ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. 2025ರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.55 ಕೋಟಿ ಅರ್ಹ ಮತದಾರರು ಇದ್ದಾರೆ. ಪರಿಶೀಲನೆ, ಪರಿಷ್ಕರಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ, ಈ ಪ್ರಕ್ರಿಯೆಯ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚಿಂತನೆ ನಡೆದಿದೆ.
ಈ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಸರಕಾರ ಅನುಮಾನ ವ್ಯಕ್ತಪಡಿಸಿದೆ. ಮತದಾರರ ಹಕ್ಕುಗಳ ರಕ್ಷಣೆಯ ಕುರಿತು ಸರಕಾರದ ಕಾಳಜಿ ಶ್ಲಾಘನೀಯ. ಆದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸರಕಾರದ ನಡೆಗೆ ಮನ್ನಣೆ ಸಿಗುವುದು ಅನುಮಾನ. ಯಾಕೆಂದರೆ ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಕೂಡ ಇದನ್ನು ವಿರೋಧಿಸಿ ಸುಪ್ರೀಂ ಮೊರೆ ಹೋಗಿತ್ತು.
ಇದನ್ನೂ ಓದಿ: Vishwavani Editorial: ಎಬೋಲಾ: ಎಚ್ಚರಿಕೆ ಇರಲಿ
ಕೆಲ ರಾಜ್ಯಗಳು ಎಸ್‌ಐಆರ್ ಪ್ರಕ್ರಿಯೆಗೆ ಸಹಕಾರ ನೀಡದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಎಲ್ಲಾ ರಾಜ್ಯಗಳು ಆಯೋಗದ ಈ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಹೇಳಿದ್ದು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ಚೀಫ್ ಸೆಕ್ರೆಟರಿಗೆ ಮಾಹಿತಿಯನ್ನು ರವಾನಿಸಲು ತಿಳಿಸಿತ್ತು.
ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗಲು ನಾವು ಬಿಡುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ರಾಜಕೀಯ ಕಾರಣಗಳಿಂದಾಗಿ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಸರಕಾರ ವಿರೋಧಿಸತ್ತಿರಬಹುದು. ಆದರೆ ಚುನಾವಣಾ ಆಯೋಗ ಕೂಡ ನ್ಯಾಯಾಂಗದಂತೆಯೇ ಒಂದು ಸ್ವತಂತ್ರ, ನಿಷ್ಪಕ್ಷಪಾತಿ ಸಾಂವಿಧಾನಿಕ ವ್ಯವಸ್ಥೆ. ಅದರ ಕಾರ್ಯವನ್ನು ಮಾಡಲು ಬಿಡುವುದು ಎಲ್ಲ ದೃಷ್ಟಿಯಿಂದ ಒಳಿತು. ಚುನಾವಣಾ ಆಯೋಗದ ಈ ಕಾರ್ಯಕ್ಕೆ ಕಾರ್ಯಾಂಗ ಸಹಕರಿಸ ಬೇಕಾಗುತ್ತದೆ.
ಹೀಗಾಗಿ ರಾಜ್ಯ ಸರಕಾರದ ಸಹಾಯ ಈ ಪ್ರಕ್ರಿಯೆಯಲ್ಲಿ ಅಗತ್ಯ. ಇದರ ವಿರುದ್ಧ ಕಾನೂನು ಸಮರ ಕೈಗೊಂಡಿದ್ದ ಮಮತಾ ಬ್ಯಾನರ್ಜಿ ಅವರು ಗೆಲುವು ಸಾಧಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾರರ ಹೆಸರು ಯಾದಿಯಿಂದ ಅಳಿಸಿಹೋದುದಕ್ಕೆ ಕಾರಣಗಳಿವೆ.
ಕರ್ನಾಟಕದಲ್ಲಿ ಅಂಥ ಆತಂಕವಿಲ್ಲ ಅನಿಸುತ್ತದೆ. ಈ ಬಗ್ಗೆ ಆಯೋಗ ಹಾಗೂ ರಾಜ್ಯ ಸರಕಾರ ಒಮ್ಮತಕ್ಕೆ ಬಂದು, ಪಾರದರ್ಶಕ ರೀತಿಯಲ್ಲಿ ಪ್ರಕ್ರಿಯೆ ನಡೆಸಲು ಅನುವು ಮಾಡಿಕೊಡುವುದು ಅಗತ್ಯ.