ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಚುನಾವಣಾ ಆಯೋಗಕ್ಕೆ ಮಸಿ ಬಳಿಯುವ ಹುನ್ನಾರ

ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಚ್ಚಳವಾಗಿದೆ ಎಂಬುದು ರಾಹುಲ್ ಗಾಂಧಿ ಯವರ ತಕರಾರು ಆಗಿದ್ದರೆ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿದೆ ಎಂದು ಆರೋಪಿಸಿ, ತಮ್ಮ ಅನುಕೂಲಕ್ಕೆ ತಕ್ಕ ನಿಲುವನ್ನು ಅನುಸರಿಸಿ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು ಅವರ ಹುನ್ನಾರವಾಗಿದೆ.

ಚುನಾವಣಾ ಆಯೋಗಕ್ಕೆ ಮಸಿ ಬಳಿಯುವ ಹುನ್ನಾರ

Ashok Nayak Ashok Nayak Aug 6, 2025 9:51 AM

ಪ್ರಕಾಶಪಥ

ಪ್ರಕಾಶ ಶೇಷರಾಘವಾಚಾರ್

ಮತದಾರರ ಪಟ್ಟಿಯ ದೋಷವನ್ನು ಸಮರ್ಥಿಸುವ ಪುರಾವೆಯನ್ನು ರಾಹುಲ್ ಗಾಂಧಿ ಯವರು ನೀಡಿಲ್ಲ. ಕೇವಲ ‘ಮತದಾರರ ಸಂಖ್ಯೆ ಹೆಚ್ಚಳವಾಗಿದೆ’ ಎಂಬ ಆರೋಪವು ಯಾವುದೇ ಅಕ್ರಮವನ್ನು ಸಾಬೀತುಪಡಿಸುವುದಿಲ್ಲ. ಚುನಾವಣೆಗೆ ಮುನ್ನ ಆಯೋಗವು, ಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಬ್ಬ ಅಭ್ಯರ್ಥಿಗೂ ನೀಡುತ್ತದೆ. ಅದರಲ್ಲಿ ದೋಷವಿದ್ದರೆ ಲಿಖಿತ ರೂಪದಲ್ಲಿ ಆಯೋಗಕ್ಕೆ ದೂರು ಸಲ್ಲಿಸಬಹುದು. ಆದರೆ ಕಾಂಗ್ರೆಸ್‌ನ ಸೋತ ಅಭ್ಯರ್ಥಿಗಳು ಈತನಕ ಯಾವುದೇ ದೂರು ಸಲ್ಲಿಸಿಲ್ಲ.

ಕಾಂಗ್ರೆಸ್ ಪಕ್ಷವು 2014ರ ತರುವಾಯ, ಪ್ರತಿ ಚುನಾವಣೆಯಲ್ಲಿ ಸೋತ ನಂತರ ‘ಆ ಸೋಲಿಗೆ ನಾಯಕತ್ವದ ವೈಫಲ್ಯವೇ ಕಾರಣ’ ಎಂಬುದನ್ನು ಮರೆಮಾಚಿ, ‘ಬಿಜೆಪಿಯು ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ ಅನ್ನು) ತಿರುಚಿ ಗೆಲ್ಲುತ್ತಿದೆ’ ಎಂದು ರೋಧಿಸಲು ಆರಂಭಿಸಿತು. ಆದರೆ, ‘ಇವಿಎಂ ಅನ್ನು ತಿರುಚಬಹುದಾಗಿದ್ದರೆ, ಚುನಾವಣಾ ಆಯೋಗದ ಕಚೇರಿಗೆ ಬಂದು ಅದನ್ನು ಸಾಬೀತುಪಡಿಸಿ’ ಎಂದು ಪಂಥಾಹ್ವಾನ ನೀಡಿದಾಗ ಕಾಂಗ್ರೆಸ್ ಪಕ್ಷದ ಯಾರೊಬ್ಬರೂ ಮುಂದೆ ಬರಲಿಲ್ಲ.

