ನೇಪಾಳದಲ್ಲಿ ಪ್ರಕೃತಿ ತನ್ನ ರುದ್ರನರ್ತನವನ್ನು ತೋರ್ಪಡಿಸಿದೆ. ಇದ್ದಕ್ಕಿದ್ದಂತೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕನಿಷ್ಠ 400 ಜನರು ಮೃತಪಟ್ಟಿದ್ದು, 1300ಕ್ಕೂ ಹೆಚ್ಚು ಮಂದಿ ನಾಪತ್ತೆ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೂಕಂಪ, ಮೇಘಸ್ಫೋಟ, ಗ್ಲೇಶಿಯರ್ ಸ್ಪೋಟ ಗಳನ್ನು ಕಾರಣಗಳಾಗಿ ಹೇಳಲಾಗುತ್ತಿದೆ.
ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ನೇಪಾಳದ ಮೂರು ಜಿಲ್ಲೆಗಳು ವ್ಯಾಪಕ ನಷ್ಟ ಸಂಭವಿಸಿದ್ದು, ವಿದೇಶಿ ಪ್ರವಾಸಿಗರೂ ಮೃತಪಟ್ಟಿದ್ದಾರೆ. ಹಳ್ಳಿ ಹಳ್ಳಿಗಳೇ ನಾಶ ವಾಗಿವೆ. ಸೇತುವೆಗಳು, ಮನೆಗಳು ಕೊಚ್ಚಿಕೊಂಡು ಹೋಗಿವೆ. ಇದು ಇತ್ತೀಚಿನ ವರ್ಷಗಳಲ್ಲಿ ನೇಪಾಳ ಕಂಡ ಅತಿ ಭೀಕರ ವಿಪತ್ತು. 288 ಭಾರತೀಯರೂ ನಾಪತ್ತೆಯಾಗಿದ್ದಾರೆ. ಇದೊಂದು ಎದೆ ನಡುಗಿಸುವ ದುರಂತ ಹಾಗೂ ನಮಗೆಲ್ಲರಿಗೂ ಪ್ರಕೃತಿ ನೀಡಿದ ಎಚ್ಚರಿಕೆ.
ಇದನ್ನೂ ಓದಿ: Nepal floods: ನೇಪಾಳದಲ್ಲಿ ಸಿಲುಕಿದ ಹಾವೇರಿ ಮೂಲದ 12 ಪ್ರವಾಸಿಗರು ಸುರಕ್ಷಿತ
ಹಾನಿಗೀಡಾದ ನೇಪಾಳಕ್ಕೆ ಭಾರತವೂ ಸೇರಿದಂತೆ ಹಲವು ದೇಶಗಳು ಮಾನವೀಯ ನೆರವಿಗೆ ಮುಂದಾಗಿವೆ. ಇದೊಂದು ಬರಿಯ ಪ್ರಾಕೃತಿಕ ವಿಪತ್ತು ಎಂದು ಹೇಳಿ ನಾವು ಕೈ ತೊಳೆದುಕೊಳ್ಳು ವಂತಿಲ್ಲ. ನೇಪಾಳದಲ್ಲಿ ಸಂಭವಿಸಿದ ದುರಂತ ಎಲ್ಲ ಕಡೆಯೂ ಉಂಟಾಗಬಹುದು. ಯಾಕೆಂದರೆ, ಪ್ರಕೃತಿ ನೀಡುತ್ತಿರುವ ಎಚ್ಚರಿಕೆಗಳನ್ನು ಕಡೆಗಣಿಸಿ ನಾವು ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗದ ಮೇಲಿನ ದೌರ್ಜನ್ಯ ಮುಂದುವರಿಸಿದ್ದೇವೆ.
ಬೆಟ್ಟಗಳನ್ನು ಬಗೆದು ಸುರಂಗ ಮಾರ್ಗಗಳನ್ನು ಮಾಡಲು ಮುಂದಾಗಿದ್ದೇವೆ. ಕಾಡುಗುಡ್ಡಗಳಲ್ಲಿ ಊರಗಲದ ಪೈಪ್‌ಲೈನ್‌ಗಳನ್ನು ಹಾಕಿ ಬರದೂರಿಗೆ ಬಾರದ ನೀರನ್ನು ತರಲು ಮುಂದಾಗಿದ್ದೇವೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮಿತಿಯಿಲ್ಲದ ರಸ್ತೆ ಅಗಲೀಕರಣಗಳು ಆಗುತ್ತಿವೆ. ನಮ್ಮಲ್ಲಿನ ಹಿಲ್ ಸ್ಟೇಶನ್ ಗಳೂ ಅತಿ ಪ್ರವಾಸೋದ್ಯಮದಿಂದ, ಗುಡ್ಡ ಕಡಿದು ಮಾಡುವ ವಿಸ್ತರಣೆ ಗಳಿಂದ ನಲುಗು ತ್ತಿವೆ. ನೀರು ಇಂಗಲು ಒಂದಿಂಚು ಖಾಲಿ ಜಾಗವನ್ನೂ ಬಿಡದೆ ಕಾಂಕ್ರಿಟೀಕರಣ ನಡೆಯುತ್ತಿದೆ.
ಬೆಂಗಳೂರಿನಲ್ಲಿ, ಇರುವ ಅಲ್ಪ ಉದ್ಯಾನವನಗಳಲ್ಲೂ 5 ಶೇಕಡಾ ಕಿತ್ತುಕೊಂಡು ಅಭಿವೃದ್ಧಿ ಮಾಡಲು ಸರಕಾರ ಮುಂದಾಗಿದೆ. ಸುಸ್ಥಿರ ಅಭಿವೃದ್ಧಿ ಎಂದರೆ ಏನೆಂದೇ ನಮಗೆ ತಿಳಿದಿಲ್ಲ. ಕೊಡಗು, ಘಟ್ಟ ಪ್ರದೇಶಗಳು, ಕೇರಳದಲ್ಲಿ ಈ ಹಿಂದಿನ ವರ್ಷ ಗಳಲ್ಲಿ ನಿಸರ್ಗ ತುಸು ಜೋರಾಗಿಯೇ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಪ್ರಕೃತಿಯನ್ನು ಕಟ್ಟಿ ಹಾಕಿ ನಾವು ಗೆದ್ದೆವೆಂದು ಬೀಗಲು ಸಾಧ್ಯ ವಿಲ್ಲ.