನಿ ಯುಗಾದಿಯ ಸ್ಪೆಷಲ್ ಪಚಡಿಯನ್ನು ಮಾಡೋದು ಹೇಗೆ..? ಏನೆಲ್ಲಾ ಸಾಮಾಗ್ರಿಗಳು ಬೇಕು..? ಎಂಬುದನ್ನು ತಿಳಿದುಕೊಳ್ಳೋಣ..
Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!
ಬೇಕಾಗುವ ಪದಾರ್ಥಗಳು
ನೀರು – 1½ ಕಪ್
ಮಾವಿನಕಾಯಿ – 2 ರಿಂದ 3 ಚಮಚ (ಸಿಪ್ಪೆ ತೆಗೆದು ಸಣ್ಣ ತುಂಡುಗಳು)
ಬೇವಿನ ಹೂ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – 3 ರಿಂದ 4 ಚಮಚ
ಕಾಳುಮೆಣಸಿನ ಪುಡಿ – ಚಿಟಿಕೆ
ಹುಣಸೆರಸ – 1½ ಚಮಚ
ತಯಾರಿಸುವ ವಿಧಾನ
ಮೊದಲು ಹುಣಸೆಹಣ್ಣನ್ನು ನೀರಲ್ಲಿ ನೆನೆಸಿ ಅದರ ರಸವನ್ನು ತಯಾರಿಸಿಕೊಳ್ಳಿ.
ತಾಜಾ ಬೇವಿನ ಹೂಗಳನ್ನು ಬೇರ್ಪಡಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ದೊಡ್ಡದಿದ್ದರೆ ಸಣ್ಣದಾಗಿ ಕತ್ತರಿಸಬಹುದು.
ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಬೆಲ್ಲದ ಪುಡಿ ಸೇರಿಸಿ ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಕಲಸಿ.
ನಂತರ ಆ ಮಿಶ್ರಣವನ್ನು ಸೋಸಿ ಅದಕ್ಕೆ ಹುಣಸೆರಸವನ್ನು ಸೇರಿಸಿ.
ಈಗ ಮಾವಿನಕಾಯಿ ತುಂಡುಗಳು, ಬೇವಿನ ಹೂ, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ತಯಾರಾದ ಪಚಡಿಯನ್ನು ಮೊದಲು ದೇವರಿಗೆ ನೈವೇದ್ಯವಾಗಿ ಸಮರ್ಪಿಸಿ, ನಂತರ ಮನೆಯ ಎಲ್ಲರಿಗೂ ಹಂಚಿ ಸೇವಿಸಬಹುದು.
ಯುಗಾದಿ ಪಚಡಿ ಕೇವಲ ಒಂದು ತಿನಿಸು ಮಾತ್ರವಲ್ಲ; ಅದು ಜೀವನದ ತತ್ತ್ವವನ್ನು ಸಾರುವ ಒಂದು ಸಾಂಪ್ರದಾಯಿಕ ತಿನ್ನಿಸಾಗಿದೆ .