ಹಿಂದಿ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಸರಕಾರಿ ಆದೇಶದ ಗೊಂದಲದ ನಡುವೆ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ದಾಖಲೆಯು ಶೇ. 94.1 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕರೊನಾ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ ಸಂದರ್ಭ ಬಿಟ್ಟರೆ ಇದು ಅತ್ಯಧಿಕ ಫಲಿತಾಂಶ.
ಪ್ರಾಥಮಿಕ ಶಿಕ್ಷಣ ಸಚಿವರು ಇದೊಂದು ಸಾಧನೆ ಎಂಬಂತೆ ಬಿಂಬಿಸಿದರೂ ಇದರ ಹಿಂದಿರುವ ವಾಸ್ತವ ಆತಂಕಕಾರಿಯಾಗಿದೆ. ಹಿಂದಿ ಪರೀಕ್ಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರಕಾರದ ದಿಢೀರ್ ಆದೇಶ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ಈ ಗೊಂದಲದ ನಡುವೆಯೇ ಹೈಕೋರ್ಟ್ ಆದೇಶದಂತೆ ಹಿಂದಿಯನ್ನೂ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಸರಕಾರದ ಯೋಜನೆಯಂತೆ ಫಲಿತಾಂಶದ ಪ್ರಮಾಣವೂ ಹೆಚ್ಚಳವಾಗಿದೆ.
ಆದರೆ ಹೇಗಾದರೂ ಮಾಡಿ ಉತ್ತೀರ್ಣತೆ ಪ್ರಮಾಣ ಹೆಚ್ಚಿಸುವ ಸರಕಾರದ ಹಠಾತ್ ಕ್ರಮಗಳಿಂದ ಶಿಕ್ಷಣದ ಗುಣಮಟ್ಟದ ಮೇಲೆ ಅಡ್ಡಪರಿಣಾಮ ಬೀರುವುದೇ ಎಂಬ ಆತಂಕ ಪೋಷಕರಲ್ಲಿದೆ. ಎಂದಿನಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿದ್ದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದಿರುವುದು ಪ್ರಾದೇಶಿಕ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ.
ಇದನ್ನೂ ಓದಿ: Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ
ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆ ಈ ಭಾಗದ ಹಿನ್ನಡೆಗೆ ಮುಖ್ಯ ಕಾರಣ ಎಂಬುದು ಜಗಜ್ಜಾಹೀರು. ಎಲ್ಲಕ್ಕಿಂತ ಆತಂಕದ ವಿಷಯವೆಂದರೆ, ತಾಯಿ ನುಡಿಯಾದ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು. ಇದಕ್ಕೆ ಒಂದೋ ನಮ್ಮ ಭಾಷಾ ಬೋಧನೆಯ ವೈಫಲ್ಯ ಇಲ್ಲವೇ ವಿದ್ಯಾರ್ಥಿಗಳಲ್ಲಿ ಭಾಷೆಯ ಮೇಲಿರುವ ನಿರಾಸಕ್ತಿ ಕಾರಣ ಎನ್ನುವುದು ಸ್ಪಷ್ಟ.
ತೇರ್ಗಡೆ ಪ್ರಮಾಣವನ್ನು ಹೆಚ್ಚಿಸಲು ಅಂಕಗಳನ್ನು ಉದಾರವಾಗಿ ನೀಡುವುದು ಅಥವಾ ಮೌಲ್ಯ ಮಾಪನದ ಮಾನದಂಡಗಳನ್ನು ಸಡಿಲಗೊಳಿಸುವುದು ದೀರ್ಘಕಾಲದ ದೃಷ್ಟಿಯಿಂದ ಅಪಾಯ ಕಾರಿ. ಇದು ಮುಂದಿನ ಹಂತದ ಪಿಯುಸಿ ಅಥವಾ ವೃತ್ತಿಪರ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಅರೆಬರೆ ಸಿದ್ಧಗೊಳಿಸಿದಂತೆ ಆಗುತ್ತದೆ. ಕೇವಲ ಅಂಕಿ-ಅಂಶಗಳ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಅಳೆಯು ವ ಪ್ರವೃತ್ತಿಯನ್ನು ಸರಕಾರ ಕೈಬಿಡಬೇಕಿದೆ.
ಉತ್ತೀರ್ಣರಾದವರ ಸಂಖ್ಯೆಗಿಂತ, ಅರ್ಹತೆ ಮತ್ತು ಜ್ಞಾನದ ಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ವಿಶೇಷ ವಾಗಿ ಕನ್ನಡ ಭಾಷಾ ಕಲಿಕೆಯಲ್ಲಿನ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಹಂತ ದಲ್ಲಿಯೇ ಭಾಷಾ ಬುನಾದಿಯನ್ನು ಭದ್ರಪಡಿಸುವ ಕೆಲಸವಾಗಬೇಕಿದೆ. ಶಿಕ್ಷಣ ಕ್ಷೇತ್ರವು ಕೇವಲ ’ಪಾಸ್’ ಪ್ರಮಾಣ ಪತ್ರ ನೀಡುವ ಕಾರ್ಖಾನೆಯಾಗಬಾರದು; ಅದು ಗುಣಮಟ್ಟದ ಪ್ರಜೆಗಳನ್ನು ರೂಪಿಸುವ ಕೇಂದ್ರವಾಗಬೇಕು.