ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಎಬೋಲಾ: ಎಚ್ಚರಿಕೆ ಇರಲಿ

ಎಬೋಲಾ ಸಾಂಕ್ರಾಮಿಕ ಭಾರತದೊಳಕ್ಕೆ ಬರದಂತೆ ತಡೆಯುವ ಹಿನ್ನೆಲೆಯಲ್ಲಿ ಈ ನಡೆ ಸಮಂಜಸವಾಗಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಧ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ ಇದನ್ನು ‘ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ನಾವೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

Vishwavani Editorial: ಎಬೋಲಾ: ಎಚ್ಚರಿಕೆ ಇರಲಿ

-

Profile
Ashok Nayak May 22, 2026 7:12 AM

ಎಬೋಲಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮೇ 28ರಿಂದ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ-ಆಫ್ರಿಕಾ ಒಕ್ಕೂಟ ನಡುವಿನ ಶೃಂಗಸಭೆಯನ್ನು ಮುಂದೂಡಲಾಗಿದೆ. ಆಫ್ರಿಕಾ ಖಂಡದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಹಾವಳಿ ಕಂಡುಬಂದಿದ್ದು, ಇದುವರೆಗೂ 91 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಭಾರತ ಮತ್ತು ಆಫ್ರಿಕನ್ ಒಕ್ಕೂಟವು ನಾಲ್ಕನೇ ಭಾರತ-ಆಫ್ರಿಕಾ ವೇದಿಕೆಯ ಶೃಂಗಸಭೆಯ ಸಿದ್ಧತೆ ಯನ್ನು ದೆಹಲಿಯಲ್ಲಿ ಕೈಗೊಂಡಿತ್ತು. ಆಫ್ರಿಕಾದಲ್ಲಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಶೃಂಗಸಭೆಯನ್ನು ಮುಂದೂಡುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಇದನ್ನೂ ಓದಿ: Vishwavani Editorial: ಬೀದಿಗಳನ್ನು ಸುರಕ್ಷಿತಗೊಳಿಸಿ

ಎಬೋಲಾ ಸಾಂಕ್ರಾಮಿಕ ಭಾರತದೊಳಕ್ಕೆ ಬರದಂತೆ ತಡೆಯುವ ಹಿನ್ನೆಲೆಯಲ್ಲಿ ಈ ನಡೆ ಸಮಂಜಸವಾಗಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಧ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ ಇದನ್ನು ‘ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ನಾವೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಇನ್ನೊಂದು ಕಡೆ ಹಂಟಾ ವೈರಸ್ ಕೂಡ ಭೀತಿ ಮೂಡಿಸಿದೆ. ಹಂಟಾವೈರಸ್ ತೀರಾ ಸಾಂಕ್ರಾಮಿಕ ವೇನಲ್ಲ. ಆದರೆ ಎಬೋಲಾ ಕ್ಷಿಪ್ರಗತಿಯಲ್ಲಿ ಹರಡುವ ಗುಣ ಹೊಂದಿದೆ. ಎಬೋಲಾ ಪೀಡಿತರ ಮರಣ ಪ್ರಮಾಣ 50 ಶೇಕಡದಷ್ಟಿದೆ. ಎಬೋಲಾಕ್ಕೆ ಲಸಿಕೆ ಇದೆ. ಆದರೆ ಬುಂಡಿಬುಗ್ಯೊ ಎಂಬ ಹೆಸರಿನ ಅದರ ರೂಪಾಂತರಿ ತಳಿಯೊಂದು ಅತಿ ಮಾರಕವಾಗಿದ್ದು, ಈ ಲಸಿಕೆ ಅದರೆದುರು ಕೆಲಸ ಮಾಡುತ್ತಿಲ್ಲ.

ಹೀಗಾಗಿ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಮತ್ತು ಸನ್ನದ್ಧತಾ ಕ್ರಮಗಳನ್ನು ಹೆಚ್ಚಿಸಬೇಕಿದೆ. ಎಬೋಲಾ ವೈರಸ್ ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಮಾಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಎರಡೂ ವೈರಸ್‌ಗಳೂ ಭಾರತಕ್ಕೆ ಹರಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಎಲ್ಲರೂ ಕೋವಿಡ್ ಕಾಲದ ಸ್ವಚ್ಛತೆಯ ರೂಢಿ, ಸ್ಯಾನಿಟೈಸರ್ ಬಳಕೆ ಇತ್ಯಾದಿಗಳನ್ನು ಕೈಗೊಂಡರೆ ತಪ್ಪೇನಿಲ್ಲ.

ಕೋವಿಡ್‌ನಂತೆ ಇದು ಸುಲಭವಾಗಿ ಹರಡುವುದಿಲ್ಲ ಎಂದು ತಿಳಿಸಲಾಗಿದ್ದರೂ, ಜಗತ್ತೇ ಒಂದು ಗ್ರಾಮದಂತಾಗಿರುವ ಈ ಸನ್ನಿವೇಶದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ. ಆಫ್ರಿಕಾದಿಂದ ಬರುವವರ ಆರೋಗ್ಯ ತಪಾಸಣೆ, ಕ್ವಾರಂಟೈನ್ ಪ್ರೋಟೋಕಾಲ್ ಅಗತ್ಯವಾದೀತು.