ಒಂದು ಕಾಲಕ್ಕೆ ಪಂಜಾಬ್ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟಜಾಲವು ಅತಿರೇಕ ಎಂಬಷ್ಟರ ಮಟ್ಟಿಗೆ ಸಕ್ರಿಯವಾಗಿದ್ದು ಹಾಗೂ ಮಾದಕ ದ್ರವ್ಯದ ವ್ಯಸನಿಗಳ ಸಂಖ್ಯೆ ಅಲ್ಲಿ ಕಳವಳಕಾರಿ ಮಟ್ಟವನ್ನು ಮುಟ್ಟಿದ್ದು ಗೊತ್ತಿರುವಂಥದ್ದೇ. ಹೀಗೆ ನಶೆಯಲ್ಲಿ ತೇಲುವವರು ಹೆಚ್ಚಿದ್ದಾರೆ ಎಂಬ ಕಾರಣಕ್ಕಾಗಿಯೇ ಆ ರಾಜ್ಯವನ್ನು ‘ಉಡ್ತಾ ಪಂಜಾಬ್’ ಎಂದು ಕರೆದಿದ್ದೂ ಉಂಟು.
ಹಾಗೆಂದ ಮಾತ್ರಕ್ಕೆ ದೇಶದ ಮಿಕ್ಕ ರಾಜ್ಯಗಳು ಡ್ರಗ್ಸ್ ದಂಧೆಕೋರರ ಕಬಂಧಬಾಹುಗಳಿಂದ ಮುಕ್ತವೇನೂ ಆಗಿಲ್ಲ ಎಂಬುದಕ್ಕೆ ಕಾಲಾನುಕಾಲಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಎಂಜಿನಿಯರ್‌ಗಳು, ಕಾನೂನು ವಿದ್ಯಾರ್ಥಿ, ಬೌನ್ಸರ್ ಸೇರಿದಂತೆ ಹತ್ತು ಮಂದಿ ಡ್ರಗ್ ಪೆಡ್ಲರ್'ಗಳನ್ನು ಮೊನ್ನೆ ಬೆಂಗಳೂರಿನಲ್ಲಿ ಬಂಧಿಸಿರುವುದು ಇದಕ್ಕೆ ಸಾಕ್ಷಿ. ಇವರಿಂದ ಬರೋಬ್ಬರಿ 4 ಕೋಟಿ ರುಪಾಯಿ ಮೌಲ್ಯದ ಅಮಲು ಕಾರಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುತ್ತದೆ ಸುದ್ದಿ.
ಇದನ್ನೂ ಓದಿ: Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ
‘ಟಿಪ್ ಆಫ್ ದಿ ಐಸ್‌ಬರ್ಗ್’ ಎಂಬ ಮಾತಿನಂತೆ, ಇದು ತೋರಿಕೆಯ ಭಾಗವಷ್ಟೇ ಮತ್ತು ಕಡಿತಕ್ಕೆ ಸಿಕ್ಕಿರುವುದು ‘ಡ್ರಗ್ಸ್ ದಂಧೆ’ ಎಂಬ ವಿಷವೃಕ್ಷದ ಪುಟ್ಟ ರೆಂಬೆಯಷ್ಟೇ. ಈ ಪಿಡುಗನ್ನು ಗಂಭೀರವಾಗಿ ಪರಿಗಣಿಸಿ ಆಳಶೋಧಕ್ಕೆ ಇಳಿದಲ್ಲಿ ದೊಡ್ಡ ತಿಮಿಂಗಿಲಗಳೇ ಸಿಕ್ಕಾವು. ಆದ್ದರಿಂದ ಪೊಲೀಸ್ ವ್ಯವಸ್ಥೆಯು ಈ ನಿಟ್ಟಿನಲ್ಲಿ ಟೊಂಕಕಟ್ಟಿ ನಿಲ್ಲಬೇಕಿದೆ. ಏಕೆಂದರೆ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪ್ರಾಯದ ಹುಡುಗರೇ ಟಾರ್ಗೆಟ್.
ವಿಶ್ವದ ಬೇರೆಲ್ಲೂ ಇಲ್ಲದಷ್ಟರ ಮಟ್ಟಿಗೆ ಅಗಾಧ ಪ್ರಮಾಣದ ಯುವಶಕ್ತಿಯನ್ನು ಹೊಂದಿರುವ ದೇಶ ನಮ್ಮದು. ಆದರೆ, ಡ್ರಗ್ಸ್ ದಂಧೆಕೋರರು ಈ ಯುವಜನರ ಸ್ವಾಸ್ಥ್ಯವನ್ನೇ ಹದಗೆಡಿಸಿ, ದೇಶದ ಒಟ್ಟಾರೆ ಕರ್ತೃತ್ವ ಶಕ್ತಿಗೆ ಧಕ್ಕೆ ತರುತ್ತಿದ್ದಾರೆ. ಆದ್ದರಿಂದ ಈ ಸಂಚಿಗೆ ಕೊಡಲಿಪೆಟ್ಟು ನೀಡಲೇ ಬೇಕು...