ಬೆಂಗಳೂರು: ಪಿತೃ ಪಕ್ಷವು ನಮ್ಮ ಪೂರ್ವಜರನ್ನು ಗೌರವದಿಂದ ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ವಿಶೇಷ ಅವಧಿಯಾಗಿದೆ. ಈ ದಿನಗಳಲ್ಲಿ ತರ್ಪಣ, ಪಿಂಡಪ್ರದಾನ, ದಾನ, ಅನ್ನದಾನ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಮಾಡುವ ಪದ್ಧತಿಯಿದೆ. ಪೂರ್ವಜರನ್ನು ಭಕ್ತಿಯಿಂದ ಸ್ಮರಿಸಿ ಅವರ ಹೆಸರಿನಲ್ಲಿ ಮಾಡುವ ದಾನ-ಧರ್ಮ ಹಾಗೂ ಪ್ರಾರ್ಥನೆಗಳಿಂದ ಕುಟುಂಬಕ್ಕೆ ಪಿತೃಗಳ ಆಶೀರ್ವಾದ ದೊರೆಯುತ್ತದೆ, ಜೀವನದಲ್ಲಿನ ಅಡೆತಡೆಗಳು ಮತ್ತು ಪಿತೃ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಪಿತೃ ಪಕ್ಷದಲ್ಲಿ ಪಿತೃಗಳನ್ನು ಸ್ಮರಿಸುವುದಕ್ಕೆ ದೀಪ ಬೆಳಗಿಸುವುದಕ್ಕೂ ವಿಶೇಷ ಮಹತ್ವವಿದೆ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ. ಮನೆಯಲ್ಲಷ್ಟೇ ಅಲ್ಲದೆ, ನಿರ್ದಿಷ್ಟ ದಿಕ್ಕುಗಳು ಹಾಗೂ ಕೆಲವು ಪವಿತ್ರ ಸ್ಥಳಗಳಲ್ಲಿ ದೀಪ ಬೆಳಗಿಸುವ ಮೂಲಕ ಪೂರ್ವಜರಿಗೆ ಗೌರವ ಸಲ್ಲಿಸಲಾಗುತ್ತದೆ. ಈ ದೀಪವು ಪಿತೃಗಳಿಗೆ ದಾರಿ ತೋರಿಸುವ ಸಂಕೇತವಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಪಿತೃ ಪಕ್ಷದಲ್ಲಿ ಯಾವ ನಾಲ್ಕು ಸ್ಥಳಗಳಲ್ಲಿ ದೀಪ ಬೆಳಗಿಸಿಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
ದಕ್ಷಿಣ ದಿಕ್ಕಿನಲ್ಲಿ ನಾಲ್ಕು ಮುಖದ ದೀಪ
ಪಿತೃ ಪಕ್ಷದ ಸಮಯದಲ್ಲಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಚತುರ್ಮುಖ ದೀಪವನ್ನು ಬೆಳಗಿಸುವುದು ಶುಭಕರವೆಂದು ನಂಬಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ನಾಲ್ಕು ಮುಖದ ದೀಪ ಹಚ್ಚುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎನ್ನಲಾಗಿದೆ.
ಇದರಿಂದ ಪಿತೃ ದೋಷದ ಸಮಸ್ಯೆಗಳು ದೂರವಾಗಬಹುದು ಹಾಗೂ ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಎದುರಾಗುವ ಅಡೆತಡೆಗಳು ಕಡಿಮೆಯಾಗಬಹುದು ಎಂಬ ನಂಬಿಕೆಯಿದೆ.
