ಜಪಾನ್ ಪ್ರವಾಸದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ, ರಾಜ್ಯದಲ್ಲಿನ ಹಲವು ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಕೆಲವು ಸಫಲವಾಗಿವೆ. ಹಾರೋಹಳ್ಳಿಯಲ್ಲಿರುವ ವಿ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಘಟಕದ ವಿಸ್ತರಣೆಗೆ ಜಪಾನ್‌ನ ಕವಾಸಕಿ ಹೆವಿ ಇಂಡಸ್ಟ್ರೀಸ್ ಸಂಸ್ಥೆ ಮುಂದಿನ 10 ವರ್ಷಗಳಲ್ಲಿ 800 ಕೋಟಿ ರು.ವರೆಗೆ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ.
ಈ ಯೋಜನೆಯಿಂದ ಸುಮಾರು 600 ಉನ್ನತ ಮಟ್ಟದ ಉದ್ಯೋಗಗಳು ಸೃಷ್ಟಿಯಾಗಲಿವೆ. 525ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳೊಂದಿಗೆ, ಕರ್ನಾಟಕವು ಜಪಾನ್ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರಿದಿದೆ. ಜೊತೆಗೆ ಈಗ, ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಘನತ್ಯಾಜ್ಯ ನಿರ್ವಹಣೆ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗದ ಅವಕಾಶ ಕುರಿತು ನಿಯೋಗವು ಜಾಗತಿಕ ಪರಿಣತಿಯ ಜೆಎಫ್ʼಇ ಸಂಸ್ಥೆಯ ಜೊತೆ ಮಾತುಕತೆ ನಡೆಸಿದೆ.
ಕಸದ ರಾಶಿ ಪ್ರಮಾಣ ಗಣನೀಯವಾಗಿ ತಗ್ಗಿಸುವುದರ ಜತೆಗೆ, ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಘಟಕಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನ, ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಮತ್ತು ದೀರ್ಘಕಾಲೀನ ನಿರ್ವಹಣೆ ಕುರಿತು ಚರ್ಚೆಯಾಗಿದೆ. ಬೆಂಗಳೂರಿನಲ್ಲಿ ಅನುದಿನವೂ ಉತ್ಪತ್ತಿಯಾಗುವ ಕಸದ ರಾಶಿ, ಯಾವುದೇ ನಗರಕ್ಕೂ ತಲೆನೋವು. ಹೊಸ ತಂತ್ರಜ್ಞಾನ, ಹೊಸ ಕಂಪನಿಗಳ ನೆರವು ತರುವುದು ತಪ್ಪಲ್ಲ. ಆದರೆ ಈ ಸಮಸ್ಯೆಗೆ ಉತ್ತರ ಇಲ್ಲಿಯೇ ಇದೆ.
ಉದಾಹರಣೆಗೆ ಎಚ್‌ಎಸ್‌ಆರ್ ಲೇಔಟ್‌ನ ಬಡಾವಣೆಯೊಂದರಲ್ಲಿ 20 ವರ್ಷ ಹಿಂದಿನಿಂದಲೆ ಹಸಿಕಸ- ಒಣಕಸ ವಿಂಗಡಣೆ ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ನರ್ಸರಿಗಳಿಗೆ ಮಾರಲಾಗುತ್ತಿದೆ. ಇದರಿಂದ ಕಸದ ನಿರ್ವಹಣೆಯೂ ಲಾಭದಾಯಕ ವಾಗಿದೆ.
ಇಂಥ ಕ್ರಿಯೇಟಿವ್, ಉತ್ಪಾದಕ ಐಡಿಯಾಗಳು ಹಾಗೂ ಉಪಕ್ರಮಗಳು ನಮ್ಮಲ್ಲೇ ಲಭ್ಯವಿವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಸುಧಾರಿತ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಯೋಜನೆಗಳು ಬರಬೇಕು. ಕಸವನ್ನು ನಿರುಪಯುಕ್ತ ಎಂದು ನೋಡದೆ, ಲಾಭ ಗಳಿಸುವ ಯೋಜನೆಗಳು ಬೇಕು. ಒಣಕಸವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ, ನಿರ್ವಹಿಸುವ ಯೋಜನೆಗಳು ಬೇಕು. ಕಸ ಸಾಗಣೆ ಗುತ್ತಿಗೆಯಲ್ಲಿನ ಅವ್ಯವಹಾರ, ಭ್ರಷ್ಟಾಚಾರ ತಡೆಯಬೇಕು. ಉತ್ತರದಾಯಿಗಳನ್ನು ಗುರುತಿಸಬೇಕು.