Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ
ತೃತೀಯ ಭಾಷೆಯ ಅಂಕಗಳನ್ನು ಅಂಕಪಟ್ಟಿಗೆ ಸೇರಿಸುವುದಿಲ್ಲ, ಅದಕ್ಕೆ ಬರೀ ಗ್ರೇಡ್ ನೀಡಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ರಾಜ್ಯದಲ್ಲಿ ಶೇ.70 ವಿದ್ಯಾರ್ಥಿಗಳ ತೃತೀಯ ಭಾಷೆ ಹಿಂದಿಯೇ. ಉಳಿದಂತೆ ನಗರಪ್ರದೇಶಗಳಲ್ಲಿ ಕನ್ನಡವೂ ಆಗುತ್ತದೆ. ಕೆಲವೇ ಕೆಲವು ಕಡೆ ಇತರೆ ಭಾಷೆಗಳೂ ತೃತೀಯ ಭಾಷೆ ಆಗಬಹುದು.
-
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹತ್ತಿರವಿರುವಾಗ ಅನಿರೀಕ್ಷಿತವಾದ ನಿರ್ಧಾರ ತೆಗೆದು ಕೊಂಡಿದ್ದ ರಾಜ್ಯ ಶಿಕ್ಷಣ ಸಚಿವರು, ಹಿಂದಿ ಅಂಕವನ್ನು ಅಂಕಪಟ್ಟಿಗೆ ಸೇರಿಸುವುದಿಲ್ಲ. ಬದಲಿಗೆ ಅದಕ್ಕೆ ಗ್ರೇಡ್ ಮಾತ್ರ ನೀಡುವುದಾಗಿ ತಿಳಿಸಿದ್ದರು. ಅದರ ವಿರುದ್ಧ ಪೋಷಕರು ಉಚ್ಚ ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಪೀಠ, ಈ ವರ್ಷ ಹಿಂದಿ ಅಂಕವನ್ನು ಅಂಕಪಟ್ಟಿಗೆ ಸೇರಿಸಿ, ಮುಂದಿನ ವರ್ಷಕ್ಕೆ ಬೇಕಾದರೆ ನೀವು ನಿರ್ಧರಿಸಿ ಎಂದು ಉಚ್ಚ ನ್ಯಾಯಾಲಯ ಹೇಳಿದೆ
ಈ ವೇಳೆ ನಡೆದ ವಾದದಲ್ಲಿ ರಾಜ್ಯದಲ್ಲಿ ಗ್ರಾಮೀಣ ಭಾಗದ ಶೇ.80ರಷ್ಟು ವಿದ್ಯಾರ್ಥಿಗಳು ಹಿಂದಿಯ ಕಾರಣಕ್ಕೆ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣಗೊಳ್ಳುತ್ತಿದ್ದಾರೆ ಎಂದು ಸರಕಾರ ವಾದಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ನಿಮ್ಮ ಮಾತು ಕೇಳಲು ಚೆನ್ನಾಗಿದೆ. ಈ ವರ್ಷಕ್ಕೆ ಹಿಂದಿ ಅಂಕ ಅಂಕಪಟ್ಟಿಗೆ ಸೇರಲಿ ಎಂದು ಹೇಳಿದೆ. ಒಟ್ಟಾರೆ ಇಡೀ ವಿವಾದವನ್ನು ಗಮನಿಸಿದಾಗ, ಸರಕಾರದ ಒಟ್ಟಾರೆ ವಾದ ಗೊಂದಲಮಯವಾಗಿದೆ ಎಂದು ಅನಿಸುತ್ತದೆ.
ತೃತೀಯ ಭಾಷೆಯ ಅಂಕಗಳನ್ನು ಅಂಕಪಟ್ಟಿಗೆ ಸೇರಿಸುವುದಿಲ್ಲ, ಅದಕ್ಕೆ ಬರೀ ಗ್ರೇಡ್ ನೀಡಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ರಾಜ್ಯದಲ್ಲಿ ಶೇ.70 ವಿದ್ಯಾರ್ಥಿಗಳ ತೃತೀಯ ಭಾಷೆ ಹಿಂದಿಯೇ. ಉಳಿದಂತೆ ನಗರಪ್ರದೇಶಗಳಲ್ಲಿ ಕನ್ನಡವೂ ಆಗುತ್ತದೆ. ಕೆಲವೇ ಕೆಲವು ಕಡೆ ಇತರೆ ಭಾಷೆಗಳೂ ತೃತೀಯ ಭಾಷೆ ಆಗಬಹುದು.
ತೃತೀಯ ಭಾಷಾ ಪರೀಕ್ಷೆಯ ಅಂಕ ಅಂಕಪಟ್ಟಿಗೆ ಸೇರುವುದಿಲ್ಲ ಎಂದರೆ ಮಕ್ಕಳು ಯಾಕೆ ಅದನ್ನು ಓದುತ್ತಾರೆ? ಯಾಕೆ ಪಾಠ ಕೇಳುತ್ತಾರೆ? ಅದಕ್ಕೆ ಸರಕಾರ ಯಾಕೆ ಶಿಕ್ಷಕರನ್ನು ನೇಮಿಸುತ್ತದೆ? ಖಾಸಗಿ ಶಾಲೆಗಳು ತೃತೀಯ ಭಾಷೆಯನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಸಾವಿರಾರು ಹಿಂದಿ ಶಿಕ್ಷಕರು ಬೀದಿಗೆ ಬರುತ್ತಾರೆ. ಇನ್ನು ಮಕ್ಕಳಂತೂ ಹಿಂದಿ ಕಲಿಕೆಯ ಗೊಡವೆಗೆ ಹೋಗುವುದಿಲ್ಲ.
ಇಂತಹದ್ದೊಂದು ಮಹತ್ವದ ನಿರ್ಧಾರ ಮಾಡುವ ಮುನ್ನ ಸರಕಾರ ಒಮ್ಮೆ ಜನರು, ಪೋಷಕರ ಅಭಿಪ್ರಾಯವನ್ನೂ ಕೇಳುವುದು ಒಳ್ಳೆಯದಿತ್ತು. ತಮಗೆ ಯಾವುದು ಬೇಕೋ, ಅದನ್ನು ಆಯ್ದು ಕೊಳ್ಳುವುದು ಅಂತಿಮವಾಗಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಿಟ್ಟಿದ್ದು. ಸರಕಾರವೇ ಎಲ್ಲವನ್ನೂ ನಿರ್ಧರಿಸುತ್ತ ಹೋದರೆ, ಒಂದು ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಳ್ಳುವುದಿಲ್ಲ. ಜನರ ಆಶಯ ವನ್ನು ಗಮನಿಸದೇ ಹೋದರೆ ಅದನ್ನು ವ್ಯವಸ್ಥೆಯೆನ್ನಲಾಗುತ್ತದೆಯೇ?.