ಆ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಪದೇ ಪದೆ ಸಲ್ಲಿಸಿದ ಎಲ್ಲಾ ಅರ್ಜಿಗಳು ತಿರಸ್ಕೃತ ಗೊಂಡವು. ಇಷ್ಟಾಗಿಯೂ, ಚುನಾವಣಾ ಆಯೋಗವು ಸಂವಿಧಾನಬದ್ಧ ಸಂಸ್ಥೆ ಎಂಬುದನ್ನು ಮರೆತು, ತಲೆಬುಡವಿಲ್ಲದ ರಾಜಕೀಯ ಪ್ರೇರಿತ ಆರೋಪಗಳ ಮೂಲಕ ಆ ಪಕ್ಷದವರು ಮಸಿ ಬಳಿಯಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

2024ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ, ಮಹಾರಾಷ್ಟ್ರದಲ್ಲಿ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟವು 48 ಸ್ಥಾನಗಳ ಪೈಕಿ 27ರಲ್ಲಿ ಗೆದ್ದರೆ, ‘ಮಹಾಯುತಿ’ ಮೈತ್ರಿಕೂಟ ವು 21ರಲ್ಲಿ ಗೆದ್ದು ಹಿನ್ನಡೆಯನ್ನು ಅನುಭವಿಸಿತು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆ ಯಲ್ಲಿ ಫಲಿತಾಂಶವು ತಿರುವುಮುರುವಾಗಿ, ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟವು ಭಾರಿ ಪರಾಭವವನ್ನು ಅನುಭವಿಸಿತು. ಈ ಸೋಲನ್ನು ಜೀರ್ಣಿಸಿಕೊಳ್ಳಲು ರಾಹುಲ್ ಗಾಂಧಿಯವರಿಗೆ ಸಾಧ್ಯವಾಗಲಿಲ್ಲ.

‘ಮತಪಟ್ಟಿಯು ದೋಷಪೂರಿತವಾಗಿದೆ’ ಎಂಬ ಹೊಸ ವರಸೆ ಅವರ ಕಡೆಯಿಂದ ಆರಂಭವಾಗಿದ್ದು ಈ ಕಾರಣಕ್ಕೇ. ರಾಹುಲ್ ಗಾಂಧಿಯವರು ನಿದ್ರೆಯಿಂದ ಈಗ ಎದ್ದವರಂತೆ, “ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರಿ ಪ್ರಮಾಣದ ಮೋಸ ನಡೆದಿದೆ.

ಇದನ್ನೂ ಓದಿ: Prakash Shesharaghavachar Column: ಡಾ.ಹೆಡ್ಗೆವಾರ್ ಪ್ರತಿರೂಪ ಬಾಳಾಸಾಹೇಬ್ ದೇವರಸ್

2024ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನವೆಂಬರ್ ನಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳ ನಡುವೆ ಮತದಾರರ ಪಟ್ಟಿಗೆ ಒಂದು ಕೋಟಿಗೂ ಹೆಚ್ಚು ಹೊಸ ಮತದಾರ ರನ್ನು ಅನುಮಾನಾಸ್ಪದವಾಗಿ ಸೇರಿಸಲಾಗಿದೆ; ಬಿಜೆಪಿಯು ಕಡಿಮೆ ಪ್ರದರ್ಶನ ನೀಡಿದ್ದ ಕ್ಷೇತ್ರ ಗಳಲ್ಲಿ ಈ ಹೆಚ್ಚಳ ಕೇಂದ್ರೀಕೃತವಾಗಿದೆ" ಎಂದು ದೂರಿದ್ದಾರೆ ಮತ್ತು ತಮಗೆ ಡಿಜಿಟಲ್ ಮತದಾರರ ಪಟ್ಟಿಯನ್ನು ನೀಡಬೇಕು ಹಾಗೂ ಮತಗಟ್ಟೆಯ ಸಿಸಿಟಿವಿ ತುಣುಕನ್ನು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನುಗಳು ಮತ್ತು ಸ್ಥಾಪಿತ ನಿಯಮಗಳಿಗೆ ಅನುಸಾರವಾಗಿ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸುತ್ತದೆ. ಚುನಾವಣಾ ಪ್ರಕ್ರಿಯೆಯು ವಿಕೇಂದ್ರೀ ಕೃತವಾಗಿದೆ ಮತ್ತು ಸಾವಿರಾರು ಸಿಬ್ಬಂದಿಗಳು ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಮತದಾರರ ಪಟ್ಟಿಗಳ ಡಿಜಿಟಲ್ ಪ್ರತಿಗಾಗಿನ ಬೇಡಿಕೆಗಳು, ಚಾಲ್ತಿಯಲ್ಲಿರುವ ಕಾನೂನಿನ ಚೌಕಟ್ಟಿನೊಳಗೆ ಸ್ವೀಕಾರಾರ್ಹವಲ್ಲ ಎಂದು ಭಾರತದ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್‌ನ ಇಂಥದೇ ಮನವಿಯನ್ನು ಸುಪ್ರೀಂ ಕೋರ್ಟ್ 2019ರಲ್ಲಿ ತಿರಸ್ಕರಿಸಿದ್ದನ್ನು ಅದು ಉಲ್ಲೇಖಿಸಿ, ಕರಡು ಮತದಾರರ ಮುದ್ರಿತ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೂ ಒದಗಿಸ ಲಾಗಿದೆ ಎಂದು ಮಾಹಿತಿ ನೀಡಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಯನ್ನು ( Special Intensive Revision- SIR) ಕೈಗೆತ್ತಿಕೊಂಡ ತರುವಾಯ, ಚುನಾವಣಾ ಆಯೋಗದ ಮೇಲಿನ ರಾಹುಲ್ ಗಾಂಧಿಯವರ ದಾಳಿಯು ತಾರಕಕ್ಕೇರಿತು.

