ಬರಗಾಲದ ಕಷ್ಟವನ್ನು ಎದುರಿಸಲಾರದೆ ರಾಜ್ಯ ಕಣ್ಣುಕಣ್ಣು ಬಿಡುತ್ತಿರುವಾಗ, ಬಿದ್ದವರ ಮೇಲೆ ಕಾದ ಕಬ್ಬಿಣದ ಬರೆ ಎಳೆದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ವರ್ತಿಸಿದೆ. ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 4 ಸಾವಿರ ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿದೆ. ಈಗಾಗಲೇ ನೀರಿನ ಭೀಕರ ಅಭಾವದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಇದು ದೊಡ್ಡ ಹೊಡೆತ. ಮತ್ತೊಂದೆಡೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ವಿಚಾರಣೆ ನಡೆಯುತ್ತಿದೆ.
ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ನ್ಯಾಯಾಲಯ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿಕೆ ಮಾಡಿದೆ. ತಮಿಳು ನಾಡಿನಲ್ಲೂ ಬರ ಇದೆ ನಿಜ. ಆದರೆ ತಮಿಳುನಾಡಿಗೆ ನೀರು ಹರಿಸಬೇಕಾದರೆ ಕರ್ನಾಟಕದ ಕಾವೇರಿ ಅಣೆಕಟ್ಟುಗಳಲ್ಲಿ ನೀರು ಇರಬೇಕಲ್ಲ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆಯೂ ಬಂದಿಲ್ಲ.
ಸೆಪ್ಟೆಂಬರ್- ಅಕ್ಟೋಬರ್ ನಂತರ ಕಾವೇರಿ ಪಾತ್ರದಲ್ಲಿ ಮಳೆಯಾಗುವುದಿಲ್ಲ ಹಾಗೂ ನೀರು ತುಂಬುವುದಿಲ್ಲ. ತುಂಬಿದ ಉದಾಹರಣೆಯೂ ಇಲ್ಲ. ಆದರೆ ತಮಿಳುನಾಡಿಗೆ ಇನ್ನೂ ಹಿಂಗಾರು ಮಳೆ ಬಾಕಿಯಿದೆ. ಅಲ್ಲಿ ಆಗ್ನೇಯ ಮಾರುತಗಳಿಂದ ಮಳೆ ಬರುವ ಸಂಭವವಿದ್ದು, ಮೆಟ್ಟೂರು ಅಣೆಕಟ್ಟಿನಲ್ಲಿ ನೀರು ತುಂಬಬಹುದಾಗಿದೆ. ಆದರೆ ಕರ್ನಾಟಕವನ್ನು ಸುಲಿಯುವ ಯಾವ ಅವಕಾಶವನ್ನೂ ಆ ರಾಜ್ಯ ಬಿಡುವುದಿಲ್ಲ.
ಕಾವೇರಿ ಜಲಾಶಯಗಳಲ್ಲಿ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಸಿಡಬ್ಲ್ಯುಆರ್‌ಸಿ ಶಿಫಾರಸು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಸ್ತಿತ್ವ ದಲ್ಲಿರುವ ನೀರಿನ ಹಂಚಿಕೆ ಸೂತ್ರದಲ್ಲಿ ಲೋಪ ದೋಷಗಳಿವೆ. ತಮಿಳುನಾಡಿನ ಅಂತರ್ಜಲ ಲಭ್ಯತೆಯ ಕಡಿಮೆ ಅಂದಾಜು ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಗೃಹಬಳಕೆ ಮತ್ತು ಕೈಗಾರಿಕಾ ಅಗತ್ಯಗಳಿಗೆ ಅಸಮರ್ಪಕ ಹಂಚಿಕೆ (7.5 ಟಿಎಂಸಿ) ಮಾಡಲಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವೈಜ್ಞಾನಿಕ ಹಾಗೂ ಮಳೆ ಆಧಾರಿತ ಸೂತ್ರದ ಮೂಲಕ ಸಂಕಷ್ಟ ಸೂತ್ರ ರೂಪಿಸಬೇಕು. ಸಂಕಷ್ಟ ಸೂತ್ರ ರೂಪಿಸಲು ಹಾಗೂ ಈ ವರ್ಷ ಸಂಕಷ್ಟ ಸೂತ್ರ ದಂತೆಯೇ ಹಂಚಿಕೆ ಮಾಡಲು ರಾಜ್ಯವು ಪ್ರಾಧಿಕಾರ ಹಾಗೂ ಕೋರ್ಟ್‌ನ ಮುಂದೆ ಒತ್ತಾಯಿಸ ಬೇಕಿದೆ. ಇಲ್ಲವಾದರೆ ಇಂಥ ಅನ್ಯಾಯ ಮುಂದುವರಿಯುತ್ತಲೇ ಇರುತ್ತದೆ.