ಮೊನ್ನೆ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಕರ್ನಾಟಕ ಗ್ರಂಥಾಲಯ ಇಲಾಖೆಯ ಮೂಲಕ ಲೇಖಕರಿಂದ 300 ಪುಸ್ತಕಗಳನ್ನು ನಿರಂತರವಾಗಿ ಖರೀದಿಸಲು ಸರಕಾರವು ವ್ಯವಸ್ಥೆ ಮಾಡಬೇಕು’ ಎಂದಿದ್ದಾರೆ.
ಹೊರಟ್ಟಿಯವರೇ ಹೇಳಿಕೊಂಡಿರುವಂತೆ, ಅವರು 2006-07ರ ಅವಧಿಯಲ್ಲಿ ಗ್ರಂಥಾಲಯ ಇಲಾಖೆಯ ಸಚಿವರಾಗಿದ್ದಾಗ ಇಂಥದೊಂದು ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿತ್ತು. ಆದರೀಗ, ಕಳೆದ ಕೆಲ ವರ್ಷಗಳಿಂದ ಪುಸ್ತಕದ ಖರೀದಿ ವ್ಯವಸ್ಥೆ ಯಲ್ಲಿ ಅಸಮರ್ಪಕತೆ ಇಣುಕು ಹಾಕಿದೆ.
ಇದನ್ನೂ ಓದಿ: Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ
ಹೀಗಾದಾಗ ಲೇಖಕರು ಹತಾಶರಾಗುವುದು ಸಹಜ. ಜತೆಗೆ, ದೂರ ಪ್ರದೇಶದ ಗ್ರಂಥಾಲಯ ಗಳಿಗೂ ‘ಪುಸ್ತಕ ಕ್ಷಾಮ’ ಕಾಡುತ್ತದೆ. ಸಾಲದೆಂಬಂತೆ, ಅತ್ತ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನೂ ಖರೀದಿಸಲಾಗದೆ, ಇತ್ತ ಗ್ರಂಥಾಲಯಗಳಲ್ಲೂ ಅವು ಸಿಗದೆ ಸಮಾಜದ ಕೆಲ ವರ್ಗದ ಅಸಹಾಯಕ ಜನರು ‘ಅಕ್ಷರ ಸಾಂಗತ್ಯ’ದಿಂದ ವಂಚಿತರಾಗುವಂತಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ನಮ್ಮ ಸರಕಾರಿ ಯಂತ್ರಗಳ ಕಾರ್ಯನಿರ್ವಹಣೆಯು ದಿನಗಳೆದಂತೆ ಹೇಗೆ ವಿಲಕ್ಷಣ ಸ್ಥಿತಿ ಯನ್ನು ಮುಟ್ಟಿಬಿಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಸಾಕು. ‘ಜನೋಪಯೋಗಿ’ ಹಾಗೂ ‘ಸಮಾಜಮುಖಿ’ ಎನಿಸಿಕೊಂಡಿರುವ ಸಾಕಷ್ಟು ಯೋಜನೆಗಳು ನಮ್ಮ ಆಳುಗ ವ್ಯವಸ್ಥೆಯಲ್ಲಿವೆ; ಆದರೆ ಪರಿಣಾಮಕಾರಿ ಅನುಷ್ಠಾನದ್ದೇ ಕೊರತೆ.
ಹೀಗಾದಾಗ, ಯಾವುದೇ ಯೋಜನೆಯ ಹಿಂದೆ ಕೆನೆಗಟ್ಟಿರುವ ಸದಾಶಯವು ಜನರನ್ನು ತಲುಪುವುದಿಲ್ಲ. ಇಂಥ ವೇಳೆ, ‘ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ಎಂಬ ವಿಪರ್ಯಾ ಸದ ಭಾವ ಬಹಳಷ್ಟು ವಲಯಗಳಲ್ಲಿ ಹೊಮ್ಮುತ್ತದೆ ಎನ್ನಲಡ್ಡಿಯಿಲ್ಲ. ವ್ಯವಸ್ಥೆ ಇನ್ನಾದರೂ ಚುರುಕುಗೊಳ್ಳಲಿ...