Election Commission of India

SIR ಮಾರ್ಗಸೂಚಿಗಳ ಅಡಿಯಲ್ಲಿ, 2003ರ ಮತದಾರರ ಪಟ್ಟಿಯಲ್ಲಿ ಇಲ್ಲದ ಮತದಾರರು ಭಾರತೀಯ ಪೌರತ್ವದ ಪುರಾವೆಯನ್ನು ಒದಗಿಸಬೇಕೆಂದು ಚುನಾವಣಾ ಆಯೋಗ ಆದೇಶಿಸಿದೆ. 2004ರ ಡಿಸೆಂಬರ್ ನಂತರ ಜನಿಸಿದವರಿಗೆ, ಇಬ್ಬರೂ ಪೋಷಕರ ದಾಖಲೆಗಳ ಅಗತ್ಯವಿದೆ ಮತ್ತು ಪೋಷಕರು ವಿದೇಶಿ ಪ್ರಜೆಯಾಗಿದ್ದರೆ ಅವರ ಪಾಸ್ ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ವಾಸ್ತವವಾಗಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಅದನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಮುಂದಾಗಿದೆ. ಮೃತಪಟ್ಟವರ ಹೆಸರು, ವಿಳಾಸದಲ್ಲಿ ಇಲ್ಲದವರು ಮತ್ತು ಎರಡೆರಡು ಕಡೆಗಳಲ್ಲಿ ನೋಂದಾಯಿಸಿಕೊಂಡವರ ಹೆಸರುಗಳು ಈಗ ಪಟ್ಟಿಯಿಂದ ಹೊರ ಬಂದಿವೆ.

ಹೀಗೆ 17 ಲಕ್ಷದಷ್ಟು ಮೃತರ ಹೆಸರುಗಳು ಪತ್ತೆಯಾಗಿರುವುದು ಗಮನಾರ್ಹ. ಈ ಪರಿಷ್ಕರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿಗಳ ವಿಚಾರಣೆ ನಡೆದು, ಈ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯವು ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲು ಅನುಮತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಚ್ಚಳವಾಗಿದೆ ಎಂಬುದು ರಾಹುಲ್ ಗಾಂಧಿಯವರ ತಕರಾರು ಆಗಿದ್ದರೆ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗು ತ್ತಿದೆ ಎಂದು ಆರೋಪಿಸಿ, ತಮ್ಮ ಅನುಕೂಲಕ್ಕೆ ತಕ್ಕ ನಿಲುವನ್ನು ಅನುಸರಿಸಿ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು ಅವರ ಹುನ್ನಾರವಾಗಿದೆ.

