Vishwavani Editorial: ಭ್ರಷ್ಟರಿಗೆ ಶಿಕ್ಷೆಯಾಗಲಿ
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎಂಬಂತೆ ಆಗಿರುವ ಕೆಪಿಎಸ್‌ಸಿಯ ದುರಸ್ತಿಯನ್ನು ಎಲ್ಲಿಂದ ಆರಂಭಿಸುವುದು ಎಂಬುದು ಲೋಕಾಯುಕ್ತರಿಗೂ, ಸಚಿವರಿಗೂ ಗೊತ್ತಾಗುತ್ತಿಲ್ಲ. ‘ನನಗೆ ಬಿಟ್ಟರೆ ಈ ಸಂಸ್ಥೆಯನ್ನೇ ರದ್ದುಪಡಿಸುವೆ’ ಎಂದು ಪ್ರಿಯಾಂಕ ಖರ್ಗೆ ಅವರು ವ್ಯಕ್ತಪಡಿಸಿರುವ ಆಕ್ರೋಶದಲ್ಲಿ ವಾಸ್ತವ ಇದೆ. ಮಾಧ್ಯಮಗಳಿಗೂ ಕೆಪಿಎಸ್‌ಸಿಯಲ್ಲಿ ತಳ ಊರಿರುವ ಭ್ರಷ್ಟರ ಬಗ್ಗೆ ಬರೆದೂ ಬರೆದೂ ಶಾಯಿ ಬತ್ತಿಹೋಗಿದೆ ಬಿಟ್ಟರೆ ಫಲವೇನೂ ಸಿಕ್ಕಿದಂತಿಲ್ಲ
-
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಹಗರಣಗಳಿಗೆ ಹೊಸತಲ್ಲ. ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳು ನಿರಂತರ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರದ ಆಡುಂಬೊಲಗಳಾಗಿ ಕುಖ್ಯಾತಿ ಪಡೆದಿವೆ. ಅದರ ಜೊತೆಗೆ ಇದೀಗ ನಕಲಿ ದಾಖಲೆ ಸಲ್ಲಿಕೆ, ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಅಕ್ರಮಗಳ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಕೆಪಿಎಸ್‌ಸಿ ಅಧ್ಯಕ್ಷರೊಬ್ಬರ ತಲೆದಂಡವಾಗಿದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತು ಗೊಳಿಸಲಾಗಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಅಧ್ಯಕ್ಷರು ಇಂಥದೊಂದು ‘ದಾಖಲೆ’ ಮಾಡಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್ ಸಾಹುಕಾರ ವಿರುದ್ಧ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಮಾಸಿಕ 2.25 ಲಕ್ಷ ರೂ. ಆದಾಯ ಹೊಂದಿರುವ ತಮ್ಮ ತಂದೆಯ ಆದಾಯವನ್ನು ಅರ್ಜಿಯಲ್ಲಿ 40 ಸಾವಿರ ಎಂದು ತೋರಿಸಿದ್ದಾರೆ.
ಇದನ್ನೂ ಓದಿ: KPSC chairman: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ
ಕ್ರೀಮಿ ಲೇಯರ್ ವಿನಾಯಿತಿ ಪಡೆದಿದ್ದಾರೆ. ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ ಎಲ್ಲವೂ ಇಲ್ಲಿ ನಡೆದಿವೆ. ಇದು ಒಂದು ಪ್ರಕರಣ. ಈ ಅಧಿಕಾರಿ ತನ್ನ ಅಧಿಕಾರಾವಧಿ ಯಲ್ಲಿ ಇನ್ನೇನೇನು ಮಾಡಿರಬಹುದು? ಊಹಿಸಲೂ ಸಾಧ್ಯವಿಲ್ಲ. ಎಲ್ಲರ ಕಣ್ಣೆದುರೇ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಅರ್ಜಿ ನೀಡುವ ಭಂಡತನಕ್ಕೆ ಮಿತಿಯೇ ಇದ್ದಂತಿಲ್ಲ.
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎಂಬಂತೆ ಆಗಿರುವ ಕೆಪಿಎಸ್‌ಸಿಯ ದುರಸ್ತಿಯನ್ನು ಎಲ್ಲಿಂದ ಆರಂಭಿಸುವುದು ಎಂಬುದು ಲೋಕಾಯುಕ್ತರಿಗೂ, ಸಚಿವರಿಗೂ ಗೊತ್ತಾಗುತ್ತಿಲ್ಲ. ‘ನನಗೆ ಬಿಟ್ಟರೆ ಈ ಸಂಸ್ಥೆಯನ್ನೇ ರದ್ದುಪಡಿಸುವೆ’ ಎಂದು ಪ್ರಿಯಾಂಕ ಖರ್ಗೆ ಅವರು ವ್ಯಕ್ತಪಡಿಸಿರುವ ಆಕ್ರೋಶದಲ್ಲಿ ವಾಸ್ತವ ಇದೆ. ಮಾಧ್ಯಮಗಳಿಗೂ ಕೆಪಿಎಸ್‌ಸಿಯಲ್ಲಿ ತಳ ಊರಿರುವ ಭ್ರಷ್ಟರ ಬಗ್ಗೆ ಬರೆದೂ ಬರೆದೂ ಶಾಯಿ ಬತ್ತಿಹೋಗಿದೆ ಬಿಟ್ಟರೆ ಫಲವೇನೂ ಸಿಕ್ಕಿದಂತಿಲ್ಲ. ಈ ಎಲ್ಲ ಭ್ರಷ್ಟಾಚಾರದಿಂದ ಸಂತ್ರಸ್ತರಾದ ಯುವಕರಲ್ಲಿ ಕೂಡ ಆಕ್ರೋಶವಿದೆ. ಆದರೆ ಮುಂದಿನ ಪರಿಣಾಮಗಳನ್ನು ಊಹಿಸಿ ಕೊಂಡು ಕಾನೂನು ಕ್ರಮ ಕೈಗೆತ್ತಿಕೊಳ್ಳಲು ಹಿಂಜರಿಯುತ್ತಾರೆ.
ಕೆಪಿಎಸ್‌ಸಿಯಂತಹ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆ ಉಳಿಯಬೇಕು. ಅದಕ್ಕಾಗಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸುವುದು ಅನಿವಾರ‍್ಯ ಆಗಿದೆ. ಯಾವುದೇ ಪ್ರಭಾವ, ವಶೀಲಿ ಬಾಜಿ ಇಲ್ಲದೆ ನಿಷ್ಪಕ್ಷಪಾತ ತನಿಖೆ ನಡೆದು ಭ್ರಷ್ಟರ ತಲೆದಂಡ ಆಗಬೇಕು. ಇಲ್ಲವಾದರೆ ಕೆಪಿಎಸ್‌ಸಿಯ ಸಂಶಯಾಸ್ಪದ ಇಮೇಜ್ ಹಾಗೆಯೇ ಮುಂದುವರಿಯಲಿದೆ.