ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Cauvery Water Dispute: ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ತಮಿಳುನಾಡಿಗೆ 6,000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ನಿರ್ದೇಶನ

ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸನ್ನು ಎತ್ತಿಹಿಡಿಯಲಾಗಿದೆ. ಅದರಂತೆ ಬುಧವಾರ ಬೆಳಿಗ್ಗೆಯಿಂದ ಅನ್ವಯವಾಗುವಂತೆ ಕರ್ನಾಟಕವು 15 ದಿನ 7.77 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.

ಕರ್ನಾಟಕದಿಂದ 6,000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ನಿರ್ದೇಶನ

-

Prabhakara R
Prabhakara R Sep 8, 2026 9:16 PM

ಬೆಂಗಳೂರು: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6,000 ಕ್ಯುಸೆಕ್ ಕಾವೇರಿ ನೀರನ್ನು (Cauvery Water Dispute) ಹರಿಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ರಾಜ್ಯಕ್ಕೆ ನಿರ್ದೇಶನ ನೀಡಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) 15 ದಿನಗಳ ಕಾಲ ನಿತ್ಯ 6,000 ಕ್ಯಸೆಕ್ ನೀರು ಹರಿಸಲು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ನವದೆಹಲಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬುಧವಾರ ಬೆಳಿಗ್ಗೆಯಿಂದ ಅನ್ವಯವಾಗುವಂತೆ ಕರ್ನಾಟಕವು 15 ದಿನ 7.77 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.

ಮಹತ್ವದ ಸಭೆಯಲ್ಲಿ ಕರ್ನಾಟಕದ ಪರವಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ತಮಿಳುನಾಡಿನ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ತಮ್ಮ ವಾದ ಮಂಡಿಸಿದ್ದರು.

ಕರ್ನಾಟಕದ ವಾದ ಏನು?

ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ 63.21 ಟಿಎಂಸಿ ಅಡಿ ನೀರಿದೆ. ಜೂನ್‌ವರೆಗೆ ಕುಡಿಯುವ ನೀರಿಗಾಗಿ 32 ಟಿಎಂಸಿ ಅಡಿ, ಪರಿಸರ ಹರಿವು ಮತ್ತು ಆವಿಯಾಗುವಿಕೆಗಾಗಿ 10 ಟಿಎಂಸಿ ಅಡಿಯನ್ನು ಕಾಯ್ದಿರಿಸಿದ ನಂತರ, ನೀರಾವರಿಗಾಗಿ 15.21 ಟಿಎಂಸಿ ಅಡಿ ಮಾತ್ರ ಉಳಿಯಲಿದೆ. ನೀರಾವರಿಗೆ ಅಂದಾಜು 23.32 ಟಿಎಂಸಿ ಅಡಿ ಕೊರತೆ ಆಗಲಿದೆ. ನಾಲ್ಕು ಜಲಾಶಯಗಳಿಗೆ ಆಗಸ್ಟ್ 27ರಂದು ಒಳಹರಿವು 26,930 ಕ್ಯುಸೆಕ್ ಇತ್ತು. ಸೆಪ್ಟೆಂಬರ್ 7ರಂದು 4,823 ಕ್ಯುಸೆಕ್‌ಗೆ ಕುಸಿದಿದೆ (ಶೇ 82 ಇಳಿಕೆ). ಕಾವೇರಿ ಜಲಾನಯನ ಪ್ರದೇಶದ ಶೇ 75ರಷ್ಟು ಪ್ರದೇಶ ಬರಗಾಲಪೀಡಿತವಾಗಿದೆ. ಹೀಗಾಗಿ ನೀರು ಹರಿಸಿದರೆ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂದು ತಿಳಿಸಿದೆ.

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿರುದ್ಧ ಲಂಚ ಆರೋಪ: ಇಡಿ ತನಿಖೆಗೆ ಆದೇಶ

ತಮಿಳುನಾಡಿನ ಬೇಡಿಕೆ ಏನು?

ಮೆಟ್ಟೂರು ಜಲಾಶಯದಲ್ಲಿ ಸದ್ಯ 55.4 ಟಿಎಂಸಿ ಅಡಿ ನೀರಿದೆ. ಈಶಾನ್ಯ ಮಾನ್ಸೂನ್‌ನ ಸುಮಾರು 45 ದಿನಗಳವರೆಗೆ ಸಾಂಬಾ ಕೃಷಿ ಉಳಿಸಿಕೊಳ್ಳಲು ಗಣನೀಯ ಪ್ರಮಾಣದ ನೀರು ಬೇಕಾಗುತ್ತದೆ. ಸಂಕಷ್ಟದ ವರ್ಷಗಳಲ್ಲಿ ಕರ್ನಾಟಕವು ಬಿಳಿಗುಂಡ್ಲು ಮೂಲಕ ಇಲ್ಲಿಯವರೆಗೆ 50.33 ಟಿಎಂಸಿ ಅಡಿ ಹರಿಸಬೇಕಿತ್ತು. ಆದರೆ ಕೇವಲ 34.32 ಟಿಎಂಸಿ ಅಡಿ ಹರಿಸಿ ಅನ್ಯಾಯವೆಸಗಿದೆ. ಕರ್ನಾಟಕದಲ್ಲಿ ಜಲಸಂಕಷ್ಟ ತೀವ್ರವಾಗಿದೆ ಎಂಬುದು ಸುಳ್ಳು. ಹೀಗಾಗಿ ಹಳೆ ಬಾಕಿ ಹಾಗೂ ಈ ತಿಂಗಳಿನ ಪಾಲಿನ ನೀರನ್ನು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತ್ತು.