ಬೆಂಗಳೂರು: ಯುಗಾದಿ (Ugadi 2026) ಎಂದರೆ ಹೊಸ ವರ್ಷದ ಆರಂಭವನ್ನು ಸೂಚಿಸುವ ಪವಿತ್ರ ಹಬ್ಬ. ಈ ಬಾರಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಗುರುವಾರ ಯುಗಾದಿ ಹಬ್ಬವನ್ನು (yugadi celbration) ಆಚರಿಸಲಾಗುತ್ತದೆ. ಜೀವನದಲ್ಲಿ ಸುಖ, ದುಃಖಗಳು ಸಿಹಿ ಕಹಿಯಂತೆ ಜೊತೆಗೆ ಇರುತ್ತದೆ ಎಂದು ಸಾರುವ ಈ ಹಬ್ಬದಲ್ಲಿ ವಿವಿಧ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ . ಆದರೆ ಇದು ಹೊಸ ವರ್ಷದ (New year) ಆರಂಭವಾದ್ದರಿಂದ ಬದುಕಿನಲ್ಲಿ ಸಕಾರಾತ್ಮಕತೆಯನ್ನು ತಂದುಕೊಳ್ಳಲು ಅತ್ಯಂತ ಪ್ರಸಕ್ತ ಸಮಯ ಎಂದು ಪರಿಗಣಿಸಬಹುದು. ಹೀಗಾಗಿ ಈ ಎಂಟು ಅಂಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಮತ್ತು ನಮ್ಮೊಳಗೆ ಸಕಾರಾತ್ಮಕತೆಯನ್ನು ಉಳಿಸೋಣ, ಬೆಳೆಸೋಣ.
Ugadi 2026 Wishes: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು
1.ಪ್ರತಿಬಿಂಬ ನೋಡಿ
ಪ್ರತಿ ನಿತ್ಯ ಕನ್ನಡಿ ಅಥವಾ ನೀರಿನಲ್ಲಿ ಪ್ರತಿಬಿಂಬ ನೋಡಿ. ಇದು ನಿಮಗೆ ಬದುಕಿನ ಸತ್ಯದ ದರ್ಶನವನ್ನು ಮಾಡಿಸುತ್ತದೆ. ಪ್ರಾಮಾಣಿಕವಾಗಿ ಬದುಕುವುದನ್ನು ಕಲಿಸುತ್ತದೆ. ಮನಸ್ಸನ್ನು ಸ್ಥಿರತೆಯಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಮಾಡಿರುವ, ಮುಂದೆ ಮಾಡಬೇಕಾಗಿರುವ ಕಾರ್ಯಗಳ ಅವಲೋಕನ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದಿನೇ ದಿನೇ ನಮ್ಮನ್ನು ನಾವು ಸವಾಲುಗಳಿಗೆ ಒಡ್ಡಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಬಹುದು.
2.ಜೀವನ ಮೌಲ್ಯಗಳನ್ನು ಪರೀಕ್ಷಿಸಿ
ಗೆಲುವು ಸಾಧಿಸಲು ಸುಲಭದ ದಾರಿ ಸಾಕಷ್ಟು ಇರುತ್ತದೆ. ಆದರೆ ಇದು ಯಾವಾಗಲೂ ಸರಿಯಾದ ದಾರಿಯಾಗಿರುವುದಿಲ್ಲ. ಹೀಗಾಗಿ ಜೀವನ ಮೌಲ್ಯಗಳನ್ನು ನಿರಂತರ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಯಾವುದು ಸರಿ, ಯಾವುದು ತಪ್ಪು ಎಂದು ಅವಲೋಕಿಸಿ ಬದುಕಿನ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟರೂ ಅಡ್ಡಿಯಿಲ್ಲ. ಇದು ನಿಮಗೆ ಮುಂದೆ ಹತ್ತು ಹೆಜ್ಜೆ ವೇಗವಾಗಿ ಇಡಲು ಸಹಾಯ ಮಾಡುವುದು.
