ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾದ ಪ್ರಕರಣಗಳು ದಾಖಲಾಗಿವೆ. 2023ರಿಂದ 2025ರ ಜುಲೈವರೆಗಿನ ಅವಧಿಯಲ್ಲಿ ೧೪ರಿಂದ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಗರ್ಭಿಣಿಯರಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಕುಟುಂಬ ವ್ಯವಸ್ಥೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು ವೇಗವಾಗಿ ಬದಲಾವಣೆ ಆಗುತ್ತಿರುವುದು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಪೋಕ್ಸೊ ಮತ್ತು ಬಾಲ್ಯ ವಿವಾಹಗಳು ಹೆಚ್ಚಾಗು ತ್ತಿರುವುದು, ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಪ್ರೇಮ ಪ್ರಕರಣಗಳು, ಕೆಲವು ಸಮುದಾಯಗಳು ಮತ್ತು ಪಂಗಡಗಳಲ್ಲಿ ಆಚರಿಸಲಾಗುವ ಸಾಮಾಜಿಕ ಪದ್ಧತಿ, ಬಾಲ್ಯ ವಿವಾಹಗಳೇ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿವೆ.
ಇದನ್ನೂ ಓದಿ: Vishwavani Editorial: ಸಭ್ಯತೆಯ ಎಲ್ಲೆ ಮೀರದಿರಲಿ
ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಸರಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು, ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗದಿರುವುದು ಬಹುದೊಡ್ಡ ಹಿನ್ನಡೆಯೇ. ಬಾಲಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಗ್ರಾಮೀಣ ಭಾಗದಲ್ಲಿ ಇರುವ ಅಧಿಕಾರಿಗಳು, ಸರಕಾರಿ ಸಿಬ್ಬಂದಿಯ ಪಾತ್ರ ಮುಖ್ಯವಾಗಿದೆ.
ಶಾಲಾ, ಕಾಲೇಜುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ ಮೂಲಕ ಜಾಗೃತಿ ಮೂಡಿಸಬೇಕು. ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳನ್ನು ಗುರುತಿಸಿ, ಮತ್ತೆ ಸೇರಿಸಲು ಕ್ರಮ ಕೈಗೊಳ್ಳ ಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಕಾವಲು ಸಮಿತಿ ಗಳನ್ನು ರಚಿಸಲಾಗಿದೆ.
ಇದು ಮಕ್ಕಳ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಆಗದಂತೆ ಜಾಗೃತಿ ವಹಿಸ ಬೇಕು. ಈ ಸಮಿತಿಯಲ್ಲಿ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್ ಇನ್ಸ್‌ಪೆಕ್ಟರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುತ್ತಾರೆ.
ವಾರದಲ್ಲಿ ಒಂದು ಬಾರಿಯಾದರೂ ಕಾವಲು ಸಮಿತಿಯು ಸಭೆ ನಡೆಸಿ, ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ತಡೆಯುವ ನಿಟ್ಟಿನಲ್ಲಿ ಚರ್ಚಿಸಬೇಕು. ಆಗ ಮಾತ್ರ ಈ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ. ಇಲ್ಲವಾದರೆ ಕಠಿಣ ಕಾನೂನುಗಳು ಪುಸ್ತಕದಲ್ಲೇ ಉಳಿದು ಬಿಡುತ್ತವೆ.