ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎಂಬುದೊಂದು ಮಾತಿದೆ. ಇದನ್ನು ಸಾಬೀತುಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ನಮ್ಮ ‘ಮಗ್ಗುಲುಮುಳ್ಳು ರಾಷ್ಟ್ರ’ ಪಾಕಿಸ್ತಾನ. ವಿನಾಕಾರಣ ಕಾರ್ಗಿಲ್ ಯುದ್ಧ ನಡೆಯುವುದಕ್ಕೆ ಪಾಕಿಸ್ತಾನದ ಧಾರ್ಷ್ಟ್ಯವೇ ಕಾರಣ. ಆಗ ಭಾರತವು ಪಾಕಿಸ್ತಾನ ಕ್ಕೆ ಸರಿಯಾಗಿ ಬಿಸಿಮುಟ್ಟಿಸಿದ್ದುಂಟು. ನಂತರ ಕೆಲಕಾಲ ಸುಮ್ಮನಿದ್ದ ಪಾಕ್, ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿ ಸಾಗುತ್ತಿದ್ದ ವಾಹನದ ಮೇಲೆ ಉಗ್ರರಿಂದ ದಾಳಿ ಮಾಡಿಸಿ 40 ಮಂದಿಯ ಸಾವಿಗೆ ಕಾರಣವಾಯಿತು.
ಜತೆಜತೆಗೆ ಭಾರತದಲ್ಲಿ ಒಂದಷ್ಟು ವಿಧ್ವಂಸಕ ಕೃತ್ಯಗಳು ನಡೆಯುವುದಕ್ಕೆ ಚಿತಾವಣೆಯನ್ನೂ ನೀಡುತ್ತಿತ್ತು. ಈ ಕಿಡಿಗೇಡಿತನಕ್ಕೆ ಪಾಠ ಕಲಿಸಲೆಂದು ಭಾರತ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿ ಪಾಕ್ ಕೃಪಾಪೋಷಿತ ಉಗ್ರರ ನೆಲೆಗಳನ್ನು ಹುಡಿಗಟ್ಟಿತು.
ಕೆಲಕಾಲ ಬ್ರೇಕ್ ತೆಗೆದುಕೊಂಡ ಪಾಕಿಸ್ತಾನ, ಮತ್ತದೇ ಉಗ್ರರನ್ನು ಛೂ ಬಿಟ್ಟು ಪಹಲ್ಗಾಮ್‌ನಲ್ಲಿ 26 ಮಂದಿಯ ಮಾರಣಹೋಮಕ್ಕೆ ಕಾರಣವಾಯಿತು. ಆಗ ಭಾರತ ಮತ್ತೊಮ್ಮೆ ಮೈಕೊಡವಿಕೊಂಡು ಎದ್ದು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಸಂಘಟಿಸಿದ ಪರಿಗೆ ಪಾಕಿಸ್ತಾನ ಅಕ್ಷರಶಃ ನಡುಗಿತು, ದಮ್ಮಯ್ಯ ಗುಡ್ಡೆ ಹಾಕಿ ‘ಕದನವಿರಾಮ’ ಸ್ಥಿತಿ ಏರ್ಪಡುವಂತೆ ನೋಡಿಕೊಂಡಿತು.
ಬೇರೆ ಯಾವುದಾದರೂ ದೇಶವಾಗಿದ್ದರೆ, ಇಷ್ಟೂ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಠ ಕಲಿಯ ಬೇಕಿತ್ತು. ಆದರೆ ಅಂಥ ಜಾಯಮಾನಕ್ಕೆ ಸೇರದ ಪಾಕಿಸ್ತಾನ ಈಗ ಮತ್ತೊಮ್ಮೆ ಬಾಲ ಬಿಚ್ಚಿದೆ. ಜಮ್ಮು-ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿರುವ ಗಡಿನಿಯಂತ್ರಣ ರೇಖೆಯ ಬಳಿ ಮೊನ್ನೆ ಕಿತಾಪತಿ ನಡೆಸಿದೆ. ಇದಕ್ಕೆ ಪಾಕಿಸ್ತಾನದ ಜನ್ಮಜಾತ ಧಾರ್ಷ್ಟ್ಯ ಕಾರಣವೋ ಅಥವಾ ‘ದೊಡ್ಡಣ್ಣ’ ಅಮೆರಿಕ ದಿಂದ ಸಿಗುತ್ತಿರುವ ಆರ್ಥಿಕ ಅಥವಾ ಮತ್ತಾವುದೇ ಸ್ವರೂಪದ ಬೆಂಬಲ ಕಾರಣವೋ ಎಂಬುದನ್ನು ಬಲ್ಲವರೇ ಹೇಳಬೇಕು.
‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಮಧ್ಯದಲ್ಲೇ ನಿಲ್ಲಿಸಬಾರದಿತ್ತು, ಪಾಕ್ ಗೆ ಬುದ್ಧಿ ಕಲಿಸಲು ಅದೊಂದು ಉತ್ತಮ ಅವಕಾಶವಾಗಿತ್ತು ಎನ್ನುವವರಿದ್ದಾರೆ; ಆದರೆ ಭಾರತವು ಮಾನವೀಯತೆಯ ದೃಷ್ಟಿಯಿಟ್ಟುಕೊಂಡು ಅದನ್ನು ಅಷ್ಟಕ್ಕೇ ನಿಲ್ಲಿಸಿತ್ತು. ಇದರ ‘ಉಪಕಾರ-ಸ್ಮರಣೆ’ಯಿಲ್ಲದ ಪಾಕಿಸ್ತಾನ ಮಾತ್ರ ತನ್ನ ಎಂದಿನ ಚಾಳಿಯನ್ನೇ ತೋರಿಸಿದೆ, ಅಲ್ಲವೇ?!