Gubbi News: ಒಳ್ಳೆ ಕೆಲಸಕ್ಕೆ ಕಲ್ಲು ಹಾಕುವವರೇ ಹೆಚ್ಚು : ಭಾರತಿ ಶ್ರೀನಿವಾಸ್
ಖಾಸಗಿ ಡೈರಿಗಳು ಪ್ರತಿದಿನ ಹಣ ಪಾವತಿ ಮಾಡುತ್ತದೆ ಎಂಬ ಕಾರಣಕ್ಕೆ ಖಾಸಗಿ ಡೈರಿಯತ್ತ ಹೋಗು ತ್ತಿದ್ದ ರೈತರಿಗೆ ಈಗ ನಂದಿನಿ ಒಕ್ಕೂಟದ ಕೆಲಸ ಅರಿವಿಗೆ ಬಂದಿದೆ. ಸರ್ಕಾರ ಸ್ವಾಮ್ಯದ ಕೆಎಂಎಫ್ ಹೈನುಗಾರಿಕೆಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿದೆ. ನಂದಿನಿ ಹಾಲಿನ ಡೈರಿ ಷೇರುದಾರರಿಗೆ ಆರೋಗ್ಯ ವಿಮೆ ಜಾರಿ ಮಾಡಿದೆ. ಈ ಹಿನ್ನಲೆ 25 ಸಾವಿರ ರೂಗಳ ಸಹಾಯಧನ, ಮರಣ ಹೊಂದಿದಲ್ಲಿ 50 ಸಾವಿರ ರೂ ಪರಿಹಾರ ಧನ ಸಹ ಸಿಗಲಿದೆ
-
ಗುಬ್ಬಿ: ರೈತ ಕುಟುಂಬದ ಆರ್ಥಿಕ ಸ್ವಾವಲಂಬಿತನಕ್ಕೆ ಸಹಕಾರ ನೀಡುವ ಹಾಲಿನ ಡೈರಿ ಆರಂಭಕ್ಕೆ ಹಲವು ಕಡೆ ಸಲ್ಲದ ರಾಜಕಾರಣ ಬೆರೆಸಿ ಅಡ್ಡಿಪಡಿಸಿದ್ದು ಸಾಕಷ್ಟು ನಿದರ್ಶನವಿದೆ. ಒಳ್ಳೆ ಕೆಲಸಕ್ಕೆ ಕಲ್ಲು ಹಾಕುವವರೇ ಹೆಚ್ಚಾಗಿದ್ದಾರೆ. ಆದರೂ ಮಹಿಳೆಯರ ಸ್ವಾವಲಂಬನೆಗೆ ಹಾಲಿನ ಸಹಕಾರ ಸಂಘ ಎಲ್ಲಡೆ ಪ್ರಾರಂಭಿಸುತ್ತೇನೆ ಎಂದು ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಗ್ರಹಾರ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ಹಾಗೂ ಹಾಲು ಶೇಖರಣಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಘಗಳು ಗ್ರಾಮದ ಅಭಿವೃದ್ಧಿಗೆ ಬದ್ಧವಾಗಿರುತ್ತದೆ. ಇಲ್ಲಿ ಸಲ್ಲದ ರಾಜಕಾರಣ ಬೇಕಿಲ್ಲ. ಮಹಿಳೆಯ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಹಾಲಿನ ಡೈರಿ ತೆರೆಯುವ ಕೆಲಸ ನಿರಂತರ ಮಾಡುತ್ತೇನೆ ಎಂದರು.
