ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spoorthyvani Spiritual column: ದೇವರು ಎಲ್ಲ ಕಡೆಗೆ ಇದ್ದರೂ ನಿಮಗೇಕೆ ಸಿಗುತ್ತಿಲ್ಲ? ಪರಮಾತ್ಮನ ದರ್ಶನಕ್ಕೆ ಬೇಕಾದ ಸಿದ್ಧತೆ ಇದು

ಅಶುದ್ಧವಾದ ಮನಸ್ಸುಳ್ಳವರು ದೇವರ ತತ್ತ್ವವನ್ನು ಅರಿಯಲಾರರು. ದೇವರ ಕೃಪೆಯನ್ನು ಪಡೆಯಲು ಇರುವ ಮೊದಲ ಹೆಜ್ಜೆ ಎಂದರೆ ಮನಸ್ಸನ್ನು ಶುದ್ಧ ಮಾಡಿಕೊಳ್ಳುವುದು. 'ಚಿತ್ತ ಶುದ್ಧಿ' ಎಂದರೆ, ಮನಸ್ಸನ್ನು ಪವಿತ್ರಗೊಳಿಸುವುದಕ್ಕಾಗಿ ಅದನ್ನು ಪರಿಶುದ್ಧಗೊಳಿಸುವುದು. ಇದರಿಂದ ಹೃದಯವು ಪರಿಶುದ್ಧವಾಗಿ ನಿಸ್ವಾರ್ಥ ಜೀವನ ನಡೆಸುವುದಕ್ಕೆ ನೆರವಾಗುತ್ತದೆ. ಇಂಥ ಜನರಿಗೆ ದೇವರು ತಾನೇ ಸ್ವತಃ ಪ್ರಕಟಗೊಳ್ಳುತ್ತಾನೆ.

ದೇವರು ಎಲ್ಲ ಕಡೆಗೆ ಇದ್ದರೂ ನಿಮಗೇಕೆ ಸಿಗುತ್ತಿಲ್ಲ?

-

Rakshita Karkera Rakshita Karkera Aug 30, 2025 6:00 AM

‘ಚಿತ್ತಶುದ್ಧಿ ಇಲ್ಲದ ಕ್ಷುದ್ರ ಮಾನವರಿಗೆ, ಆತ್ಮತತ್ತ್ವ ಹೇಗೆ ಲಭ್ಯವಾಗುವುದು? ಆತ್ಮತತ್ತ್ವ ಅತಿ ಶುದ್ಧ ಹೃದಯದವರಿಗೆ. ಸತ್ಯದ ಮಾತು, ಸಾಯಿ ಮಾತು’. (ಭಗವಾನ್ ಸತ್ಯ ಸಾಯಿ ಬಾಬಾ ಅವರು ರಚಿಸಿ ಹಾಡಿದ ಕನ್ನಡ ಪದ್ಯವಿದು) -ಭಗವಾನ್ ಸತ್ಯ ಸಾಯಿ ಬಾಬಾ ಅವರ ಈ ಮಾತು ಎಷ್ಟು ಸತ್ಯವಲ್ಲವೇ?

ಅಶುದ್ಧವಾದ ಮನಸ್ಸುಳ್ಳವರು ದೇವರ ತತ್ತ್ವವನ್ನು ಅರಿಯಲಾರರು. ದೇವರ ಕೃಪೆಯನ್ನು ಪಡೆಯಲು ಇರುವ ಮೊದಲ ಹೆಜ್ಜೆ ಎಂದರೆ ಮನಸ್ಸನ್ನು ಶುದ್ಧ ಮಾಡಿಕೊಳ್ಳುವುದು. 'ಚಿತ್ತ ಶುದ್ಧಿ' ಎಂದರೆ, ಮನಸ್ಸನ್ನು ಪವಿತ್ರಗೊಳಿಸುವುದಕ್ಕಾಗಿ ಅದನ್ನು ಪರಿಶುದ್ಧಗೊಳಿಸುವುದು. ಇದರಿಂದ ಹೃದಯವು ಪರಿಶುದ್ಧವಾಗಿ ನಿಸ್ವಾರ್ಥ ಜೀವನ ನಡೆಸುವುದಕ್ಕೆ ನೆರವಾಗುತ್ತದೆ. ಇಂಥ ಜನರಿಗೆ ದೇವರು ತಾನೇ ಸ್ವತಃ ಪ್ರಕಟಗೊಳ್ಳುತ್ತಾನೆ. ಇದನ್ನೇ ಯಮಧರ್ಮರಾಯನು ನಚಿಕೇತನಿಗೆ, "ನಾನು ಯಾರನ್ನು ಸ್ವೀಕರಿಸುತ್ತೇನೋ ಅವರಿಗೆ ಮಾತ್ರ ನಾನು ದೊರಕುತ್ತೇನೆ" ಎಂದು ಹೇಳಿರುವುದು.