3.ಗುರಿಗಳನ್ನು ಮರುಪರಿಶೀಲಿಸಿ
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇದ್ದೇ ಇರುತ್ತದೆ. ಆದರೆ ಇದರ ಸಾಧನೆಗೆ ನಮ್ಮದೇ ಕೆಲವೊಂದು ದೌರ್ಬಲ್ಯಗಳು ಅಡ್ಡಿಯಾಗಿರುತ್ತದೆ. ಹೀಗಾಗಿ ಇದನ್ನು ಮರು ಪರಿಶೀಲಿಸಿ ಎಲ್ಲಿ ತಪ್ಪಾಗಿದೆ, ಏನು ಸರಿಪಡಿಸಿಕೊಳ್ಳಬೇಕು, ಯಾವುದಕ್ಕೆ ಬದ್ಧರಾಗಿರಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆಯನ್ನೇ ಮಾಡಬೇಕಾಗಿಲ್ಲ. ಹೀಗಾಗಿ ಸಣ್ಣಪುಟ್ಟ ಗುರಿಯನ್ನು ಇರಿಸಿ ಸಂತೋಷವಾಗಿ ಜೀವನವನ್ನು ಕಳೆಯಬಹುದು. ಇದಕ್ಕಾಗಿ ದಿನದ, ವಾರದ, ತಿಂಗಳ ಗುರಿಯನ್ನು ಇಟ್ಟುಕೊಂಡು ಅದನ್ನು ಪೂರ್ತಿಗೊಳಿಸುವತ್ತ ಗಮನ ಹಾರಿಸಿದರೂ ಸಾಕು.
4.ಧೈರ್ಯ ಬೆಳೆಸಿಕೊಳ್ಳಿ
ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೂ ಧೈರ್ಯ ಬಹಳ ಮುಖ್ಯ. ಯಾವ ಕೆಲಸ ನಿಮ್ಮನ್ನು ಹೆದರಿಸುತ್ತದೋ ಅದನ್ನು ಮತ್ತೆ ಮತ್ತೆ ಮಾಡಿ. ಜೊತೆಗೆ ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡಬೇಕು. ಇದು ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಇದರಿಂದ ಹೊಸ ಜೀವನವನ್ನು ರೂಪಿಸಿಕೊಳ್ಳುವುದು ಸುಲಭವಾಗುತ್ತದೆ. ಇದರಿಂದ ಸಕಾರಾತ್ಮಕತೆಯನ್ನು ನಮ್ಮೊಳಗೆ ತುಂಬಿಕೊಳ್ಳಬಹುದು. ಜೀವನದಲ್ಲಿ ತುಂಬಾ ಜವಾಬ್ದಾರಿ ಇದೆ ಎಂದುಕೊಂಡು ಎಲ್ಲವೂ ನಾನೇ ಮಾಡಬೇಕು, ಎಲ್ಲವನ್ನೂ ನಾನೇ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದುಕೊಳ್ಳಬೇಡಿ. ಕೆಲವೊಂದನ್ನು ಬಿಟ್ಟು ಕೊಡುವುದು ಕೂಡ ಜೀವನವನ್ನು ಹಗುರ ಮಾಡುತ್ತದೆ.
5. ಮುಂದಿನ ನಡೆ ನಿರ್ಧರಿಸಿ
ಜೀವನದಲ್ಲಿ ಹೊಸದಾಗಿ ಏನಾದರೂ ಪ್ರಾರಂಭಿಸುವಾಗ ಉದ್ದೇಶವನ್ನು ಹೇಗೆ ಅಭಿವೃದ್ಧಿಪಡಿಸುವುದು ಅಥವಾ ದೈನಂದಿನ ಜೀವನಕ್ಕೆ ಹೆಚ್ಚಿನ ಸಂತೋಷವನ್ನು ಹೇಗೆ ತುಂಬಿಕೊಳ್ಳುವುದು ಎಂಬುದನ್ನು ನೋಡಿ. ಅದನ್ನು ಮೊದಲು ಸಣ್ಣದಾಗಿ ಕಾರ್ಯರೂಪಕ್ಕೆ ತನ್ನಿ. ನಿಮ್ಮ ನಡೆಯ ರೂಪುರೇಷೆ ತಯಾರಿಸಿ. ಚಿಕ್ಕ ಬದಲಾವಣೆಗಳು ಸಹ ದೊಡ್ಡ ಬದಲಾವಣೆಗಳಾಗಿ ರೂಪುಗೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ನಿಧಾನಕ್ಕೆ ಹೆಜ್ಜೆ ಇಡಿ.
