ಪಾಕಿಸ್ತಾನ ಮೂಲದ ‘ಜೈಶ್-ಎ-ಮೊಹಮ್ಮದ್’ (ಜೆಇಎಂ) ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರು ನೇಪಾಳ ಗಡಿಯ ಮೂಲಕ ಭಾರತದೊಳಗೆ ತೂರಿಕೊಂಡಿದ್ದು, ಬಿಹಾರದಲ್ಲಿ ಸನ್ನಿಹಿತ ವಾಗಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅವರು ಸಂಚುಹೂಡಿದ್ದಾರೆ ಎಂಬ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.
ಈ ಮಾಹಿತಿಯ ಹಿನ್ನೆಲೆಯಲ್ಲಿ ಬಿಹಾರ ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ಲಭ್ಯ ಮಾಹಿತಿ. ವಿವಿಧ ಜಾತಿ, ಮತ, ಪಂಗಡಗಳಿಗೆ ಹಾಗೂ ರಾಜಕೀಯ ಸಿದ್ಧಾಂತಗಳಿಗೆ ನೆಲೆಯಾಗಿರುವ ಭಾರತದಲ್ಲಿ ನಡೆಯುವ ಧಾರ್ಮಿಕ ಆಚರಣೆ ಗಳು, ಉತ್ಸವಗಳು ಅಥವಾ ಚುನಾವಣೆಗಳು ಇಂಥ ಸಂಚುಕೋರರಿಗೆ ಸುಲಭದ ತುತ್ತಾಗಿರುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಇದನ್ನೂ ಓದಿ: Vishwavani Editorial: ಇದು ನಿಜನಾಯಕನ ತಾಕತ್ತು
ಇಂಥ ಸಂದರ್ಭದಲ್ಲಿ ಜನದಟ್ಟಣೆಯ ಕಾರಣದಿಂದಲೋ ಅಥವಾ ವ್ಯವಸ್ಥೆಯ ಸಣ್ಣ ಪುಟ್ಟ ಲೋಪದಿಂದಲೋ ಏನಾದರೂ ಅವಘಡಗಳು ಸಂಭವಿಸಿದರೆ, ಸದರಿ ಸಂಚುಕೋರರು ಅದನ್ನು ತಮ್ಮ ಗುಪ್ತ ಹಿತಾಸಕ್ತಿಯ ನೆರವೇರಿಕೆಗೆ ಬಳಸಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣ ಗೊಳಿಸುತ್ತಾರೆ.
ಚುನಾವಣೆಗಳ ಸಂದರ್ಭದಲ್ಲಿ ಅನಪೇಕ್ಷಿತ ಗಾಳಿ ಸುದ್ದಿಗಳು ಹಬ್ಬಿ, ರಾಜಕೀಯ ಬಣಗಳ ನಡುವಿನ ಸಂಘರ್ಷದ ಬೆಂಕಿಯು ಮತ್ತಷ್ಟು ಪ್ರಜ್ವಲವಾಗಿ ಉರಿಯುವುದಕ್ಕೂ ಇಂಥ ಕುತ್ಸಿತ ಶಕ್ತಿಗಳು ಎಣ್ಣೆಯನ್ನು ಸುರಿಯುತ್ತವೆ ಎಂಬುದು ಗೊತ್ತಿರುವಂಥದ್ದೇ. ಅದರಲ್ಲೂ ನಿರ್ದಿಷ್ಟವಾಗಿ, ದೇಶ ವಿಭಜನೆಯಾದಾಗಿನಿಂದಲೂ ಭಾರತದ ಮೇಲೆ ಕಿಡಿಕಾರುತ್ತಲೇ ಬಂದಿರುವ ಮಗ್ಗುಲ ಮುಳ್ಳು ದೇಶ ಪಾಕಿಸ್ತಾನವು ಇಂಥ ಸಂದರ್ಭಕ್ಕಾಗಿಯೇ ಕಾಯುತ್ತಿರುತ್ತದೆ. ಅಲ್ಲಿನ ಜೆಇಎಂ ಉಗ್ರ ಸಂಘಟನೆಯ ಮೂವರು ಉಗ್ರರು ತಮ್ಮ ಗುರಿಸಾಧನೆಗೆಂದು ಈಗ ಬಿಹಾರದ ಚುನಾವಣೆಯ ಕಡೆಗೆ ವಕ್ರದೃಷ್ಟಿ ಬೀರಿರುವುದು ಇದಕ್ಕೊಂದು ಸಾಕ್ಷಿ.
ಒಟ್ಟಿನಲ್ಲಿ, ಕಾರ್ಗಿಲ್ ಯುದ್ಧದಂಥ ಹಣಾಹಣಿ, ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಆಪರೇಷನ್ ಸಿಂದೂರ’ದಂಥ ಕಾರ್ಯಾಚರಣೆ ನಡೆದು ಎಷ್ಟೇ ಬರೆ ಹಾಕಿಸಿಕೊಂಡಿದ್ದರೂ ಪಾಕಿಸ್ತಾನ ಬುದ್ಧಿ ಕಲಿಯುವುದಿಲ್ಲ ಎಂಬುದಂತೂ ಖರೆ!