"ಯಮೇವೈಷಾ ವೃಣುತೇ ತೇಲ ಲಭ್ಯಃ, ತಸ್ಯೈಷಾ ಆತ್ಮಾ ವೃಣುತೇ ತನುಮ್ ಸ್ವಾಮ್" - ಕಠೋಪನಿಷದ್ 1.2.2.3). 'ಬೇರೆ ಎಲ್ಲವನ್ನೂ ತ್ಯಜಿಸಿ, ಇದೊಂದನ್ನೇ ಯಾರು ಆಯ್ಕೆ ಮಾಡುತ್ತಾರೋ, ಅವರಿಗೆ ಮಾತ್ರ ಈ ಆತ್ಮತತ್ತ್ವವು ಪ್ರಕಟಗೊಳ್ಳುತ್ತದೆ'.

ದೇವರು ನಿಮ್ಮನ್ನು ಹೇಗೆ ಸ್ವೀಕರಿಸಲು ಬಯಸುತ್ತಾನೋ ಆ ರೀತಿಯಲ್ಲಿ ನೀವು ವರ್ತಿಸುವ ಆಶಯವನ್ನು ಹೊಂದಿರಬೇಕು. ಯಾವಾಗ ನೀವು ಆಳವಾಗಿ ಮತ್ತು ಪ್ರಾಮಾಣಿಕವಾಗಿ, 'ಹೇ ಪ್ರಭುವೇ! ನನಗೆ ಆತ್ಮತತ್ತ್ವದ ಜ್ಞಾನವನ್ನು ದಯವಿಟ್ಟು ಅನುಗ್ರಹಿಸು. ನೀನೇ ನನ್ನ ಮುಂದೆ ಪ್ರಕಟವಾಗು; ಈ ಜ್ಞಾನವನ್ನು ಪಡೆಯಲು ನೀನು ಏನು ಹೇಳುತ್ತೀಯೋ, ಅದನ್ನು ಮಾಡಲು ನಾನು ಸಿದ್ಧನಾಗಿದ್ದೇನೆ' ಎಂದು ಹಂಬಲಿಸಿದಾಗ ದೇವರು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಾನೆ.

ಈ ರೀತಿಯ ಹಂಬಲವಿಲ್ಲದ ಪ್ರಾರ್ಥನೆಯಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ನಿಮಗೆ ಹಸಿವಾದಾಗ ಬರೀ, 'ನನಗೆ ಚಪಾತಿ ಬೇಕು, ನನಗೆ ಚಪಾತಿ ಬೇಕು' ಎಂದು ಜಪಿಸುತ್ತಿದ್ದರೆ ನಿಮಗೆ ಚಪಾತಿ ಸಿಗುವುದಿಲ್ಲ. ನಿಮಗೆ ಚಪಾತಿ ಬೇಕಾದರೆ, ನೀವು ಅಡುಗೆಮನೆಗೆ ಹೋಗಬೇಕು. ಒಂದು ತಟ್ಟೆಯನ್ನು ಕೈಲಿ ತೆಗೆದುಕೊಳ್ಳಬೇಕು, ಆ ತಟ್ಟೆಯಲ್ಲಿ ಚಪಾತಿಯನ್ನು ಬಡಿಸಿಕೊಂಡು ಊಟದ ಮೇಜಿನ ಹತ್ತಿರ ಹೋಗಿ ಕುಳಿತುಕೊಂಡು, ಚಪಾತಿಯನ್ನು ತುತ್ತು ಮಾಡಿಕೊಂಡು ಬಾಯಿಗೆ ಹಾಕಿಕೊಂಡು ತಿನ್ನಬೇಕು. ನೀವು ಇಷ್ಟೆಲ್ಲಾ ಮಾಡದಿದ್ದರೆ, ನಿಮ್ಮ ಹತ್ತಿರ ಚಪಾತಿ ಇದ್ದರೂ ನಿಮ್ಮ ಹಸಿವು ಹಿಂಗುವುದಿಲ್ಲ.

ಅದರಂತೆಯೇ, ದೇವರು ಎಲ್ಲ ಕಡೆಗೆ, ನಿಮ್ಮ ಒಳಗಡೆ, ಹೊರಗಡೆ, ನಿಮ್ಮ ಸುತ್ತಮುತ್ತಲೂ ಇದ್ದಾನೆ. ಹಾಗಿದ್ದಾಗ, ಅವನು ನಿಮಗೆ ಸಿಗುತ್ತಿಲ್ಲ ಏಕೆ? ಏಕೆಂದರೆ, ನೀವು ಅವನನ್ನು ಪಡೆಯಲು ಸರಿಯಾಗಿ ಪ್ರಯತ್ನಿಸುತ್ತಿಲ್ಲ. ನೀವು ಮಾಡಬೇಕಾಗಿರುವ ಪ್ರಯತ್ನವಾದರೂ ಏನು? ಚಿತ್ತಶುದ್ಧಿಯೇ ನಿಮ್ಮ ಪ್ರಯತ್ನ. ನಿಮ್ಮ ಮನಸ್ಸು ಪವಿತ್ರವಾಗಿದ್ದರೆ, ಪರಿಶುದ್ಧವಾಗಿದ್ದರೆ, ನಿಮಗೆ ದೇವರು ಸುಲಭವಾಗಿ ಸಿಗುತ್ತಾನೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.