ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಿದರೆ ದೋಷ ಪರಿಹಾರ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಜ್ಯೋತಿಷ್ಯ ಶಾಸ್ತ್ರ ಹಾಗೂ ಹಿಂದೂ ಸಂಪ್ರದಾಯಗಳ ಪ್ರಕಾರ ಹಸು, ನಾಯಿ, ಕಾಗೆ ಮತ್ತು ಇತರ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದು ಪುಣ್ಯಕರವಾದ ಕಾರ್ಯವೆಂದು ನಂಬಲಾಗಿದೆ. ಪಂಚಬಲಿ ಕರ್ಮದಲ್ಲಿಯೂ ಇದರ ಮಹತ್ವವನ್ನು ವಿವರಿಸಲಾಗಿದ್ದು, ಪ್ರಾಣಿ-ಪಕ್ಷಿಗಳ ಸೇವೆಯಿಂದ ದೋಷಗಳು ಕಡಿಮೆಯಾಗುತ್ತವೆ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಜೊತೆಗೆ ಇದು ಸರ್ವ ಜೀವಿಗಳ ಮೇಲೆ ಕರುಣೆ ತೋರಿಸುವ ಮಾನವೀಯ ಮೌಲ್ಯವನ್ನೂ ಉತ್ತೇಜಿಸುತ್ತದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರ(Astrology) ಹಾಗೂ ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ(Hindu Tradition) ಪ್ರಾಣಿ ಮತ್ತು ಪಕ್ಷಿಗಳಿಗೆ (Feeding Animals and Birds) ವಿಶೇಷ ಮಹತ್ವ ನೀಡಲಾಗಿದೆ. ಹಸುಗಳು, ನಾಯಿಗಳು, ಕಾಗೆಗಳು ಹಾಗೂ ಇತರ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದು ಪುಣ್ಯಕರವಾದ ಕಾರ್ಯವೆಂದು ಹೇಳಲಾಗುತ್ತದೆ. ಇದು ಕೇವಲ ದಾನ ಅಥವಾ ಕರುಣೆಯ ಕಾರ್ಯವಷ್ಟೇ ಅಲ್ಲ, ನಮ್ಮ ಜೀವನದಲ್ಲಿನ ಅನೇಕ ದೋಷಗಳು ಮತ್ತು ಕಷ್ಟಗಳನ್ನು ಕಡಿಮೆ ಮಾಡುತ್ತದೆ ಎಂಬ ಉಲ್ಲೇಖವೂ ಶಾಸ್ತ್ರದಲ್ಲಿದೆ.

ಹಿಂದೂ ಧರ್ಮದಲ್ಲಿ ಪಂಚಬಲಿ ಕರ್ಮಕ್ಕೆ ಮಹತ್ವದ ಸ್ಥಾನವಿದ್ದು, ಪಂಚಬಲಿ ಎಂದರೆ ಗೋಬಲಿ, ನಾಯಿ ಬಲಿ, ಕಾಗೆ ಬಲಿ, ದೇವಬಲಿ ಮತ್ತು ಇತರ ಜೀವಿಗಳಿಗೆ ಆಹಾರ ನೀಡುವ ವಿಧಾನಗಳನ್ನು ಒಳಗೊಂಡ ಒಂದು ಸಂಪ್ರದಾಯ. ಇದರ ಮೂಲ ಉದ್ದೇಶವೆಂದರೆ ಪ್ರಕೃತಿ, ಪ್ರಾಣಿ, ಪಕ್ಷಿ ಹಾಗೂ ದೇವತೆಗಳೊಂದಿಗೆ ಸಮತೋಲನವನ್ನು ಕಾಪಾಡುವುದು ಮತ್ತು ಎಲ್ಲ ಜೀವಿಗಳೊಂದಿಗೆ ಸಹಜೀವನದ ಮನೋಭಾವವನ್ನು ಬೆಳೆಸುವುದು. ಈ ಹಿನ್ನಲೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಕೆಲ ಪ್ರಾಣಿ-ಪಕ್ಷಿಗಳಿಗೆ ಆಹಾರ ದವಸ - ಧಾನ್ಯಗಳನ್ನು ನೀಡುವುದರಿಂದ ನಮ್ಮ ಪಾಪ ದೋಷಗಳು ಪರಿಹಾರಗೊಂಡು, ಜೀವನದಲ್ಲಿಯೂ ಸಮೃದ್ಧಿ ಕಾಣುತ್ತದೆ.

