ಬೆಂಗಳೂರು, ಫೆ. 19: ಮನೆ ನಿರ್ಮಾಣ, ಅಲಂಕಾರ ಮತ್ತು ವಸ್ತುಗಳ ವಿನ್ಯಾಸದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವ ನೀಡುವವರು ನಮ್ಮ ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ವಾಸ್ತು ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ನಿರ್ದಿಷ್ಟ ದಿಕ್ಕು ಮತ್ತು ಸ್ಥಳವಿದೆ ಎಂದು ಹೇಳಲಾಗುತ್ತದೆ. ಸರಿಯಾದ ಸ್ಥಳದಲ್ಲಿ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಕುಟುಂಬ ಸದಸ್ಯರ ಮನೋಭಾವದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಆದರೆ ವಸ್ತುಗಳನ್ನು ತಪ್ಪಾದ ಸ್ಥಳದಲ್ಲಿ ಇಟ್ಟರೆ ಅದು ಋಣಾತ್ಮಕತೆ ಹೆಚ್ಚಿಸಿ ಮನೆಯಲ್ಲಿ ಅಶಾಂತಿಯನ್ನು ಉಂಟು ಮಾಡಬಹುದು ಎಂದು ಕೆಲವರು ನಂಬುತ್ತಾರೆ.
ಈ ಹಿನ್ನೆಲೆಯಲ್ಲಿ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಪರಸ್ಪರ ವಿಶ್ವಾಸವನ್ನು ಹೆಚ್ಚಿಸಲು ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವ (Vastu Tips) ಬಗ್ಗೆ ಹಲವರು ಆಸಕ್ತಿ ತೋರಿಸುತ್ತಾರೆ. ವಾಸ್ತು ಶಾಸ್ತ್ರದ ಸಲಹೆಯ ಪ್ರಕಾರ, ಪ್ರೀತಿಗೆ ಪ್ರತೀಕವಾಗಿರುವ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ರಾಧಾ–ಕೃಷ್ಣ ನಿಸ್ವಾರ್ಥ ಪ್ರೀತಿ ದಾಂಪತ್ಯ ಜೀವನಕ್ಕೆ ಆದರ್ಶವಾಗಿದ್ದು, ಅವರ ಚಿತ್ರವನ್ನು ನೋಡುವುದರಿಂದ ಮನಸ್ಸಿನಲ್ಲಿ ಪ್ರೀತಿ ಮತ್ತು ಶಾಂತಿಯ ಭಾವನೆಗಳು ಮೂಡುತ್ತವೆ ಎಂಬ ಅಭಿಪ್ರಾಯವೂ ಇದೆ.
ಮಲಗುಣ ಕೋಣೆಯಲ್ಲಿ ರಾಧಾ–ಕೃಷ್ಣ ಪೋಟೊ ಇಡಬಹುದೆ?
ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ದೇವತೆಗಳ ವಿಗ್ರಹ ಅಥವಾ ಚಿತ್ರಗಳನ್ನು ಇಡುವುದನ್ನು ಕೆಲವರು ಶ್ರೇಯಸ್ಕರವೆಂದು ಪರಿಗಣಿಸುವುದಿಲ್ಲ. ಆದರೆ ರಾಧಾ–ಕೃಷ್ಣರ ಫೋಟೊಕ್ಕೆ ಸಂಬಂಧಿಸಿದಂತೆ, ಅದನ್ನು ಮಲಗುವ ಕೋಣೆಯಲ್ಲಿ ಇಡುವುದು ಉತ್ತಮವೆಂದು ಕೆಲ ವಾಸ್ತು ತಜ್ಞರು ಹೇಳುತ್ತಾರೆ. ಪತಿ–ಪತ್ನಿಯರು ದಿನವೂ ಕಣ್ಣಿಗೆ ಬೀಳುವ ಸ್ಥಳದಲ್ಲಿ ಈ ಚಿತ್ರವನ್ನು ಇಟ್ಟರೆ ಅವರ ನಡುವಿನ ಬಾಂಧವ್ಯ ಬಲವಾಗುತ್ತದೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಗುಣ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿ ಹಾಕಬೇಡಿ!