6.ತರಬೇತುದಾರರನ್ನು ಆಯ್ಕೆ ಮಾಡಿ
ಒಬ್ಬರೇ ಎಲ್ಲವನ್ನೂ ಮಾಡುತ್ತೇನೆ ಎನ್ನುವ ಸಾಹಸ ಮಾಡಬೇಡಿ. ಇದು ನಮ್ಮನ್ನು ಸೋಲಿಸುತ್ತದೆ. ಯಾರಾದರೂ ಜೊತೆ ಇದ್ದರೆ ಯಾವುದೇ ಕಾರ್ಯವನ್ನು ಹೆಚ್ಚು ವೇಗವಾಗಿ, ಆಸಕ್ತಿಕರವಾಗಿ ಮಾಡಲು ಸಾಧ್ಯವಿದೆ. ಕೆಲವೊಂದು ಸವಾಲುಗಳನ್ನು ಎದುರಿಸಲು ಜೊತೆಗಾರರಿದ್ದರೆ ಅದು ಹೆಚ್ಚು ಸಹಾಯವಾಗುತ್ತದೆ. ಹೊಸದಾಗಿ ಏನಾದರೂ ಪ್ರಾರಂಭಿಸಲು ಯೋಜಿಸಿದರೆ ಅದಕ್ಕೆ ಬೆಂಬಲ ಪಡೆಯಲು ಹಿಂದೇಟು ಹಾಕಬೇಡಿ. ಪ್ರೀತಿಪಾತ್ರರ ಬೆಂಬಲ, ಸಲಹೆ ಪಡೆದು ಮುಂದುವರಿಯಿರಿ.
7. ಬೆಂಬಲಿಗರು ಇರಲಿ
ಸಾಮಾನ್ಯವಾಗಿ ಬೆಂಬಲಿಗರು ಹೆಚ್ಚಾದಷ್ಟು ನಿಮ್ಮ ಕೆಲಸ ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ಅತ್ಯುತ್ತಮವಾಗಿ ಸಾಗಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಅಭಿವೃದ್ಧಿಗೆ ಸಹಾಯ ಮಾಡುವ ಸ್ನೇಹಿತರು, ಕುಟುಂಬ ಅಥವಾ ಮಾರ್ಗದರ್ಶಕರನ್ನು ಹುಡುಕಿ. ಅವರಿಂದ ಸಲಹೆಗಳನ್ನು ಪಡೆಯಿರಿ. ನಿಮ್ಮನ್ನು ಬೆಂಬಲಿಸುವವರನ್ನು ಜೊತೆಗಿರಿಸಿಕೊಳ್ಳಿ. ಇದು ಬದುಕಿನಲ್ಲಿ ಸಕಾರಾತ್ಮಕತೆಯನ್ನು ತುಂಬಿಸುತ್ತದೆ.
ಯುಗಾದಿ ವಿಶೇಷ: ಜೀವನದ ಸಾರವನ್ನು ಸಾರುವ ಸಾಂಪ್ರದಾಯಿಕ ತಿನಿಸು ಪಚಡಿ ಮಾಡೋದು ಹೇಗೆ ಗೊತ್ತಾ?
8. ನಿಮ್ಮನ್ನು ನೀವು ಅವಲೋಕಿಸಿ
ಜೀವನದಲ್ಲಿ ಯಾವುದೇ ಹೊಸ ಹಾದಿ ಆಯ್ಕೆ ಮಾಡಿದರೆ ಅದು ಪ್ರತಿ ದಿನ ನಿಮ್ಮನ್ನು ಉತ್ತಮಗೊಳಿಸುತ್ತ ಹೋಗಬೇಕು. ಇದಕ್ಕಾಗಿ ನಿಮ್ಮ ಪ್ರಯತ್ನ ಎಷ್ಟು, ಹೇಗಿದೆ ಎಂಬುದನ್ನು ನಿತ್ಯವೂ ಅವಲೋಕನ ಮಾಡಿಕೊಳ್ಳಬೇಕು. ಎಲ್ಲ ಕೆಲಸವನ್ನು ಏಕಕಾಲದಲ್ಲಿ ಮುಗಿಸಬೇಕು ಎನ್ನುವ ಅವಸರ ಬೇಡ. ಆರಂಭದಲ್ಲಿ ನಿಧಾನಕ್ಕೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಹೋದರೂ ಕೂಡ ಅದು ಯಶಸ್ಸಿನ ಬಳಿಗೆ ನಿಮ್ಮನ್ನು ವೇಗವಾಗಿ ತಲುಪಿಸುವುದು.