ಬೆಂಗಳೂರು: ಮನೆ, ಕಚೇರಿಯಲ್ಲಿ ನಾವು ಇಡುವ ಪ್ರತಿಯೊಂದು ವಸ್ತುವೂ ಕೂಡ ವಾಸ್ತು ಪ್ರಕಾರ ಇರಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra). ಇವುಗಳಲ್ಲಿ ಪುಸ್ತಕದ (vastu for books) ಕಪಾಟು ಕೂಡ ಸೇರಿದೆ. ಮನೆ, ಕಚೇರಿಯಲ್ಲಿ ಸಾಮಾನ್ಯವಾಗಿ ನಾವು ಇಡುವ ಪುಸ್ತಕದ ಕಪಾಟನ್ನು ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು, ಇದರಿಂದ ಏನು ಪರಿಣಾಮ ಉಂಟಾಗುತ್ತದೆ ಎನ್ನುವ ಕುರಿತು ವಾಸ್ತು (Vastu tips) ಶಾಸ್ತ್ರದಲ್ಲೂ ಉಲ್ಲೇಖಿಸಲಾಗಿದೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ಅದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆ ಅಥವಾ ಅಧ್ಯಯನ ಕೊಠಡಿಯಲ್ಲಿ ನಾವು ಪ್ರತಿಯೊಂದು ವಸ್ತುವನ್ನು ಕೂಡ ಸರಿಯಾದ ದಿಕ್ಕಿನಲ್ಲಿ ಇರಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಅಧ್ಯಯನ, ಕೆಲಸ ಮಾಡುವ ಸಾಮರ್ಥ್ಯ ವೃದ್ಧಿಯಾಗುವುದು. ವಾಸ್ತು ಶಾಸ್ತ್ರದಲ್ಲಿ ಪುಸ್ತಕದ ಕಪಾಟು ಇಡಲು ಒಂದು ನಿಗದಿತ ಪ್ರದೇಶವಿದೆ. ಇದರಿಂದ ಅದನ್ನು ಬಳಕೆ ಮಾಡುವವರಿಗೆ ಜೀವನದಲ್ಲಿ ಯಶಸ್ಸು, ಜ್ಞಾನ ಮತ್ತು ಧ್ಯಾನದ ಶಕ್ತಿ ಹೆಚ್ಚುವುದು.
ಜ್ಞಾನ ಮತ್ತು ಪ್ರಗತಿಯ ದಿಕ್ಕು ಎಂದು ಪರಿಗಣಿಸಲಾಗಿರುವ ಪೂರ್ವ ದಿಕ್ಕಿನಲ್ಲಿ ಪುಸ್ತಕಗಳನ್ನು ಇರಿಸಿದರೆ ಇದರಿಂದ ಸ್ಮರಣೆ ಶಕ್ತಿ ವೃದ್ಧಿಯಾಗುತ್ತದೆ. ಹೊಸ ಆಲೋಚನೆಗಳು ಹುಟ್ಟುತ್ತವೆ. ಪೂರ್ವ ದಿಕ್ಕಿನಿಂದ ಬರುವ ಶಕ್ತಿಯು ಏಕಾಗ್ರತೆ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಂಪತ್ತು ಮತ್ತು ವೃತ್ತಿ ಪ್ರಗತಿಯನ್ನು ಸೂಚಿಸುವ ಉತ್ತರ ದಿಕ್ಕಿನಲ್ಲಿ ಪುಸ್ತಕದ ಕಪಾಟು ಇರಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು ಮತ್ತು ಶಿಕ್ಷಣದಲ್ಲಿ ಪ್ರಗತಿ ಉಂಟಾಗುವುದು. ಮನಸ್ಸನ್ನು ಸ್ಥಿರವಾಗಿರಿಸಲು ಇದು ಸಹಾಯ ಮಾಡುತ್ತದೆ. ಅಧ್ಯಯನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.
ಈಶಾನ್ಯ ಪ್ರದೇಶವನ್ನು ಮನೆಯ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪುಸ್ತಕದ ಕಪಾಟನ್ನು ಇಡುವುದರಿಂದ ಜ್ಞಾನ ವೃದ್ಧಿಯಾಗುವುದು ಮನಸ್ಸಿನಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ದಿಕ್ಕು ನಿರಂತರ ಅಧ್ಯಯನ ಮಾಡಲು ಬಯಸುವವರಿಗೆ ಮಾನಸಿಕ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Vastu Tips: ಮನೆಯ ಸುಖ, ಶಾಂತಿ ಮೇಲೆ ಪ್ರಭಾವ ಬೀರುವ ಗಿಡಗಳ ಬಗ್ಗೆ ತಿಳಿದಿರಲಿ
ಈ ದಿಕ್ಕಿನಲ್ಲಿ ಇಡಬಾರದು
ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಪುಸ್ತಕಗಳನ್ನು ಇರಿಸಿದರೆ ಅದು ಅಧ್ಯಯನಕ್ಕೆ ತೊಂದರೆ ಉಂಟು ಮಾಡುತ್ತದೆ. ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.