Astro Tips: ಬುಧವಾರ ಗಣೇಶನ ಪೂಜೆಗೂ ಮುನ್ನ ಈ 5 ಕೆಲಸ ಮಾಡಿ; ಹಣಕಾಸಿನ ಸಮಸ್ಯೆ ದೂರವಾಗುತ್ತೆ
ಪೂರ್ವಜರ ಫೋಟೋದ ಮುಂದೆ ದೀಪ ಹಚ್ಚಿ
ಮನೆಯಲ್ಲಿ ಪೂರ್ವಜರ ಫೋಟೋ ಇಟ್ಟಿದ್ದರೆ, ಪಿತೃ ಪಕ್ಷದ ದಿನಗಳಲ್ಲಿ ಅದನ್ನು ಸ್ವಚ್ಛವಾಗಿಟ್ಟುಕೊಂಡು, ಅದರ ಮುಂದೆ ಪ್ರತಿದಿನ ದೀಪ ಬೆಳಗಿಸಬಹುದು. ಈ ಮೂಲಕ ಪೂರ್ವಜರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಭಕ್ತಿಯಿಂದ ಪೂರ್ವಜರನ್ನು ನೆನೆದು ದೀಪ ಬೆಳಗಿಸುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಕುಟುಂಬದ ಮೇಲೆ ಅವರ ಆಶೀರ್ವಾದ ಇರುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ಮನೆಯ ಮುಖ್ಯ ದ್ವಾರದಲ್ಲಿ ದೀಪ ಬೆಳಗಿಸಿ
ಪಿತೃ ಪಕ್ಷದ ಸಂದರ್ಭದಲ್ಲಿ ಮನೆಯ ಮುಖ್ಯ ದ್ವಾರದಲ್ಲಿಯೂ ದೀಪ ಬೆಳಗಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂರ್ವಜರು ತಮ್ಮ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಬರುತ್ತಾರೆ ಎಂಬ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಮುಖ್ಯ ದ್ವಾರದಲ್ಲಿ ದೀಪ ಹಚ್ಚಲಾಗುತ್ತದೆ.
ಈ ದೀಪವು ಮನೆಯಲ್ಲಿರುವ ನಕಾರಾತ್ಮಕತೆ ದೂರವಾಗಿ, ಶಾಂತಿ ಮತ್ತು ಸಕಾರಾತ್ಮಕತೆ ನೆಲೆಸಲು ಸಹಕಾರಿಯಾಗುತ್ತದೆ ಎಂಬ ನಂಬಿಕೆಯಿದೆ.
Astro Tips: ಪೂಜಾ ತಟ್ಟೆಯಲ್ಲಿ ಈ ವಸ್ತುಗಳಿದ್ದರೆ ಅಶುಭವೆ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಅರಳಿ ಮರದ ಕೆಳಗೆ ದೀಪ ಹಚ್ಚಿ
ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ಅರಳಿ ಮರಕ್ಕೆ ವಿಶೇಷ ಸ್ಥಾನವಿದೆ. ಪಿತೃ ಪಕ್ಷದ ಸಂದರ್ಭದಲ್ಲಿ ಪೂರ್ವಜರ ಸ್ಮರಣೆಗೆ ಅರಳಿ ಮರದ ಕೆಳಗೆ ದೀಪ ಬೆಳಗಿಸುವ ಪದ್ಧತಿಯೂ ಇದೆ.
ಅರಳಿ ಮರದ ಕೆಳಗೆ ದೀಪ ಹಚ್ಚಿ ಪೂರ್ವಜರನ್ನು ಸ್ಮರಿಸುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಮತ್ತು ಕುಟುಂಬದ ಮೇಲೆ ಪಿತೃಗಳ ಆಶೀರ್ವಾದ ಇರುತ್ತದೆ ಎನ್ನುವ ನಂಬಿಕೆಯಿದೆ. ಇದರಿಂದ ಜೀವನದಲ್ಲಿ ಸರಿಯಾದ ದಾರಿ ದೊರೆತು, ಯಶಸ್ಸಿನತ್ತ ಸಾಗಲು ಅನುಕೂಲವಾಗುತ್ತದೆ ಎಂದೂ ಹೇಳಲಾಗುತ್ತದೆ.
ಪಿತೃ ಪಕ್ಷದಲ್ಲಿ ಈ ಆಚರಣೆಗಳಿಗೆ ವಿಶೇಷ ಮಹತ್ವ
ಪಿತೃ ಪಕ್ಷದ ಸಂದರ್ಭದಲ್ಲಿ ಈ ನಾಲ್ಕು ಸ್ಥಳಗಳಲ್ಲಿ ಭಕ್ತಿಯಿಂದ ದೀಪ ಬೆಳಗಿಸುವುದು ಪೂರ್ವಜರನ್ನು ಸ್ಮರಿಸುವ ಒಂದು ಧಾರ್ಮಿಕ ಆಚರಣೆಯಾಗಿದೆ. ದೀಪ ಬೆಳಗಿಸುವುದರ ಜೊತೆಗೆ ತರ್ಪಣ, ದಾನ, ಅನ್ನದಾನ ಮತ್ತು ಪಿತೃಗಳ ಸ್ಮರಣೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಹಾಗೂ ಕುಟುಂಬದ ಮೇಲೆ ಅವರ ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.