ಖಾಸಗಿ ಡೈರಿಗಳು ಪ್ರತಿದಿನ ಹಣ ಪಾವತಿ ಮಾಡುತ್ತದೆ ಎಂಬ ಕಾರಣಕ್ಕೆ ಖಾಸಗಿ ಡೈರಿಯತ್ತ ಹೋಗುತ್ತಿದ್ದ ರೈತರಿಗೆ ಈಗ ನಂದಿನಿ ಒಕ್ಕೂಟದ ಕೆಲಸ ಅರಿವಿಗೆ ಬಂದಿದೆ. ಸರ್ಕಾರ ಸ್ವಾಮ್ಯದ ಕೆಎಂಎಫ್ ಹೈನುಗಾರಿಕೆಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿದೆ. ನಂದಿನಿ ಹಾಲಿನ ಡೈರಿ ಷೇರುದಾರರಿಗೆ ಆರೋಗ್ಯ ವಿಮೆ ಜಾರಿ ಮಾಡಿದೆ. ಈ ಹಿನ್ನಲೆ 25 ಸಾವಿರ ರೂಗಳ ಸಹಾಯಧನ, ಮರಣ ಹೊಂದಿದಲ್ಲಿ 50 ಸಾವಿರ ರೂ ಪರಿಹಾರ ಧನ ಸಹ ಸಿಗಲಿದೆ. ರೈತನ ರಾಸುಗಳಿಗೆ ವಿಮೆ, ಮಕ್ಕಳ ಉನ್ನತ ವ್ಯಾಸಂಗಕ್ಕೆ 10 ಸಾವಿರ ಸಹಾಯಧನ ಜೊತೆಗೆ ಹಸುಗಳ ಆರೋಗ್ಯ ತಪಾಸಣೆ ಉಚಿತವಾಗಿ ಮಾಡಲಾಗುವುದು ಎಂದು ಒಕ್ಕೂಟದ ಅನುಕೂಲವನ್ನು ವಿವರಿಸಿದರು.
ಇದನ್ನೂ ಓದಿ: Tumkur News: ಸಾಹಿತ್ಯ ಸಹವಾಸ ಕಾರ್ಯಕ್ರಮ: ಸಾಹಿತ್ಯಕ ಕೊಡುಗೆಗಳ ಸಂಭ್ರಮ
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ತಾಲ್ಲೂಕಿನಲ್ಲಿ ವರ್ಷದೊಳಗೆ 147 ಹೊಸ ಹಾಲಿನ ಸಹಕಾರ ಸಂಘ ಆರಂಭವಾಗಿದೆ. ಈ ಪೈಕಿ ಸಿ.ಎಸ್.ಪುರ ಹೋಬಳಿಯಲ್ಲಿ ನಾಲ್ಕು ಹೊಸ ಡೈರಿ ಆರಂಭವಾಗಿದೆ. ಭಾರತಕ್ಕ ಅವರು ನಿರ್ದೇಶಕರಾದ ಬಳಿಕ ಡೈರಿಯ ಮಹತ್ವ ತಿಳಿಯುತ್ತಿದೆ. ಎಲ್ಲಾ ಗ್ರಾಮದಲ್ಲಿ ಹಾಲಿನ ಡೈರಿ ನೋಡಿದ ರೈತ ಮಹಿಳೆಯರು ಹೊಸದಾಗಿ ಹಸು ಎಮ್ಮೆ ಕಟ್ಟುತ್ತಿದ್ದಾರೆ. ಇದು ಮಹಿಳೆಯ ಆರ್ಥಿಕ ಕ್ರಾಂತಿ ಎನ್ನಬಹುದಾಗಿದೆ. ನಾನು ಸಹ ಹಾಲಿನ ಡೈರಿ ಮೂಲಕ ರಾಜಕೀಯಕ್ಕೆ ಎಂಟ್ರಿಯಾದೆ. ನಮ್ಮೂರಿನಲ್ಲಿ ಸಾಹಸ ಮಾಡಿ ಒಂದು ಡೈರಿ ನಡೆಸಿದೆ. ಆದರೆ ಈಗ ಖಾಸಗಿ ಡೈರಿಗಳ ಹಾವಳಿ ಹೆಚ್ಚಾಗಿದೆ. ಆದರೆ ಡೈರಿಯ ಒಳ ರಾಜಕಾರಣ, ಸ್ವಾರ್ಥ ಸಾಧನೆ, ಒಳಗಿನ ಕಮಿಷನ್ ದಂಧೆ ಎಲ್ಲವನ್ನೂ ಈಚೆಗೆ ನೋಡುತ್ತಿದ್ದೇನೆ. ನನ್ನ ಡೈರಿ ಸಹ ಮುಚ್ಚುವ ಹುನ್ನಾರ ನಡೆದಿದ್ದು ಸ್ಮರಿಸಬೇಕಿದೆ ಎಂದ ಅವರು ಡೈರಿ ಮಂಜೂರು ಮಾಡಲಾಗದ ಸ್ಥಿತಿಯನ್ನು ಬದಲಿಸಿ ಪ್ರತಿ ಗ್ರಾಮಕ್ಕೆ ಡೈರಿ ನೀಡುತ್ತಿದ್ದಾರೆ. ಭಾರತಕ್ಕ ಅವರ ಕೆಲಸ ಶ್ಲಾಘನೀಯ. ತುಮುಲ್ ಅಧ್ಯಕ್ಷ ಸ್ಥಾನ ಕುತಂತ್ರದಿಂದ ಕೈ ತಪ್ಪಿದೆ. ಮುಂದಿನ ದಿನದಲ್ಲಿ ಅಧ್ಯಕ್ಷರಾಗಿ ಹೆಚ್ಚು ಕೆಲಸ ಮಾಡುತ್ತಾರೆ ಎಂದರು.
