ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ರೈಲು ಪ್ರಯಾಣದ ವೇಳೆ ಅಕ್ಕಪಕ್ಕದ ಪ್ರಯಾಣಿಕರ ಕಿವಿ ಕಿವುಡಾ ಗುವಂತೆ ಜೋರಾಗಿ ಮೊಬೈಲ್‌ನಲ್ಲಿ ಹಾಡು ಮೊಳಗಿಸುವುದು, ಸದ್ದು ಮಾಡುವುದು ಮಾಡಿದರೆ ಸ್ಥಳದಲ್ಲೇ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಇನ್ನು ಮುಂದೆ ರೈಲಿನಲ್ಲಿ ಪ್ರಯಾಣದ ವೇಳೆ ಸಂಗೀತ ಕೇಳಲು, ಸಿನಿಮಾ ನೋಡಲು ಮೊಬೈಲ್ ಫೋನ್‌ಗೆ ಇಯರ್ ಫೋನ್ ಬಳಸುವುದು ಅಪೇಕ್ಷಿತ. ಇದೊಂದು ಸಭ್ಯತೆಯ ಪ್ರಾಥಮಿಕ ಪಾಠ. ಜವಾಬ್ದಾರಿಯುತ ಪೌರ ಪ್ರಜ್ಞೆ ಕೂಡ ಹೌದು. ಆದರೆ ಇಂಥ ಸರಳ ಸಂಗತಿಗಳನ್ನೂ ಕಾನೂನಿನ ವ್ಯಾಪ್ತಿಗೆ ತರುವುದು, ತಪ್ಪಿತಸ್ಥರನ್ನು ದಂಡ ತೆರುವಂತೆ ಮಾಡಬೇಕಾಗಿರುವುದೇ ನಮ್ಮ ದೇಶದ ದುರಂತ. ಪ್ರಯಾಣದ ವೇಳೆ ಜೋರಾಗಿ ವಿಡಿಯೊ, ರೀಲ್ಸ್, ಸಿನಿಮಾ, ಕ್ರಿಕೆಟ್ ವೀಕ್ಷಿಸುತ್ತಾ ಸ್ಪೀಕರ್ ಫೋನ್‌ನಲ್ಲಿ ಜೋರು ಸದ್ದು ಹೊಮ್ಮುವಂತೆ ಮಾಡಿ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ: Vishwavani Editorial: ಪ್ರತಿಭಟನೆ ಜನರಿಗೆ ಕಷ್ಟವಾಗಬಾರದು
ಸಹ ಪ್ರಯಾಣಿಕರೊಂದಿಗೆ ಶಾಂತಿ-ನೆಮ್ಮದಿಯ ಪ್ರಯಾಣಕ್ಕಾಗಿ ಇಯರ್ ಫೋನ್ ಬಳಸಿರಿ, ಸಾರ್ವಜನಿಕ ಸ್ಥಳಗಳಲ್ಲಿ ಶಿಷ್ಟಾಚಾರ ಪಾಲಿಸಿರಿ. ನಿಯಮ ಉಲ್ಲಂಘಿಸಿದರೆ ಜನವಿಶ್ವಾಸ್ (ತಿದ್ದುಪಡಿ) ಕಾಯಿದೆಯ ಪ್ರಕಾರ ಭಾರತೀಯ ರೈಲ್ವೆಯ ನಿಯಮದ ಸೆಕ್ಷನ್ 145 (2) (ಎ) ಅನ್ವಯ ಗರಿಷ್ಠ 5 ಸಾವಿರ ರು. ದಂಡ ಅಥವಾ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.
ಇದನ್ನು ರೈಲ್ವೆಯಲ್ಲಿ ಮಾತ್ರವಲ್ಲ, ಸರಕಾರಿ ಬಸ್ಸುಗಳಲ್ಲಿಯೂ ಖಾಸಗಿ ಬಸ್ಸುಗಳಲ್ಲಿಯೂ ಜಾರಿ ಮಾಡಬೇಕು. ರಾತ್ರಿ ಪ್ರಯಾಣದ ಬಸ್ಸುಗಳಲ್ಲಿ ಹಲವರು ಸ್ಪೀಕರ್‌ನಲ್ಲಿ ಜೋರಾಗಿ ಸದ್ದು ಹೊರಡಿಸುತ್ತಾ ಸಿನಿಮಾ ನೋಡುತ್ತಿರುತ್ತಾರೆ ಅಥವಾ ಬಸ್ಸಿನವರೇ ಸಿನಿಮಾ ಹಾಕಿರುತ್ತಾರೆ.
ಶಬ್ದ ಮಾಲಿನ್ಯವೆಂಬುದು ನಾವು ಗಂಭೀರವಾಗಿ ಪರಿಗಣಿಸದೇ ಇರುವ ಸೂಕ್ಷ್ಮವಾಗಿ ಮಾಲಿನ್ಯ. ಜೋರಾದ, ಮಿತಿಯನ್ನು ಮೀರಿದ ಡೆಸಿಬಲ್ ಪ್ರಮಾಣವನ್ನು ಹೊಂದಿರುವ ಶಬ್ದಗಳು ಹೃದಯ ಸಮಸ್ಯೆ ತಂದೊಡ್ಡಬಲ್ಲವು. ಮಕ್ಕಳಿಗೆ, ಹಿರಿಯ ನಾಗರಿಕರ ಆರೋಗ್ಯಕ್ಕೆ ಇವು ಮಾರಕ. ಇದನ್ನು ತಡೆಯಲೆಂದೇ ಆಸ್ಪತ್ರೆ ಆವರಣದಲ್ಲಿ ಹಾರ್ನ್ ಹಾಕಬೇಡಿರೆಂದು ಫಲಕ ಹಾಕಿರುತ್ತಾರೆ. ಆದರೆ ನಮ್ಮ ‘ಜವಾಬ್ದಾರಿಯುತ’ ನಾಗರಿಕರು ಇದನ್ನೆಲ್ಲ ಪರಿಗಣಿಸುವುದೇ ಇಲ್ಲ. ಇದೆಲ್ಲ ಸಾಮಾನ್ಯ ಪ್ರಜ್ಞೆ ಯೂ ಹೌದು. ಆದರೆ ನಮ್ಮ ದೇಶದಲ್ಲಿ ಸಾಮಾನ್ಯ ಪ್ರಜ್ಞೆಯದ್ದೇ ಕೊರತೆ. ‘ಕಾಮನ್ ಸೆನ್ಸ್ ಈಸ್ ನಾಟ್ ಕಾಮನ್’ ಎಂಬ ಮಾತೂ ಇದೆಯಲ್ಲ.