ಅಯೋಧ್ಯೆಯ ಶ್ರೀರಾಮ ಮಂದಿರದ ಶಿಖರ ಭಾಗದಲ್ಲಿ ಧರ್ಮ ಧ್ವಜದ ಆರೋಹಣವಾಗಿದ್ದನ್ನು ಒಂದಿಡೀ ಭಾರತ ಸಂಭ್ರಮಿಸಿದೆ. ಇದನ್ನು ಕಂಡು ಮಗ್ಗುಲುಮುಳ್ಳು ಪಾಕಿಸ್ತಾನಕ್ಕೆ ಕರುಳಲ್ಲಿ ಕೆಂಡವನ್ನು ಹಾಕಿದಂತಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಭಾಗವಹಿಸಿದ್ದರ ಕುರಿತು ತೀವ್ರವಾಗಿ ಟೀಕಿಸುವ ಧಾರ್ಷ್ಟ್ಯವನ್ನೂ ಅದು ತೋರಿದೆ.
‘ಬಾಬರಿ ಮಸೀದಿ ತಾಣದಲ್ಲಿನ ದೇವಾಲಯದ ನಿರ್ಮಾಣವು, ಭಾರತದಲ್ಲಿನ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ಒತ್ತಡದ ಪ್ರತಿಬಿಂಬವಾಗಿದೆ’ ಎಂಬ ಆಣಿಮುತ್ತುಗಳನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಉದುರಿಸಿರುವುದೇ ಇದಕ್ಕೆ ಸಾಕ್ಷಿ.
ನಿದ್ರೆಯಲ್ಲಿ ಕನವರಿಸುವ ಇಂಥ ಪರಿಪಾಠವನ್ನು ಪಾಕ್ ಆಳುಗ ವ್ಯವಸ್ಥೆ ಇನ್ನಾದರೂ ಕೈಬಿಟ್ಟರೆ ಒಳಿತು. ಏಕೆಂದರೆ, ಪಾಕಿಸ್ತಾನ ಸೇರಿದಂತೆ ಮಿಕ್ಕ ರಾಷ್ಟ್ರಗಳಿಗೆ ಹೋಲಿಸಿದರೆ ಧಾರ್ಮಿಕ ಅಲ್ಪ ಸಂಖ್ಯಾತರು ನೆಮ್ಮದಿಯಿಂದ ದಿನ ದೂಡುತ್ತಿರುವುದು ಭಾರತದಲ್ಲೇ ಎಂಬುದು ಜಗಜ್ಜಾಹೀರು ಸಂಗತಿ.
ಇದನ್ನೂ ಓದಿ: Vishwavani Editorial: ಸಾಂಕೇತಿಕ ಅಭಿವ್ಯಕ್ತಿಯಾಗಲಿ
ಇದು ಗೊತ್ತಿದ್ದೂ ಪಾಕಿಸ್ತಾನದ ಕಡೆಯಿಂದ ಇಂಥ ಮಾತುಗಳು ಹೊಮ್ಮುತ್ತಿವೆ ಎಂದರೆ, ಒಂದೋ ಅದು ಕನವರಿಕೆಯ ಮಾತಾಗಿರಬೇಕು ಇಲ್ಲವೇ ಅರಿವುಗೇಡಿತನದ ಪರಮಾವಧಿಯಾಗಿರಬೇಕು! ಮಾನವ ಹಕ್ಕುಗಳನ್ನು ದಮನಿಸುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಪಾಕಿಸ್ತಾನಕ್ಕೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒತ್ತಡ ಬೀಳುತ್ತಿದೆ ಎಂಬುದು ಅದ್ಯಾವ ದಿವ್ಯದೃಷ್ಟಿಯಿಂದ ಗೋಚರಿಸಿತೋ ಭಗವಂತನೇ ಬಲ್ಲ.
ತನ್ನ ಪ್ರಜೆಗಳಿಗೆ ಮೂರು ಹೊತ್ತಿನ ಊಟವನ್ನು ಹೊಂದಿಸಿ ಕೊಡಲಾಗದಷ್ಟರ ಮಟ್ಟಿಗಿನ ಆರ್ಥಿಕ ಕುಸಿತವನ್ನು ಕಂಡಿರುವ ಪಾಕಿಸ್ತಾನಕ್ಕೆ, ಭಾರತವನ್ನು ಗುರಿಯಾಗಿಸಿ ವಿನಾಕಾರಣ ಕೂರಂಬು ಬಿಡುವುದಕ್ಕೆ ಇನ್ನಿಲ್ಲದ ಶಕ್ತಿ ಒದಗಿ ಬಿಡುವುದು ವಿಶ್ವದ ಎಷ್ಟನೇ ಅದ್ಭುತವೋ?! ಹುಚ್ಚಾಟಕ್ಕೂ ಒಂದು ಮಿತಿಯಿದೆ. ಭಾರತದ ವಿಷಯದಲ್ಲಿ ಕೆಲವೇ ದಿನಗಳ ಹಿಂದೆ ಠೇಂಕಾರ ಮೆರೆದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಮಹಾಶಯರೇ ಈಗ ಮೆತ್ತಗಾಗಿದ್ದಾರೆ; ಹೀಗಿರುವಾಗ ಈ ಪಾಕಿಸ್ತಾನ ಅದ್ಯಾವ ಗಿಡದ ತೊಪ್ಪಲು..!