ಮಹಾರಾಷ್ಟ್ರದ ನಂತರ ಈಗ ‘ಕರ್ನಾಟಕದಲ್ಲಿಯೂ ಮತದಾರರ ಪಟ್ಟಿಯಲ್ಲಿನ ಮತದಾರರ ಹೆಚ್ಚಳದ ಮೂಲಕ ಬಿಜೆಪಿಯು ಚುನಾವಣೆಯನ್ನು ಗೆದ್ದಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ತದನಂತರ ಇವರ ಆರೋಪ ಸರಣಿ ಮುಂದುವರಿದು, ‘ಇಡೀ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿಯೇ ಬಿಜೆಪಿಯು ಗೆದ್ದಿರುವುದು’ ಎಂಬ ಹೊಸರಾಗ ಪ್ರಾರಂಭವಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 9 ಸ್ಥಾನ ಗೆದ್ದಿದ್ದೇ ಬಹುದೊಡ್ಡ ಸಾಧನೆ ಯೆಂದು ಕಾಂಗ್ರೆಸ್ ಸಮಾಧಾನ ಪಟ್ಟುಕೊಂಡಿತ್ತು. ಈಗ ರಾಹುಲ್ ಗಾಂಧಿಯವರು ಆರೋಪ ಮಾಡಿದ ಕೂಡಲೇ ಅದಕ್ಕೆ ಅನಿವಾರ್ಯವಾಗಿ ಧ್ವನಿಗೂಡಿಸಿ, ‘ರಾಜ್ಯದಲ್ಲಿ ಬಿಜೆಪಿಯ ಗೆಲುವು ಆಗಿದ್ದು ಚುನಾವಣಾ ಆಯೋಗದ ದೋಷಪೂರಿತ ಪಟ್ಟಿಯಿಂದಾಗಿ’ ಅಂತ ಕಾಂಗ್ರೆಸ್ ಕೂಗಲು ಆರಂಭಿಸಿದೆ. ಮತದಾರರ ಪಟ್ಟಿಗೆ ಹಾಗೆ ಮನಬಂದಂತೆ ಹೆಸರುಗಳನ್ನು ಸೇರಿಸಲು ಸಾಧ್ಯವಾ? ಅಥವಾ ಮನಸೋ ಇಚ್ಛೆ ತೆಗೆಯುವ ಮೂಲಕ ಚುನಾವಣೆಯನ್ನು ಗೆಲ್ಲಲು ಸಾಧ್ಯವಾ? ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು ಸುಲಭಸಾಧ್ಯ ಕೆಲಸವಲ್ಲ.

‘ಬೂತ್ ಮಟ್ಟದ ಏಜೆಂಟರನ್ನು’ (ಬಿಎಲ್‌ಎ-2) ನೇಮಕ ಮಾಡಿಕೊಳ್ಳಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಅವಕಾಶ ನೀಡುತ್ತದೆ. ಈ ಏಜೆಂಟರು ತಮ್ಮ ಬೂತ್‌ನಲ್ಲಿ ಮತದಾರರ ಸೇರ್ಪಡೆ ಆಗುವಾಗ ಅಥವಾ ಪಟ್ಟಿಯಿಂದ ತೆಗೆಯುವಾಗ, ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಮಾತ್ರವಲ್ಲ, ಹಾಗೆ ಸೇರಿಸುವ ಅಥವಾ ತೆಗೆಯುವ ಮುನ್ನ ಸಂಬಂಧಪಟ್ಟ ಅಽಕಾರಿಯು ಈ ಏಜೆಂಟರ ಸಹಿಯನ್ನು ಪಡೆದುಕೊಳ್ಳುವುದು ಕಡ್ಡಾಯ. ಅಂತೆಯೇ ಬೂತ್‌ಗಳಿಗೆ ಕಾಂಗ್ರೆಸ್ ಪಕ್ಷದ ‘ಬೂತ್ ಮಟ್ಟದ ಏಜೆಂಟರು’ ಕೂಡ ನೇಮಕವಾಗಿರುತ್ತಾರೆ. ಮತದಾರರ ಪಟ್ಟಿಗೆ ಸೇರ್ಪಡೆ ಮಾಡ ಬೇಕಾದ ವ್ಯಕ್ತಿಯ ಪೋಟೋ ಗುರುತಿನ ಚೀಟಿ ಬೇಕಾಗುತ್ತವೆ.

60 ಲಕ್ಷ ಹೆಸರುಗಳನ್ನು ಏಕಾಏಕಿ ಸೇರ್ಪಡೆ ಮಾಡಲು ಅಸಾಧ್ಯ. ಚುನಾವಣೆಯ ದಿನದಂದು, ಫೋಟೋದಲ್ಲಿರುವ ವ್ಯಕ್ತಿಯೇ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಬೇಕು. ಒಬ್ಬಾತ ಹತ್ತಾರು ಕಡೆ ಮತವನ್ನು ಚಲಾಯಿಸುವ ಕಾಲ ಈಗಿಲ್ಲ. ಪ್ರತಿಯೊಂದು ಬೂತ್‌ನಲ್ಲಿಯೂ, ಸ್ಪರ್ಧಿಸಿರುವ ಪಕ್ಷದ ಬೂತ್ ಏಜೆಂಟರು ಕುಳಿತಿರುತ್ತಾರೆ.

