Vishwavani Editorial: ಆಪರೇಷನ್ ಸಿಂದೂರ್ ದಿಟ್ಟ ನಡೆ
ಭಾರತದ ಇತಿಹಾಸದಲ್ಲೇ ಬುಧವಾರ ನಿಜಕ್ಕೂ ಮಹತ್ವದ ದಿನ. ಎರಡು ವಾರಗಳ ಹಿಂದೆ ಕಾಶ್ಮೀರ ದ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕ್ ಪ್ರೇರಿತ ಉಗ್ರರು ಭಾರತೀಯರ ಆತ್ಮಾಭಿಮಾನವನ್ನು ಕೆಣಕಿದ್ದರು. ಇದೀಗ ಪಾಕಿಸ್ತಾನದಲ್ಲಿರುವ ಈ ಉಗ್ರರ ಅಡಗು ದಾಣಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆ ನರರಾಕ್ಷಸರ ಹುಟ್ಟಡಗಿಸಿ ಇಡೀ ದೇಶದ ಜನತೆಯ ಶ್ಲಾಘನೆಗೆ ಪಾತ್ರವಾಗಿದೆ.


ಭಾರತದ ಇತಿಹಾಸದಲ್ಲೇ ಬುಧವಾರ ನಿಜಕ್ಕೂ ಮಹತ್ವದ ದಿನ. ಎರಡು ವಾರಗಳ ಹಿಂದೆ ಕಾಶ್ಮೀರ ದ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕ್ ಪ್ರೇರಿತ ಉಗ್ರರು ಭಾರತೀಯರ ಆತ್ಮಾಭಿಮಾನವನ್ನು ಕೆಣಕಿದ್ದರು. ಇದೀಗ ಪಾಕಿಸ್ತಾನದಲ್ಲಿರುವ ಈ ಉಗ್ರರ ಅಡಗು ದಾಣಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆ ನರರಾಕ್ಷಸರ ಹುಟ್ಟಡಗಿಸಿ ಇಡೀ ದೇಶದ ಜನತೆಯ ಶ್ಲಾಘನೆಗೆ ಪಾತ್ರವಾಗಿದೆ. ಭಾರತೀಯ ನಾರಿಯರ ಸಿಂದೂರವನ್ನು ಅಳಿಸಿ ಹಾಕಿದ ಉಗ್ರರ ವಿರುದ್ಧ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆಯ ಮೂಲಕ ವೇ ಭಾರತ ಈ ನರಹಂತಕರು ಮತ್ತು ಇವರನ್ನು ಪೋಷಿಸುತ್ತಿರುವ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಭಾರತದ ಈ ದಾಳಿಯನ್ನು ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಬೆಂಬಲಿಸಿರುವುದು ಗಮನಾರ್ಹ. ಪಾಕಿಸ್ತಾನದ ಪರ ಟರ್ಕಿ ಬಿಟ್ಟರೆ ಇನ್ನಾವ ರಾಷ್ಟ್ರ ವೂ ಹೇಳಿಕೆ ನೀಡಿಲ್ಲ. ಚೀನಾ ಕೂಡ ಇದು ತಣ್ಣಗಿನ ಪ್ರತಿಕ್ರಿಯೆ ನೀಡಿದೆ. ನರೇಂದ್ರ ಮೋದಿ ಸರಕಾರ ಅಂತಾರಾಷ್ಟ್ರೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಉಗ್ರರ ನೆಲೆ ಧ್ವಂಸದ ಹೆಸರಿನಲ್ಲಿಯೇ ಈ ದಾಳಿ ನಡೆಸಿದೆ. ಈ ಯೋಜನೆ ರೂಪಿಸಿದ ಸರಕಾರ ಮತ್ತು ಇದನ್ನು ಅತ್ಯಂತ ಕರಾರುವಕ್ಕಾಗಿ ಜಾರಿಗೊಳಿಸಿದ ನಮ್ಮ ಸೇನೆಯ ದಕ್ಷತೆ ಮತ್ತು ಪರಾಕ್ರಮವನ್ನು ಅಭಿನಂದಿಸಲೇಬೇಕು.
ಇದನ್ನೂ ಓದಿ: Vishwavani Editorial: ಸುಟ್ಟರೂ ಹೋಗದ ಹುಟ್ಟುಗುಣ!
ಉಗ್ರರನ್ನು ಹುಡುಕಿ ಹುಡುಕಿ ತಕ್ಕ ಶಿಕ್ಷೆ ನೀಡಲಿದ್ದೇವೆ ಎಂಬ ತಮ್ಮ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ. ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ಕ್ಷಿಪಣಿ ದಾಳಿ ನಡೆಸಿ ಸುಮಾರು 90ಕ್ಕೂ ಹೆಚ್ಚು ಉಗ್ರರನ್ನು ನಮ್ಮ ದೇಶದ ಹೆಮ್ಮೆಯ ಸೇನೆ ಹೊಡೆದುರುಳಿಸಿದೆ. ದಾಳಿಗೆ ತುತ್ತಾದ ಪ್ರದೇಶಗಳ ಹಿಂದಿನ ಮತ್ತು ನಂತರದ ಚಿತ್ರಗಳನ್ನೂ ಸೇನೆ ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲದೆ, ದಾಳಿಯಲ್ಲಿ ಹತ್ಯೆಯಾದ ಉಗ್ರರು ಇವರೇ ಎಂಬುದನ್ನೂ ಜಗಜ್ಜಾಹೀರು ಮಾಡಿದೆ. ಉಗ್ರರ ಮೇಲಿನ ದಾಳಿ ಇಷ್ಟಕ್ಕೇ ಮುಗಿಯದೆಂಬ ಸಂದೇಶವನ್ನು ನಮ್ಮ ಸೇನೆ ಇಡೀ ವಿಶ್ವಕ್ಕೇ ರವಾನಿಸಿದೆ. ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಈ ಸಲವಾದರೂ ಬುದ್ಧಿ ಕಲಿತು ಭಯೋತ್ಪಾದನೆ ಯನ್ನು ಉತ್ತೇಜಿಸುವ ಬದಲು ದೇಶದ ಅಭಿವೃದ್ಧಿಗೆ ಗಮನ ನೀಡಬೇಕಾಗಿದೆ.