Spoorthivani Column: ಒಂದೇ ದಿನಕ್ಕೆ ನಡಿಗೆ ಕಲಿತಿರಾ? ದೇವರ ದರ್ಶನದ ಪ್ರಯತ್ನವೂ ಹಾಗೆಯೇ
ನಾವು ನಮ್ಮ ಕೆಲಸಗಳನ್ನು ದೇವರಿಗೆ ಅರ್ಪಣೆ ಎಂದು ತಿಳಿದು ಮಾಡಿದಾಗ, ಅವನು ನಮ್ಮ ಮೇಲೆ ಅನುಗ್ರಹದ ಮಳೆಯನ್ನೇ ಸುರಿಸುತ್ತಾನೆ. ದೇವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡಿದರೆ, ನಮ್ಮ ಮನಸ್ಸು ಶುದ್ಧವಾಗುತ್ತದೆ. ಪ್ರತಿಯೊಬ್ಬನೂ ದೇವರನ್ನು ಪಡೆಯಲು ಶಕ್ತನಾಗಿದ್ದರೂ, ಅದು ಕೇವಲ ಒಂದು ದಿನದಲ್ಲಿ ಆಗುವಂಥದ್ದಲ್ಲ.

-

ನಾವು ಇಲ್ಲಿ ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕು. ನಾವು ಕೆಲಸ ಮಾಡುವುದು ನಮಗಾಗಿಯಲ್ಲ ಮತ್ತು ಸಂಬಳಕ್ಕೋಸ್ಕರವಾಗಿಯೂ ಅಲ್ಲ. ಸಂಬಳವು ದೇವರ ಪ್ರಸಾದ (ಅನುಗ್ರಹ) ಇದ್ದಂತೆ. ನಾವು ನಮ್ಮ ಕೆಲಸಗಳನ್ನು ದೇವರಿಗೆ ಅರ್ಪಣೆ ಎಂದು ತಿಳಿದು ಮಾಡಿದಾಗ, ಅವನು ನಮ್ಮ ಮೇಲೆ ಅನುಗ್ರಹದ ಮಳೆಯನ್ನೇ ಸುರಿಸುತ್ತಾನೆ. ದೇವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡಿದರೆ, ನಮ್ಮ ಮನಸ್ಸು ಶುದ್ಧವಾಗುತ್ತದೆ (ಚಿತ್ತಶುದ್ಧಿ). ರಾಮಕೃಷ್ಣ ಪರಮಹಂಸರು ಹೇಳುವಂತೆ, ಕರ್ಮದಿಂದ ಕೆಲವರು ಜನರು ಬುದ್ಧಜೀವಿಗಳು (ಮುಕ್ತ ಆತ್ಮಗಳು) ಆಗುತ್ತಾರೆ. ಆದರೆ ಅದೇ ಕರ್ಮದಿಂದ ಇನ್ನೂ ಕೆಲವರು ಬದ್ಧಜೀವಿಗಳು (ಬಂಧಿಸಲ್ಪಟ್ಟ ಆತ್ಮಗಳು) ಆಗುತ್ತಾರೆ.
'ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ (ಅಮೃತಬಿಂದೂಪನಿಷದ್ 1.1)' - 'ಮನುಷ್ಯರ ಬಂಧನಗಳಿಗೆ ಮತ್ತು ಮೋಕ್ಷಕ್ಕೆ ಮನಸ್ಸೇ ಕಾರಣ'. ಮಾಡುವ ಕೆಲಸವು ಒಂದೇ ಆಗಿರಬಹುದು. ಆದರೆ, ಆ ಕೆಲಸದ ಹಿಂದಿನ ಉದ್ದೇಶಗಳ ಕಾರಣದಿಂದಾಗಿ ಒಬ್ಬನು ಬುದ್ಧನಾಗಲೂಬಹುದು ಅಥವಾ ಬದ್ಧನಾಗಲೂಬಹುದು. ಹಾಗಾಗಿ ನಮ್ಮ ಮನೋಧರ್ಮವೇ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೀವು ದೇವರಿಗಾಗಿ ಕೆಲಸ ಮಾಡುವಾಗ, ಸಮಾಜದಲ್ಲಿ ಸೌಲಭ್ಯವಂಚಿತರಿಗೆ ಸೇವೆ ಸಲ್ಲಿಸುವ ಸಲುವಾಗಿ ನಿಮ್ಮ ಕೌಶಲ್ಯಗಳನ್ನು, ವಿದ್ಯೆಯನ್ನು ಮತ್ತು ಜ್ಞಾನವನ್ನು ಸಂಪೂರ್ಣವಾಗಿ ಬಳಸಬೇಕು. ಇದು ನಿಮ್ಮನ್ನು ಚಿತ್ತಶುದ್ಧಿಯತ್ತ ಕರೆದೊಯ್ಯುತ್ತದೆ. ನೀವು ಇಂಥ ಒಂದು ಉದ್ದೇಶದಿಂದ ಕೆಲಸ ಮಾಡಿದರೆ, ನಿಮಗೆ ಖಂಡಿತವಾಗಿ ದೇವರ ದರ್ಶನವಾಗುವ ಅನುಗ್ರಹವು ದೊರೆಯುತ್ತದೆ.
