ಭೂರಾಜಕೀಯ, ಔದ್ಯಮಿಕ ಕ್ಷೇತ್ರ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತವು ‘ವಿಶ್ವಗುರು’ ಆಗುವತ್ತ ದಾಪುಗಾಲು ಹಾಕುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ವಿಶ್ವದ ಒಂದಿಷ್ಟು ವಿಕ್ಷಿಪ್ತರನ್ನು ಕೆರಳುವಂತೆ ಮಾಡಿದೆ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕು-ಸಾಮಗ್ರಿಗಳ ಮೇಲೆ ಅತಿರೇಕದ ಸುಂಕವನ್ನು ವಿಧಿಸಿದ ಮತ್ತು ‘ಎಚ್-1ಬಿ’ ವೀಸಾದ ವಾರ್ಷಿಕ ಶುಲ್ಕವನ್ನು ಗಗನಕ್ಕೇರಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂಥವರಲ್ಲಿ ಒಬ್ಬರಾಗಿದ್ದಾರೆ.
ಮಿಕ್ಕಂತೆ, ವಿಧ್ವಂಸಕತೆ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ಪರಂಪರೆಯಂತೆ ನಿರ್ವಹಿಸಿ ಕೊಂಡು ಬಂದಿರುವ ಕೆಲವರು, ಭಾರತದಲ್ಲಿ ನೆಲೆಗೊಂಡಿರುವ ‘ಶಾಂತಿ-ನೆಮ್ಮದಿ-ಸುವ್ಯವಸ್ಥೆ’ ಯನ್ನು ಹದಗೆಡಿಸಲು ಸಂಚು ಹೂಡುತ್ತಲೇ ಇರುವುದು ಜಗಜ್ಜಾಹೀರು.
ಇದನ್ನೂ ಓದಿ: Vishwavani Editorial: ಹಸಿರಾಗಲಿ ಉಸಿರಾಗಲಿ ಕನ್ನಡ
ಇಂಥವರಿಗೆ ಭಾರತೀಯ ಸೇನೆಯು ಕಾಲಾನುಕಾಲಕ್ಕೆ ತಪರಾಕಿ ನೀಡುತ್ತಿದ್ದರೂ ಕೆಲವರು ಪಾಠ ಕಲಿಯುತ್ತಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಹಾಗೂ ರಾಜಸ್ಥಾನದ ಭಯೋತ್ಪಾದನಾ ನಿಗ್ರಹದಳ (ಎಟಿಎಸ್) ಜತೆಗೂಡಿ, ರಾಜಸ್ಥಾನದ ವಿವಿಧೆಡೆ ನಡೆಸಿದ ದಾಳಿಯ ವೇಳೆ ಐವರು ಶಂಕಿತ ಉಗ್ರರು ಸೆರೆಯಾಗಿರುವುದು ಈ ಮಾತಿಗೆ ಪುಷ್ಟಿನೀಡುತ್ತದೆ.
ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದ ಮೇಲೆ ಬಂಽತರಾಗಿರುವ ಈ ಐವರಲ್ಲಿ ಮದರಸಾದ ಮೂವರು ಮೌಲ್ವಿ ಗಳೂ ಸೇರಿದ್ದಾರಂತೆ. ಭಾರತದ ಭದ್ರತೆ, ಸುರಕ್ಷತೆ, ಸಾರ್ವಭೌಮತೆಗಳನ್ನು ಕಾಪಾಡಿಕೊಳ್ಳಲು ಇನ್ನೂ ಕಟ್ಟೆಚ್ಚರ ವಹಿಸಬೇಕಾದ ಅಗತ್ಯವಿದೆ ಎಂಬುದನ್ನು ಇಂಥ ಬೆಳವಣಿಗೆಗಳು ಒತ್ತಿ ಹೇಳು ತ್ತವೆ.
ಒಂದೆಡೆ ಟ್ರಂಪ್‌ರಂಥ ಭೂರಾಜಕೀಯದ ‘ತುಘಲಕ್’ಗಳು, ಮತ್ತೊಂದೆಡೆ ಭಯೋತ್ಪಾದಕರಂಥ ವಿಕ್ಷಿಪ್ತ ಶಕ್ತಿಗಳು- ಹೀಗೆ ಉಭಯ ತೆರನಾದ ಕಿರಿಕಿರಿಗಳನ್ನು ಭಾರತ ನಿಭಾಯಿಸಬೇಕಾಗಿ ಬಂದಿದೆ. ದೇಶದ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿರುವವರೂ ಸಮರ್ಥರೇ ಆಗಿರುವುದರಿಂದ ಇದು ನೆರವೇರುತ್ತದೆ ಎಂಬುದು ಭಾರತೀಯರ ವಿಶ್ವಾಸ.