ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆ ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಲ್ಲಿ ಅರ್ಹ ಮತದಾರರನ್ನು ಮರಳಿ ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ದೇಶಾದ್ಯಂತ ವಿಶೇಷ ಅಭಿಯಾನ ರೀತಿ ನಡೆಸಲು ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.
ಇದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ದೇಶಾದ್ಯಂತ ಕೇಳಿಬಂದ ಕಟು ಟೀಕೆಯ ಪರಿಣಾಮವೋ, ಅಥವಾ ಚುನಾವಣಾ ಆಯೋಗದ ಆಯುಕ್ತರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳ ಫಲಿತಾಂಶವೋ ತಿಳಿಯದು. ಅದೇನೇ ಇದ್ದರೂ, ಇಂಥದೊಂದು ಅಭಿಯಾನ, ಮರು ಪರಿಶೀಲನೆಯ ಅಗತ್ಯವಿತ್ತು. ಈ ಮೊದಲು ನಡೆಸಿದ ಎಸ್‌ಐಆರ್, ಮತದಾರ ಸ್ನೇಹಿ ಆಗಿರಲಿಲ್ಲ.
ಇದನ್ನೂ ಓದಿ: Vishwavani Editorial: ಭಾರತೀಯನ ಹೀರೋಗಿರಿ
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 13 ಕೋಟಿ ಹೆಸರುಗಳನ್ನು ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದು ರಾಜಕೀಯ ವಿವಾದ- ಜನಾ ಕ್ರೋಶಕ್ಕೆ ಕಾರಣವಾಗಿತ್ತು. ಎಸ್‌ಐಆರ್‌ಗೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಅಂತಿಮ ಪಟ್ಟಿಗೆ ಸೇರದ ಮತದಾರರು, ಇನ್ನೂ ನೋಂದಣಿಯಾಗದ ಮೊದಲ ಬಾರಿಗೆ ಮತ ಚಲಾಯಿಸಲಿರುವವರು ಹಾಗೂ ಯುವ ಮತದಾರರು ಈ ವಿಶೇಷ ಅಭಿಯಾನದಡಿ ಮತದಾರರ ಪಟ್ಟಿಗೆ ಸೇರಲು ಅವಕಾಶ ಇದೆ.
ಮತದಾರರ ನೋಂದಣಿ ನಿರಂತರ ಪ್ರಕ್ರಿಯೆ. ಎಸ್‌ಐಆರ್ ವೇಳೆ ನೋಂದಣಿಯಾಗದ ಕಾರಣಕ್ಕೆ ಅರ್ಹ ಮತದಾರರಿಗೆ ನೋಂದಣಿ ಅವಕಾಶ ನಿರಾಕರಿಸಲಾಗದು ಎಂದು ಆಯೋಗ ತಿಳಿಸಿದೆ. ಮರು ಸೇರ್ಪಡೆ ಅಭಿಯಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಈಗಿನ ಅಂತಿಮ ಮತದಾರರ ಪಟ್ಟಿ ಯನ್ನು ಎಸ್‌ಐಆರ್‌ಗೂ ಮುಂಚಿನ ಮತದಾರರ ಪಟ್ಟಿ ಜತೆ ಹೋಲಿಸಿ ನೋಡುತ್ತಾರೆ.
ಹಿಂದಿನ ಪಟ್ಟಿಯಲ್ಲಿ ಹೆಸರಿದ್ದು ಈಗ ಕಾಣೆಯಾಗಿದ್ದರೆ ಮರು ಸೇರ್ಪಡೆಗೆ ಅವಕಾಶವಿದೆ. ಮತಗಟ್ಟೆವಾರು ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಆ ಬಳಿಕ ಮನೆ ಮನೆಗೆ ತೆರಳಿ ಕೈಬಿಟ್ಟು ಹೋಗಿರುವ ಮತದಾರರ ಪ್ರಸ್ತುತ ಸ್ಥಿತಿ (ಖಾಯಂ ಸ್ಥಳಾಂತರ/ನಿಧನ) ಪರಿಶೀಲಿಸಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ.
ನಮೂನೆ-6 ಮೂಲಕ ಅರ್ಹರ ಹೆಸರನ್ನು ಮತ್ತೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಕಳೆದ ಬಾರಿ ಬಹುತೇಕ ಬಿಎಲ್‌ಒಗಳು ತಾವಿದ್ದಲ್ಲಿಗೇ ಮತದಾರರನ್ನು ಕರೆಸಿಕೊಂಡಿದ್ದರು. ಈ ಬಾರಿ ಹಾಗಾ ಗದಂತೆ, ಮತದಾರರ ಮನೆಗೆ ತೆರಳಿಯೇ ಪಟ್ಟಿ ಸಿದ್ಧಪಡಿಸುವಂತೆ ಕಟ್ಟುನಿಟ್ಟು ಮಾಡಬೇಕಿದೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಆಯೋಗದ ಕರ್ತವ್ಯ.