ಸಾಮಾನ್ಯರಾದ ಜನರು ಸರಳವಾದ ವಿಚಾರಗಳನ್ನು ಜಟಿಲವಾಗಿಸುತ್ತಾರೆ. ಮುಕ್ತಿ ಹೊಂದಿದ ಜನರು ಜಟಿಲ ವಿಷಯಗಳನ್ನು ಸರಳವಾಗಿಸುತ್ತಾರೆ. ನಿಸ್ವಾರ್ಥಿಗಳಾಗಿರಿ; ಅದಷ್ಟೇ ಅಗತ್ಯವಾಗಿ ಬೇಕಾಗಿರುವುದು. ಪರರಿಗೆ ಸೇವೆ ಸಲ್ಲಿಸಿರಿ, ಸ್ವಾರ್ಥಪರತೆಯಿಂದ ದೂರವಿರಿ. ನೀವು ಇಷ್ಟು ಮಾಡಿದರೆ ಸಾಕು. 'ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ (ಕಠೋಪನಿಷತ್ತು 1.2.2.3)' 'ಶಾಸ್ತ್ರಗಳನ್ನು ಓದುವುದರಿಂದ, ಬುದ್ಧಿವಂತಿಕೆಯಿಂದ, ಉನ್ನತ ಮಟ್ಟದ ವಿದ್ಯೆಯನ್ನು ಗಳಿಸುವುದರಿಂದ ಅಥವಾ ಪ್ರವಚನಗಳನ್ನು ಆಲಿಸುವುದರಿಂದ ಆತ್ಮತತ್ತ್ವವನ್ನು ಸಾಧಿಸಲು ಸಾಧ್ಯವಿಲ್ಲ'. ಕೇವಲ ಉಪನಿಷತ್ತುಗಳನ್ನು ಅಭ್ಯಸಿಸುವುದರಿಂದ ದೈವೀ ತತ್ತ್ವವನ್ನು ಅರಿತು ದೇವರನ್ನು ಪಡೆಯುವುದು ಸಾಧ್ಯವಿಲ್ಲ. ಯಾರಿಗೆ ಪವಿತ್ರವಾದ ಮನಸ್ಸು ಮತ್ತು ಪರಿಶುದ್ಧವಾದ ಹೃದಯವಿರುತ್ತದೆಯೋ ಅಂಥವರಿಗೆ ಮಾತ್ರ ದೈವೀ ತತ್ತ್ವವು ಒಲಿಯುತ್ತದೆ.
ಈ ಸುದ್ದಿಯನ್ನೂ ಓದಿ: Spoorthivani Column: ಚಿತ್ರಗುಪ್ತ ನಿಮ್ಮನ್ನು ಹೇಗೆ ಅಳೆಯುತ್ತಾನೆಂದು ತಿಳಿದರೆ ದೇವರು ಮೆಚ್ಚುವಂತೆ ಬದುಕುವುದು ಸುಲಭ
ಪ್ರತಿಯೊಬ್ಬನೂ ದೇವರನ್ನು ಪಡೆಯಲು ಶಕ್ತನಾಗಿದ್ದರೂ, ಅದು ಕೇವಲ ಒಂದು ದಿನದಲ್ಲಿ ಆಗುವಂಥದ್ದಲ್ಲ. ನೀವು ಒಂದೇ ದಿನದಲ್ಲಿ ನಡೆಯಲು, ಮಾತನಾಡಲು ಕಲಿಯಲಿಲ್ಲ ಅಲ್ಲವೇ? ಅದಕ್ಕಾಗಿ ಸಾಕಷ್ಟು ಸಮಯವನ್ನು ನೀವು ತೆಗೆದುಕೊಂಡಿರಿ ಮತ್ತು ದಿನನಿತ್ಯವೂ ಅಭ್ಯಾಸ ಮಾಡುವ ಮೂಲಕ ಸಾಧಿಸಿದಿರಿ. ಹಾಗೆಯೇ, ನೀವು ಮಾತನಾಡುವಾಗ, ಯೋಚಿಸುವಾಗ ಮತ್ತು ನಿಮ್ಮ ಕೆಲಸಗಳನ್ನು ನಿಮಗಾಗಿ ಮಾಡದೇ ದೇವರಿಗಾಗಿಯೇ ಮಾಡುತ್ತಾ ನೀವು ನಿಸ್ವಾರ್ಥಿಯಾಗುವ ಅಭ್ಯಾಸವನ್ನು ದಿನನಿತ್ಯವೂ ಮಾಡಿದಾಗ, ನಿಜವಾಗಿಯೂ ದೇವರ ಅನುಭವವನ್ನು ಪಡೆಯಲು ಶಕ್ತರಾಗುತ್ಥೀರಿ; ಇದಕ್ಕೆ ಸಂಶಯವೇ ಬೇಡ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.