Spoorthivani Column: ಮನಸ್ಸು ಭಕ್ತಿಯಲ್ಲಿ ತಲ್ಲೀನವಾದಾಗಲೇ ಅಮರತ್ವ ಸಾಧನೆ ಸಾಧ್ಯ
ಏನೇ ಆದರೂ, ಸುಖದುಃಖಗಳಲ್ಲಿ, ಲಾಭನಷ್ಟಗಳಲ್ಲಿ ಮತ್ತು ಜಯಾಪಜಯಗಳಲ್ಲಿ ನೀನು ಸಮಚಿತ್ತನಾಗಿರುವೆ. ನಿನಗೆ ಏನಾದರೂ ಲಾಭವಾದಾಗ ಅತಿಯಾಗಿ ಸಂತೋಷಪಡುವುದಿಲ್ಲ ಮತ್ತು ಏನನ್ನಾದರೂ ಕಳೆದುಕೊಂಡಾಗ ಅತಿಯಾಗಿ ದುಃಖಿಸುವುದಿಲ್ಲ.ಇಂದಿಗೂ ನಾವು ರಾಧಾ ಮತ್ತು ಗೋಪಿಕೆಯರ ಹೆಸರುಗಳೊಂದಿಗೆ ಕೃಷ್ಣನ ಹೆಸರನ್ನು ನೆನಪಿಸಿಕೊಳ್ಳುತ್ತೇವೆ. ಕೃಷ್ಣನಿಗೆ ಪ್ರಬಲರಾದ ರಾಜರುಗಳು ಮತ್ತು ಯುದ್ಧಪ್ರವೀಣರು ಸಹ ಭಕ್ತರಿದ್ದರು.

-

ಸದ್ಗುರು ಶ್ರೀ ಮಧುಸೂದನ ಸಾಯಿ
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾ ಜಯೌ |
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ||
(ಭಗವದ್ಗೀತೆ 2.38)
'ಸುಖದುಃಖಗಳನ್ನೂ ಲಾಭನಷ್ಟಗಳನ್ನೂ ಜಯಾಪಜಯಗಳನ್ನೂ ಸಮಾನವಾಗಿ ಭಾವಿಸಿಕೊಂಡು ಅನಂತರ ಯುದ್ಧಮಾಡಲು ಸನ್ನದ್ಧನಾಗು. ಈ ರೀತಿ ಮಾಡಿದರೆ ನೀನು ಪಾಪವನ್ನು ಹೊಂದುವುದಿಲ್ಲ' ಎಂದು ಭಗದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ.
ಏನೇ ಆದರೂ, ಸುಖದುಃಖಗಳಲ್ಲಿ, ಲಾಭನಷ್ಟಗಳಲ್ಲಿ ಮತ್ತು ಜಯಾಪಜಯಗಳಲ್ಲಿ ನೀನು ಸಮಚಿತ್ತನಾಗಿರುವೆ. ನಿನಗೆ ಏನಾದರೂ ಲಾಭವಾದಾಗ ಅತಿಯಾಗಿ ಸಂತೋಷಪಡುವುದಿಲ್ಲ ಮತ್ತು ಏನನ್ನಾದರೂ ಕಳೆದುಕೊಂಡಾಗ ಅತಿಯಾಗಿ ದುಃಖಿಸುವುದಿಲ್ಲ. 