ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ನಾಡಗೀತೆಯಲ್ಲಿ ಬೌದ್ಧ ಧರ್ಮ

ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ಬೌದ್ಧ ಧರ್ಮದ ಹೆಸರನ್ನೂ ಸೇರ್ಪಡೆ ಗೊಳಿಸಲು ಚಿಂತನೆ ನಡೆದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಈ ಮಹತ್ವದ ಸಲಹೆ ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಕೆಯಾಗಿದೆ. ಕುವೆಂಪು ಅವರು ಬರೆದಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಇತ್ತು.

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯನ್ನು ಎಲ್ಲ ಸರಕಾರಿ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡಿ ಗೌರವಿಸಲಾಗುತ್ತದೆ. ಇದೀಗ ಹಾಡಿನ ಸಾಹಿತ್ಯದಲ್ಲಿ ಇನ್ನೊಂದು ಬದಲಾವಣೆ ಆಗುವ ಸಾಧ್ಯತೆ ಕಾಣಿಸಿದೆ.

ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ಬೌದ್ಧ ಧರ್ಮದ ಹೆಸರನ್ನೂ ಸೇರ್ಪಡೆಗೊಳಿಸಲು ಚಿಂತನೆ ನಡೆದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಈ ಮಹತ್ವದ ಸಲಹೆ ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಕೆಯಾಗಿದೆ. ಕುವೆಂಪು ಅವರು ಬರೆದಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಇತ್ತು. ಪರಿಷ್ಕೃತ ರೂಪದಲ್ಲಿ ಹಾಡನ್ನು ನಾಡಗೀತೆ ಯಾಗಿ ಅಂಗೀಕರಿಸಿದಾಗ ಅದನ್ನು ಕೈಬಿಡುವುದರೊಂದಿಗೆ, ಇನ್ನೂ ಹಲವು ಬದಲಾವಣೆಗಳನ್ನೂ ಮಾಡಲಾಗಿತ್ತು.

ಇದನ್ನೂ ಓದಿ: Vishwavani Editorial: ಭ್ರಷ್ಟರಿಗೆ ಶಿಕ್ಷೆಯಾಗಲಿ

ಇದೊಂದು ಸ್ವಾಗತಾರ್ಹ ಬದಲಾವಣೆಯೇ ಹೌದು. ಜೈನದಂತೆ ಬೌದ್ಧ ಕೂಡ ಕನ್ನಡ ನಾಡಿನ, ಈ ದೇಶದ ಹೆಮ್ಮೆಯ ಧರ್ಮಗಳಲ್ಲಿ ಒಂದು. ನಾಡಗೀತೆಯಲ್ಲಿ, ನಮ್ಮಲ್ಲಿಗೆ ಬೇರೆ ಕಡೆಯಿಂದ ಬಂದು ನೆಲೆಸಿದ ಪಾರಸಿಕ ಧರ್ಮದ ಉಲ್ಲೇಖವೂ ಇದೆ. 1924ರಲ್ಲಿ ಕುವೆಂಪು ಅವರು ಈ ಹಾಡನ್ನು ರಚಿಸಿದ್ದು, ಅದಕ್ಕೆ ನೂರು ವರ್ಷಗಳು ತುಂಬಿವೆ.

2004ರಲ್ಲಿ ರಾಜ್ಯ ಸರಕಾರ ನಾಡಗೀತೆಯಾಗಿ ಅಂಗೀಕರಿಸಿದೆ. ನೂರು ವರ್ಷಗಳ ಕಾಲದಲ್ಲಿ ಒಂದು ನಾಡು, ನುಡಿ, ಜನರು, ಆಶೆ ಆಶೋತ್ತರಗಳು ಎಲ್ಲವೂ ಬದಲಾಗುತ್ತವೆ. ಆದರೆ ನಾಡಗೀತೆಯ ಆಶಯ ಬದಲಾಗದು, ಬದಲಾಗಬಾರದು. ಇದು ಸರ್ವ ಜನಾಂಗದ ಶಾಂತಿಯ ತೋಟ. ಹಾಗಾಗಿ ಯೇ ಇಲ್ಲಿ ಶಂಕರ, ರಾಮಾನುಜ, ಮಧ್ವ, ಬಸವೇಶ್ವರ ಮೊದಲಾದ ಎಲ್ಲ ಆಧ್ಯಾತ್ಮಿಕ ವ್ಯಕ್ತಿಗಳಿಗೂ ಗೌರವ ಸಂದಿದೆ.

ಮೂಲ ಹಾಡಿನಲ್ಲಿ ಇಲ್ಲದ ಮಧ್ವರ ಹೆಸರನ್ನೂ ನಂತರ ಸೇರಿಸಲಾಗಿದೆ. ಒಟ್ಟಾರೆ ಆಶಯವೆಂದರೆ, ಸುಂದರ ನದಿವನಗಳ ನಾಡಾದ ಈ ಕರ್ನಾಟಕ ಎಲ್ಲ ಜನಾಂಗದವರು, ಎಲ್ಲ ಮತೀಯರು ಒಗ್ಗೂಡಿ ಸಹಬಾಳ್ವೆ ನಡೆಸಬೇಕಿದೆ. ರಾಷ್ಟ್ರಗೀತೆಯ ಆಶಯವೂ ಇದೇ. ಒಂದು ಹಾಡು ರಾಷ್ಟ್ರಗೀತೆ ಆದೊಡನೆ ಅದರಲ್ಲಿ ಎಲ್ಲ ಜನ ಸಮುದಾಯಗಳೂ ತಮ್ಮ ಪ್ರಾತಿನಿಧ್ಯವನ್ನು ಕಾಣಲು ಬಯಸಿದರೆ ತಪ್ಪೇನಿಲ್ಲ. ಆದರೆ ನಾಡಗೀತೆಯನ್ನು ಪದೇ ಪದೆ ತಿದ್ದುವುದು, ವಾದ ವಿವಾದದ ಆಡುಂಬೊಲ ವಾಗಿ ಬಳಸುವುದು ತಪ್ಪಬೇಕು. ತಜ್ಞರು ಕುಳಿತು ಈ ಬಗ್ಗೆ ಚರ್ಚಿಸಿ ಅಂತಿಮ ಸ್ವರೂಪವನ್ನು ನಿಷ್ಕರ್ಷಿಸಬೇಕಿದೆ.