ಪ್ರತಿಯೊಂದು ಪ್ರಕ್ರಿಯೆಯೂ ಅವರ ಸಮ್ಮುಖದಲ್ಲೇ ನಡೆಯುವುದು. ಮತದಾರರ ಪಟ್ಟಿಯ ದೋಷವನ್ನು ಸಮರ್ಥಿಸುವ ಒಂದೇ ಒಂದು ಪುರಾವೆಯನ್ನೂ ರಾಹುಲ್ ಗಾಂಧಿಯವರು ನೀಡಿಲ್ಲ. ಕೇವಲ ‘ಮತದಾರರ ಸಂಖ್ಯೆ ಹೆಚ್ಚಳವಾಗಿದೆ’ ಎಂಬ ಆರೋಪವು ಯಾವುದೇ ಅಕ್ರಮ ವನ್ನು ಸಾಬೀತುಪಡಿಸುವುದಿಲ್ಲ. ಚುನಾವಣೆಗೆ ಮುನ್ನ ಆಯೋಗವು, ಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಬ್ಬ ಅಭ್ಯರ್ಥಿಗೂ ನೀಡುತ್ತದೆ.

ಆ ಪಟ್ಟಿಯಲ್ಲಿ ದೋಷವಿದ್ದರೆ ಲಿಖಿತ ರೂಪದಲ್ಲಿ ಆಯೋಗಕ್ಕೆ ದೂರು ಸಲ್ಲಿಸಬಹುದು. ಆದರೆ ಕಾಂಗ್ರೆಸ್‌ನ ಸೋತ ಅಭ್ಯರ್ಥಿಗಳು ಈತನಕ ಯಾವುದೇ ದೂರು ಸಲ್ಲಿಸಿಲ್ಲ. ಹಾಸ್ಯಾಸ್ಪದ ಸಂಗತಿ ಯೆಂದರೆ ರಾಹುಲ್‌ರವರು, ‘ಕರ್ನಾಟಕದಲ್ಲಿಯೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಕಾರಣ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿತು’ ಎಂದು ಹೇಳಿ ರಾಜಾಜಿನಗರ ಮತ್ತು ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ್ದೇ ಭಾಗವಾದ ಶಿವಾಜಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ನೆನಪೇ ಇವರಿಗೆ ಆಗಿಲ್ಲ! ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಗಾಂಧಿ ಕುಟುಂಬಕ್ಕೆ ಅತಿ ನಿಕಟವಾಗಿದ್ದ ನವೀನ್ ಚಾವ್ಲಾರವರನ್ನು ಚುನಾವಣಾ ಆಯೋಗದ

ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಇವರ ಕಾರ್ಯಚಟುವಟಿಕೆಯ ವಿರುದ್ಧ ದನಿಯೆತ್ತಿದ್ದ ಎನ್‌ಡಿಎ ಮೈತ್ರಿಕೂಟವು, ಇವರನ್ನು ಉಚ್ಚಾಟಿಸಬೇಕು ಎಂಬುದಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತ್ತು. ಚುನಾವಣಾ ಆಯೋಗಕ್ಕೆ ಹಲ್ಲಿದೆ ಎಂದು ಸಾಬೀತುಪಡಿಸಿದ್ದ ಟಿ.ಎನ್. ಶೇಷನ್‌ರವರು 1999ರಲ್ಲಿ ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು.

ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಂ.ಎಸ್.ಗಿಲ್‌ರವರನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭಾ ಸದಸ್ಯರನ್ನಾಗಿಸಿ ಕೇಂದ್ರ ಸಚಿವ ಸಂಪುಟಕ್ಕೆ ಅವರನ್ನು ಸೇರ್ಪಡೆ ಮಾಡಿಕೊಂಡಿತ್ತು. ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾಧಿಕಾರಿ ಆಗುವ ಮುನ್ನ, ‘ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷದ ಬ್ರಾಂಚ್ ಆಫೀಸ್ ರೀತಿಯಲ್ಲಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದ್ದ ಸಂಗತಿಯನ್ನು ಕಾಂಗ್ರೆಸ್ ಮರೆತಿದೆ.