'ಸಮತ್ವಮ್ ಯೋಗಮುಚ್ಯತೆ' (ಭಗವದ್ಗೀತೆ 2.48) ‘ಸಮಚಿತ್ತವೇ ಯೋಗ’. ನೀನು ಯಾವಾಗಲೂ ಸಮಚಿತ್ತದ ಸ್ಥಿತಿಯಲ್ಲಿಯೇ ಇರುತ್ತಿ. ಅದನ್ನೇ 'ಮತ್ತೋ ಭವತಿ' ಎಂದು ಕರೆಯುತ್ತಾರೆ. ಒಬ್ಬ ಮಾನಸಿಕ ಅಸ್ವಸ್ಥನಾದ ವ್ಯಕ್ತಿಯ ಮೇಲೆ ನೀವು ಕಲ್ಲು ಎಸೆದರೂ ಅಥವಾ ಎಂಥಾ ಸಿಹಿಯನ್ನೇ ತಿನ್ನಿಸಿದರೂ ಅವನು ಯಾವುದೇ ರೀತಿಯಲ್ಲಿ ಪ್ರತಿಸ್ಪಂದಿಸುವುದಿಲ್ಲ. ಏಕೆಂದರೆ, ಅವನು ಯಾವ ಸಂಗತಿಯೂ ಯಾವುದೇ ಪರಿಣಾಮವನ್ನು ಉಂಟುಮಾಡಲಾರದ ಸ್ಥಿತಿಯಲ್ಲಿರುತ್ತಾನೆ. ಹೀಗೆಯೇ, ಯಾವಾಗ ನಿಮ್ಮ ಮನಸ್ಸು ಸಂಪೂರ್ಣವಾಗಿ ಭಕ್ತಿಯಲ್ಲಿ ಲೀನವಾಗಿರುತ್ತದೆಯೋ ಆಗ ನೀವು ಅಮರತ್ವವನ್ನು ಸಾಧಿಸುತ್ತೀರಿ. 'ಅಮೃತೋ ಭವತಿ'. ನೀವು ಅಮರರಾಗುತ್ತೀರಿ.
ಇಂದಿಗೂ ನಾವು ರಾಧಾ ಮತ್ತು ಗೋಪಿಕೆಯರ ಹೆಸರುಗಳೊಂದಿಗೆ ಕೃಷ್ಣನ ಹೆಸರನ್ನು ನೆನಪಿಸಿಕೊಳ್ಳುತ್ತೇವೆ. ಕೃಷ್ಣನಿಗೆ ಪ್ರಬಲರಾದ ರಾಜರುಗಳು ಮತ್ತು ಯುದ್ಧಪ್ರವೀಣರು ಸಹ ಭಕ್ತರಿದ್ದರು. ಆದರೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಗೋಪಿಕೆಯರನ್ನು ಕೃಷ್ಣನ ಭಕ್ತರಾಗಿ ನೆನಪಿಸಿಕೊಳ್ಳುತ್ತೇವೆ. ಗೋಪಿಕೆಯರು ಮತ್ತು ರಾಧೆ ಅನಕ್ಷರಸ್ಥರು; ಅವರು ವೇದಗಳನ್ನು ಮತ್ತು ಉಪನಿಷತ್ತುಗಳನ್ನು ಅಭ್ಯಸಿಸಲಿಲ್ಲ; ಅವರಿಗೆ ಯಾವುದೇ ಅಧಿಕಾರ, ಸಂಪತ್ತು ಹಾಗೂ ಹುದ್ದೆಗಳಿರಲಿಲ್ಲ. ಆದರೂ ಅವರೆಲ್ಲರನ್ನೂ ಪ್ರೇಮದಿಂದ ನೆನಪಿಸಿಕೊಳ್ಳುತ್ತೇವೆ. ನಿಜವಾಗಿ ಹೇಳಬೇಕೆಂದರೆ, ಕೃಷ್ಣನ ಹೆಸರಿಗೆ ಮೊದಲು ರಾಧೆಯ ಹೆಸರನ್ನು ಉಚ್ಚರಿಸುತ್ತೇವೆ - ರಾಧಾಕೃಷ್ಣ ಮತ್ತು ಕೃಷ್ಣನನ್ನು ಗೋಪಿನಾಥ ಎಂದು ವರ್ಣಿಸುತ್ತೇವೆ. ಏಕೆಂದರೆ, ಗೋಪಿಕೆಯರು ತಮ್ಮನ್ನು ತಾವೇ ಸಂಪೂರ್ಣವಾಗಿ ಅವನಿಗೆ ಅರ್ಪಿಸಿಕೊಂಡಿದ್ದರು.
