ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯ ಕ್ರಮದಲ್ಲಿ ಮಾತನಾಡುತ್ತಾ, ‘ಆರೋಗ್ಯ ಕೆಟ್ಟಾಗ ನಮ್ಮಲ್ಲಿ ಅನೇಕ ಮಂದಿಗೆ ಸ್ವಯಂವೈದ್ಯ ಮಾಡಿ ಕೊಳ್ಳುವ ರೂಢಿ ಇದೆ, ಇದು ಬಹಳ ಅಪಾಯಕಾರಿ’ ಎಂಬ ಗಮನ ಸೆಳೆಯುವ ಮಾತನ್ನಾಡಿದ್ದಾರೆ. ಇದು ಅಕ್ಷರಶಃ ಸತ್ಯ.
‘ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲಾ ವೈದ್ಯರ ಭೇಟಿ/ಸಮಾಲೋಚನೆ ಏಕೆ? ಇದೆಲ್ಲಾ ಸುಮ್ಮನೆ ದುಡ್ಡು ಹಾಳು’ ಎಂಬ ಗ್ರಹಿಕೆಯೊಂದಿಗೆ ಔಷಧ ಮಳಿಗೆಗಳಿಗೆ ಧಾವಿಸುವ ಇಂಥವರು, ತಮ್ಮಾಯ್ಕೆಯ ಮಾತ್ರೆಯನ್ನು ಖರೀದಿಸಿ ಸೇವಿಸಿ ಕೈತೊಳೆದುಕೊಳ್ಳುವ ಜಾಯಮಾನದವರಾಗಿರುತ್ತಾರೆ.
ಇದನ್ನೂ ಓದಿ: Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ
ಈ ಬಗ್ಗೆ ಯಾರಾದರೂ ಆಕ್ಷೇಪಿಸಿದರೆ, ‘ಅರೆ, ಎಷ್ಟು ಕಾಲದಿಂದ ನೋಡಿಕೊಂಡು ಬಂದಿರುವೆ, ಯಾವ ಕಾಯಿಲೆಗೆ ಯಾವ ಮಾತ್ರೆ ಅಂತ ನನಗೆ ಗೊತ್ತಾಗೋದಿಲ್ವಾ? ಔಷಧಜ್ಞಾನದಲ್ಲಿ ಹೊಸ ವೈದ್ಯ ನಿಗಿಂತ ಹಳೇ ರೋಗಿಯೇ ಮೇಲು ಎಂಬ ಮಾತು ಕೇಳಿಲ್ಲವಾ?’ ಎಂಬ ಉಡಾಫೆಯ ಮಾತಾ ಡುತ್ತಾರೆ.
ಆದರೆ, ಕಾಯಿಲೆಯ ಮೂಲ ಬೇರೆಯದೇ ಇರುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕೃತಿ ಯೂ ಭಿನ್ನವಾಗಿರುತ್ತದೆ; ಈ ಕಾರಣದಿಂದ ವೈದ್ಯರನ್ನು ಭೇಟಿಯಾಗಿ ಕಾಯಿಲೆಯ ಲಕ್ಷಣ ಗಳನ್ನು ತಿಳಿಸಿಯೇ ಅದಕ್ಕೆ ತಕ್ಕಂಥ ಚಿಕಿತ್ಸೆಗೆ ಒಳಗಾಗಬೇಕು ಎಂಬುದು ಅಪೇಕ್ಷಣೀಯ.
ಅದರಲ್ಲೂ, ಕೆಲವಷ್ಟು ಮಾತ್ರೆ/ಔಷಧಗಳು ಉದ್ದೇಶಿತ ಕಾಯಿಲೆಯನ್ನು ನಿವಾರಿಸುವುದರ ಜತೆಗೆ, ಮತ್ತೊಂದು ಹೊಸ ಕಾಯಿಲೆಯನ್ನು ಹುಟ್ಟುಹಾಕುವಂಥ ‘ಪಾರ್ಶ್ವ ಪರಿಣಾಮ’ವನ್ನೂ ಹೊಂದಿ ರುತ್ತವೆ ಎಂಬ ಸಂಗತಿಯನ್ನು ಮರೆಯಲಾಗದು. ಚೆನ್ನಾಗಿ ಓದಿಕೊಂಡ ವೈದ್ಯರು ಮಾತ್ರವೇ ಇಂಥ ನಿರ್ಣಾಯಕ ಸಂಗತಿಗಳನ್ನು ನಿರ್ಧರಿಸಬಲ್ಲರು.