ಪಂಚಬಲಿ ಕರ್ಮವು ಕೇವಲ ಒಂದು ಆಚರಣೆ ಅಲ್ಲ, ಅದು ಜೀವಜಗತ್ತಿನ ಪ್ರತಿಯೊಂದು ರೂಪಕ್ಕೂ ಗೌರವ ಸಲ್ಲಿಸುವ ಒಂದು ವಿಧಾನವಾಗಿದೆ. ಗೋಬಲಿ, ನಾಯಿ ಬಲಿ, ಕಾಗೆ ಬಲಿ ಮತ್ತು ದೇವಬಲಿ ಮುಂತಾದವುಗಳ ಮೂಲಕ ನಾವು ಪ್ರಕೃತಿ, ಪ್ರಾಣಿ, ಪಕ್ಷಿ ಹಾಗೂ ದೇವತೆಗಳೊಂದಿಗೆ ಹೊಂದಾಣಿಕೆಯನ್ನು ಕಾಪಾಡುತ್ತೇವೆ ಎಂಬ ನಂಬಿಕೆ ಇದೆ. ಇದು ಮಾನವನಲ್ಲಿ ದಯೆ, ಕರುಣೆ ಮತ್ತು ಸೇವಾಭಾವವನ್ನು ಬೆಳೆಸುವ ಒಂದು ಮಹತ್ವದ ಸಂಪ್ರದಾಯವಾಗಿದೆ.

ಹಾಗಾದ್ರೆ ಬನ್ನಿ ಯಾವ ಪ್ರಾಣಿಗಳಿಗೆ ಆಹಾರ ನೀಡಿದ್ದರೆ ಏನೆಲ್ಲಾ ಪ್ರಯೋಜನ ಆಗುತ್ತದೆ..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ(Astro Tips) ಏನೇಳುತ್ತದೆ ಎಂಬುದನ್ನು ನೋಡೋಣಾ...

Astro Tips: ಗ್ರಹ ದೋಷದಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಪ್ರತಿದಿನ ಬೆಳಿಗ್ಗೆ ಈ ಕ್ರಮಗಳನ್ನು ಅನುಸರಿಸಿ.!

ಹಸು (ಗೋಮಾತೆ):

ಪುರಾಣಗಳು ಮತ್ತು ವೇದಗಳಲ್ಲಿ ಹಸುವಿಗೆ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ಗೋವನ್ನು ಎಲ್ಲಾ ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಅಥರ್ವವೇದದಲ್ಲಿ ಗೋವು ಸಮೃದ್ಧಿಯ ಮೂಲವೆಂದು ಹೇಳಲಾಗಿದೆ. ಹಸು ಧನಾತ್ಮಕ ಶಕ್ತಿಯ ಸಂಕೇತವಾಗಿದ್ದು, ಮನೆಯಲ್ಲಿನ ಶಾಂತಿ, ಸಂತೋಷ ಮತ್ತು ಐಶ್ವರ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎನ್ನುವ ನಂಬಿಕೆ ಇದೆ. ಹಸುವಿಗೆ ಪ್ರತಿದಿನ ಆಹಾರ ಮತ್ತು ನೀರು ನೀಡುವುದರಿಂದ ಕುಟುಂಬದ ಕಷ್ಟಗಳು ಕಡಿಮೆಯಾಗುತ್ತವೆ ಮತ್ತು ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಸುವಿಗೆ ರೊಟ್ಟಿ ಅಥವಾ ಹಸಿರು ಮೇವು ನೀಡುವುದರಿಂದ ಗುರು ಮತ್ತು ಶುಕ್ರ ಗ್ರಹಗಳು ಬಲವಾಗುತ್ತವೆ ಎಂದು ನಂಬಲಾಗುತ್ತದೆ. ಇದರಿಂದ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ನಾಯಿ:

ನಾಯಿ ನಿಷ್ಠೆ, ಕಾವಲು ಮತ್ತು ರಕ್ಷಣೆಯ ಸಂಕೇತವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ನಾಯಿಗೆ ಆಹಾರ ನೀಡುವುದರಿಂದ ಭೈರವ ದೇವರು ಪ್ರಸನ್ನನಾಗುತ್ತಾನೆ ಎಂದು ಹೇಳುತ್ತಾರೆ. ಇದರಿಂದ ಆಕಸ್ಮಿಕ ಅಪಾಯಗಳು, ದುಷ್ಟಶಕ್ತಿಗಳು ಮತ್ತು ಅನಾಹುತಗಳಿಂದ ರಕ್ಷಣೆ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಾಯಿ ಕೇತು ಗ್ರಹದ ಸಂಕೇತವಾಗಿದ್ದು, ನಾಯಿಯ ಸೇವೆಯಿಂದ ಕೇತುವಿನ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಕೆಲವು ಸಂಪ್ರದಾಯಗಳಲ್ಲಿ ಪಿತೃ ಪಕ್ಷದ ಸಮಯದಲ್ಲಿ ನಾಯಿಗಳಿಗೆ ಆಹಾರ ನೀಡುವುದು ವಿಶೇಷ ಪುಣ್ಯಕರವೆಂದು ಪರಿಗಣಿಸಲಾಗಿದೆ. ನಾಯಿಗೆ ಆಹಾರ ನೀಡುವುದು ಭಯವನ್ನು ಕಡಿಮೆ ಮಾಡಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆಯೂ ಇದೆ.

Astro Tips: ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?

ಪಕ್ಷಿಗಳು (ಕಾಗೆ ಮತ್ತು ಇತರೆ):

ಪಕ್ಷಿಗಳಲ್ಲಿ ವಿಶೇಷವಾಗಿ ಕಾಗೆಯನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಾಗೆಗೆ ಆಹಾರ ನೀಡುವುದು ಎಂದರೆ ನಮ್ಮ ಪಿತೃಗಳನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದಕ್ಕೆ ಸಮಾನವೆಂದು ನಂಬಲಾಗಿದೆ. ಕಾಗೆಗಳಿಗೆ ಹಾಗೂ ಇತರ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದರಿಂದ ಪಿತೃ ದೋಷ, ಶನಿ ದೋಷ ಮತ್ತು ಕಾಳ ಸರ್ಪ ದೋಷಗಳ ಪರಿಣಾಮ ಕಡಿಮೆಯಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಕಾಗೆ, ಗಿಳಿ, ಗುಬ್ಬಚ್ಚಿ, ಹದ್ದು, ಹಂಸ ಮುಂತಾದ ಪಕ್ಷಿಗಳಿಗೆ ಆಹಾರ ನೀಡುವುದು ಪ್ರಕೃತಿಯೊಂದಿಗೆ ನಮ್ಮ ನಂಟನ್ನು ಬಲಪಡಿಸುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಇದರಿಂದ ಸಂಸಾರದಲ್ಲಿ ನೆಮ್ಮದಿ ಮತ್ತು ಐಕ್ಯತೆ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ.

ಹಿಂದೂ ಧರ್ಮದಲ್ಲಿ “ಸರ್ವ ಜೀವಿಗಳಿಗೆ ಕರುಣೆ” ಎಂಬ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಮಾನವೀಯತೆ ಮತ್ತು ಸಹಾನುಭೂತಿಯ ಚಿಹ್ನೆಯಾಗಿದೆ. ಸಾಧ್ಯವಾದಷ್ಟು ಪ್ರತಿದಿನ ಅಥವಾ ಸಾಧ್ಯವಾಗುವ ದಿನಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದು ಉತ್ತಮವೆಂದು ಹಿರಿಯರು ಸಲಹೆ ನೀಡುತ್ತಾರೆ. ಇದು ಪ್ರಕೃತಿಯೊಂದಿಗೆ ಸಮತೋಲನದಲ್ಲಿರುವ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸಿಗೆ ಸಂತೋಷ ಹಾಗೂ ಶಾಂತಿಯನ್ನು ನೀಡುತ್ತದೆ.