ಅವರು, "ಹೇ ಕೃಷ್ಣಾ! ನೀನೇ ನಮ್ಮ ಒಡೆಯ; ನಮಗೆ ನಿನ್ನ ಹೊರತು ಬೇರೆ ಯಾರೂ ಇಲ್ಲ; ಹೌದು, ನಮಗೆ ಗಂಡ, ಮನೆ, ಮಕ್ಕಳು ಇದ್ದಾರೆ. ಆದರೆ, ನೀನೇ ನಮ್ಮ ಚಿತ್ತಚೋರ! ನೀನು ನಮ್ಮ ಹೃದಯಗಳನ್ನು ಕದ್ದುಬಿಟ್ಟಿರುವೆ. ಮುಂದೊಂದು ದಿನ ನಮ್ಮಲ್ಲಿ ಕೇವಲ ಮೂಳೆಗಳು ಮತ್ತು ಮಾಂಸ ಮಾತ್ರ ಉಳಿಯುತ್ತವೆ. ಉಳಿದೆಲ್ಲವೂ ನಿನ್ನ ಹತ್ತಿರವೇ ಇದೆ" ಎಂದು ಹೇಳಿ ಶರಣಾಗತರಾಗುವರು. ಕೃಷ್ಣನ ಮೇಲೆ ಗೋಪಿಕೆಯರ ಭಕ್ತಿಯು ಅಷ್ಟು ತೀವ್ರವಾಗಿತ್ತು.
ಅದೊಂದು ಅತ್ಯಂತ ಪರಿಶುದ್ಧವಾದ ಭಕ್ತಿಯಾದ್ದರಿಂದ, ಗೋಪಿಕೆಯರ ಭಕ್ತಿಗೆ ಯಾವ ಭಕ್ತಿಯೂ ಸರಿಸಾಟಿಯಾಗಿಲ್ಲ. ಅವರು ಕೃಷ್ಣನಿಂದ ಮರಳಿ ಏನನ್ನೂ ಅಪೇಕ್ಷಿಸಲಿಲ್ಲ. ಕೃಷ್ಣ ಬೃಂದಾವನವನ್ನು ಬಿಟ್ಟು ಹೊರಟಾಗ, ಅವರು ತಮ್ಮನ್ನು ತೊರೆದು ಹೋಗಬೇಡ ಎಂದು ಹೇಳಿ ಅವನನ್ನು ತಡೆದು ತಮ್ಮ ಹತ್ತಿರವೇ ಇರಬೇಕೆಂದು ದುಂಬಾಲು ಬೀಳಲಿಲ್ಲ. ಬದಲಾಗಿ, ಅವರು "ನಿನಗೆ ಎಲ್ಲಿಗೆ ಹೋಗಬೇಕೆನಿಸುವುದೋ ಅಲ್ಲಿಗೆ ಹೋಗು; ನಾವು ಇಲ್ಲಿಯೇ ಇದ್ದು ನಿನ್ನನ್ನು ಪ್ರೇಮಿಸಿ ಪೂಜಿಸುತ್ತೇವೆ; ನೀವು ನಮ್ಮ ಹತ್ತಿರವೇ ಇದ್ದು ನಮ್ಮನ್ನೇ ಪ್ರೇಮಿಸಲಿ ಎಂದು ನಾವು ಬಯಸುವುದಿಲ್ಲ. ನಿನ್ನನ್ನು ಅರಿತು ನಿನ್ನನ್ನು ಪ್ರೇಮಿಸುವ ಅವಕಾಶಕ್ಕಾಗಿ ನಾವು ನಿನಗೆ ಋಣಿಯಾಗಿದ್ದೇವೆ. ನಮಗೆ ನಿನ್ನನ್ನು ಪ್ರೇಮಿಸುತ್ತ ಇಲ್ಲಿಯೇ ಇರಲು ಸಂತೋಷವಾಗುತ್ತದೆ" ಎಂದು ಕೃಷ್ಣನಿಗೆ ಹೇಳಿದ್ದರು. ಇದು ನಿಜವಾದ ಭಕ್ತಿಗೆ ಅತ್ಯುತ್ತಮ ಉದಾಹರಣೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಸೇವಾ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.