ತಾಪಂ ಮಾಜಿ ಸದಸ್ಯ ಗೋವಿಂದರಾಜು ಮಾತನಾಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಸಿ.ಎಸ್.ಪುರ ಹೋಬಳಿಯಲ್ಲಿ ಡೈರಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿಂದೆ ಅಂಕಳಕೊಪ್ಪ ಮಾವಿನಹಳ್ಳಿ ಎರಡೇ ಡೈರಿ ಇದ್ದ ಕಾಲವಿತ್ತು. ಈಗ ಮತ್ತಷ್ಟು ಡೈರಿ ಆರಂಭ ವಾಗುತ್ತಿದೆ. ಇದ್ದ ಡೈರಿಯನ್ನು ಮುಚ್ಚಲು ಸತತ ಪ್ರಯತ್ನ ಮಾಡಿದ್ದವರು ಕಾರ್ಯದರ್ಶಿಯನ್ನು ನಾಪತ್ತೆ ಮಾಡಿ ಕಡತಗಳನ್ನು ಬೆಂಕಿಗೆ ಆಹುತಿ ಮಾಡಿದ್ದ ಪ್ರಕರಣ ಮರೆಯುವಂತಿಲ್ಲ. ಮನೆ ಬಾಗಿಲಿಗೆ ಹಾಲಿನ ಡೈರಿ ಬರುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದಕರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶಶಿಕಲಾ ನರಸಿಂಹಮೂರ್ತಿ, ಉಪಾಧ್ಯಕ್ಷೆ ಸಾವಿತ್ರಮ್ಮ ಸಿದ್ದೇಗೌಡ, ಮುಖಂಡರಾದ ಗಂಗಣ್ಣ, ಶಿವರಾಂ, ಸೈಫ್ ಆಲಿಖಾನ್, ಸೋಮಶೇಖರ್, ವೆಂಕಟೇಶ್, ಗಿರೀಶ್, ರಾಮು, ನರಸಿಂಹಮೂರ್ತಿ, ಪುರುಷೋತ್ತಮ್, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ರಾಜು, ಮಹೇಶ್, ಸುದೀಪ್, ಹಾಲಿನ ಸಹಕಾರ ಸಂಘದ ನಿರ್ದೇಶಕರಾದ ವರಮಹಾಲಕ್ಷ್ಮಿ, ಚಾಂದನಿ, ಅನುಸೂಯಮ್ಮ, ಚಿಕ್ಕತಾಯಮ್ಮ, ಶಿಲ್ಪ, ಸಾವಿತ್ರಿ, ಚಿಕ್ಕಮ್ಮ, ಗೌರಮ್ಮ, ರಾಧಾ ಸೇರಿದಂತೆ ಸ್ಥಳೀಯ ಹಾಲು ಉತ್ಪಾದಕರು ಇತರರು ಇದ್ದರು.