ರಾಹುಲ್ ಗಾಂಽಯವರು ಚುನಾವಣಾ ಆಯೋಗದ ವಿರುದ್ಧ ಬಳಸುತ್ತಿರುವ ಭಾಷೆಯು, ದೇಶದ ವಿರೋಧ ಪಕ್ಷದ ನಾಯಕನ ಘನತೆಗೆ ತಕ್ಕಂತಿಲ್ಲ. ಸಂಸತ್ ಭವನದ ಆವರಣದಲ್ಲಿ ಚುನಾವಣಾ ಆಯೋಗಕ್ಕೆ ಅವರು ಬೆದರಿಕೆ ಹಾಕಿರುವುದು ಮತ್ತು ‘ನಾನು ಆಟಂಬಾಂಬ್ ಸಿಡಿಸಿದರೆ ಆಯೋಗಕ್ಕೆ ಅಡಗಿಕೊಳ್ಳಲೂ ಜಾಗವಿರುವುದಿಲ್ಲ’ ಎಂದು ಅವರು ನುಡಿದಿರುವುದು ಇದಕ್ಕೆ ಸಾಕ್ಷಿ.

ತನ್ಮೂಲಕ, ಸಂವಿಧಾನಬದ್ಧ ಸಂಸ್ಥೆಯೊಂದರ ಮೇಲೆ ಅವರು ಅತ್ಯಂತ ಕ್ಷುಲ್ಲಕವಾಗಿ, ಅವಹೇಳನ ಕಾರಿಯಾಗಿ ಟೀಕೆ ಮಾಡಿದ್ದಾರೆ ಎನ್ನಲಡ್ಡಿಯಿಲ್ಲ. 2002ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಯ ವಿಷಯದಲ್ಲಿ, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಆಯಕ್ತ ರಾಗಿದ್ದ ಲಿಂಗ್ಡೋರವರನ್ನು ಓರ್ವ ‘ಕ್ರಿಶ್ಚಿಯನ್’ ಎಂದು ಕರೆದು, ಇವರು ಇಟಲಿಯಿಂದ ಬಂದಿರಬೇಕು’ ಎಂದು ಟೀಕೆ ಮಾಡಿದಾಗ ವಿರೋಧ ಪಕ್ಷದವರು, ‘ಮೋದಿಯವರು ಸಂವಿಧಾನ ಬದ್ಧ ಸಂಸ್ಥೆಗೆ ಅಪಮಾನ ಮಾಡಿದ್ದಾರೆ, ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಹುಯಿಲೆಬ್ಬಿಸಿದ್ದರು.

ಇಂದು ರಾಹುಲ್ ಗಾಂಧಿಯವರು ಚುನಾವಣಾ ಆಯೋಗದವರನ್ನು ‘ಮತಗಳ್ಳರು’ ಎಂದು ಆರೋಪಿಸಿದ್ದರೂ, ಆ ಹೇಳಿಕೆಯ ವಿರುದ್ಧ ಇವರು ಸೊಲ್ಲೆತ್ತದೆ ಬಾಯಿಗೆ ಗೋಂದು ಹಾಕಿಕೊಂಡು ತೆಪ್ಪಗಿದ್ದು ತಮ್ಮ ಅನುಕೂಲಸಿಂಧು ನಿಲುವನ್ನು ನಿಚ್ಚಳವಾಗಿ ಹೊರಹೊಮ್ಮಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಬೇಕಾಗಿರುವುದು ಕಾರ್ಯಯೋಜನೆ, ದೂರದೃಷ್ಟಿಯ ಸಮರ್ಥ ನಾಯಕತ್ವ ಮತ್ತು ಎದುರಾಳಿಯನ್ನು ಕಟ್ಟಿ ಹಾಕುವಂಥ ರಣತಂತ್ರ; ಆದರೆ ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ತಮ್ಮ ಹತಾಶೆಯನ್ನು ಹತ್ತಿಕ್ಕುವ ಭರದಲ್ಲಿ ಚುನಾವಣಾ ಆಯೋಗಕ್ಕೆ ಮಸಿ ಬಳಿದು, ಅದರ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿರುವುದು ಪ್ರಜಾ ಪ್ರಭುತ್ವದ ದುರಂತವಾಗಿದೆ.

(ಲೇಖಕರು ಬಿಜೆಪಿಯ ವಕ್ತಾರರು)