ಆದರೆ ಮನೆಯ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಅಥವಾ ಪ್ರವೇಶ ದ್ವಾರದಲ್ಲಿ ರಾಧಾ–ಕೃಷ್ಣರ ಚಿತ್ರವನ್ನು ಹಾಕಬಾರದು ಎಂದು ಸಲಹೆ ನೀಡಲಾಗುತ್ತದೆ. ಪ್ರವೇಶ ದ್ವಾರವು ನಿರಂತರವಾಗಿ ತೆರೆಯಲ್ಪಡುವ ಮತ್ತು ಮುಚ್ಚಲ್ಪಡುವ ಸ್ಥಳವಾಗಿರುವುದರಿಂದ, ಅಲ್ಲಿ ದೇವತೆಗಳ ಚಿತ್ರವನ್ನು ಇಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
ಫೋಟೊ ಹೇಗಿರಬೇಕು?
ರಾಧಾ–ಕೃಷ್ಣರು ಸಂತೋಷದಿಂದ ಒಬ್ಬರನ್ನೊಬ್ಬರು ನೋಡುತ್ತಿರುವ, ಪ್ರೀತಿ ಮತ್ತು ಸೌಹಾರ್ದತೆಯನ್ನು ವ್ಯಕ್ತಪಡಿಸುವ ಚಿತ್ರವನ್ನು ಆಯ್ಕೆ ಮಾಡಬೇಕು ಎಂದು ವಾಸ್ತು ಹೇಳುತ್ತದೆ. ಇಂತಹ ಚಿತ್ರವನ್ನು ಮಲಗುವ ಕೋಣೆಯಲ್ಲಿ ಸುಲಭವಾಗಿ ಕಾಣುವ ಗೋಡೆಯ ಮೇಲೆ ಅಳವಡಿಸಿದರೆ ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ಬೀಳುತ್ತದೆ. ಇದು ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ದಿನದ ಆರಂಭವನ್ನು ಧನಾತ್ಮಕವಾಗಿ ಮಾಡಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯವೂ ಇದೆ.
ಬಣ್ಣ ಯಾವುದಿರಬೇಕು?
ಚಿತ್ರದ ವಿನ್ಯಾಸ ಹಾಗೂ ಬಣ್ಣಕ್ಕೂ ಕೆಲವು ಮಂದಿ ಮಹತ್ವ ನೀಡುತ್ತಾರೆ. ಕೆಂಪು ಬಣ್ಣವು ಪ್ರೀತಿ, ಶಕ್ತಿ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕೆಂಪು ಚೌಕಟ್ಟಿನಲ್ಲಿರುವ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಪತಿ–ಪತ್ನಿಯರ ನಡುವೆ ಪ್ರೀತಿ ಮತ್ತು ಶಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಕೆಲವರು ಈ ಚಿತ್ರದ ಮುಂದೆ ತಮ್ಮಿಬ್ಬರ ಫೋಟೊವನ್ನು ಇಟ್ಟರೆ ಪರಸ್ಪರ ಸಂಬಂಧ ಇನ್ನಷ್ಟು ಬಲವಾಗುತ್ತದೆ ಎಂದು ನಂಬುತ್ತಾರೆ.
ಒಟ್ಟಿನಲ್ಲಿ ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ ರಾಧಾ–ಕೃಷ್ಣರ ಚಿತ್ರವನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಜತೆಗೆ ದಾಂಪತ್ಯ ಜೀವನದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇವು ನಂಬಿಕೆಗಳ ಆಧಾರದ ಮೇಲೆ ರೂಪುಗೊಂಡ ಸಲಹೆಗಳಾಗಿದ್ದು, ವೈಯಕ್ತಿಕ ಅನುಭವ ಮತ್ತು ನಂಬಿಕೆಗೆ ಅನುಗುಣವಾಗಿ ಜನರು ಇವುಗಳನ್ನು ಅನುಸರಿಸುತ್ತಾರೆ.