ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ದೊಡ್ಡ ಮೊತ್ತದ ಹುಂಡಿ ಹಣ ಕಳವು ಘಟಿಸಿದ ಬಳಿಕ ರಾಜ್ಯ ಸರಕಾರ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಎಲ್ಲ ಮುಜರಾಯಿ ದೇವಾಲಯ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಮುಂದಾಗಿದೆ. ಈ ಕ್ಯಾಮೆರಾಗಳನ್ನು ನೇರವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಠಾಣೆಗಳಿಗೆ ಸಂಪರ್ಕಿಸಲಾಗುತ್ತದಂತೆ.
ಈ ಸಿಸಿಟಿವಿಗಳು ಹುಂಡಿ ಇರುವ ಜಾಗ, ಹುಂಡಿ ಎಣಿಕೆ ಜಾಗ ಸೇರಿದಂತೆ ಎಲ್ಲ ಭಾಗಗಳನ್ನು ಕವರ್ ಮಾಡುತ್ತದೆ. ಇದು ಅಗತ್ಯವಾಗಿದ್ದ ಕ್ರಮ. ಅಯೋಧ್ಯೆಯಲ್ಲಿ ನಡೆದ ಘಟನೆ ವಿಷಾದನೀಯ ಹಾಗೂ ಭಕ್ತರಿಗೆ ಬೇಸರ ಮೂಡಿಸಿದ ಘಟನೆ. ರಾಜ್ಯದಲ್ಲೂ ಅಂಥದು ಘಟಿಸದಂತೆ ಈಗಲೇ ಮುಂಜಾಗರೂಕತೆ ವಹಿಸಿರುವುದು ಒಳ್ಳೆಯದು.
ಇದನ್ನೂ ಓದಿ: Vishwavani Editorial: ರೋಡ್ ರೇಜ್‌ಗೆ ತಡೆ ಹಾಕಿ
ಎಲ್ಲ ಶ್ರದ್ಧಾ ತಾಣಗಳಲ್ಲೂ ಭಕ್ತರು ತಮ್ಮ ಭಕ್ತಿ ಭಾವನೆಗೆ ತಕ್ಕಂತೆ ಹಣ, ಚಿನ್ನ, ಬೆಳ್ಳಿ ಇತ್ಯಾದಿ ಗಳನ್ನು ಕಾಣಿಕೆಯಾಗಿ, ಹರಕೆಯಾಗಿ ಸಮರ್ಪಿಸುತ್ತಾರೆ. ಅವು ಭಕ್ತರು ಪರಿಶ್ರಮದಿಂದ ಸಂಪಾದಿಸಿದ, ಶ್ರದ್ಧೆಯಿಂದ ಸಮರ್ಪಿಸಿದ ಸ್ವತ್ತು. ಅದರ ಅಪಹರಣ ಎಂದರೆ ಭಕ್ತರ ಶ್ರದ್ಧೆಗೇ ಬಗೆಯುವ ದೋಖಾ. ಈ ಭದ್ರತಾ ಕ್ರಮವೇನೋ ಸರಿ. ಇದರ ಜೊತೆಗೇ ಮುಜರಾಯಿ ದೇವಸ್ಥಾನ ಗಳಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ಸೌಲಭ್ಯಗಳನ್ನು ನೀಡುವತ್ತಲೂ ಸರಕಾರ ಗಮನ ಹರಿಸಬೇಕಿದೆ.
ಪಾದರಕ್ಷೆ ಬಿಡುವ ಕೌಂಟರ್‌ಗಳಿಂದ ಹರಕೆ ಪ್ರಸಾದ ನೀಡುವ ಕೌಂಟರ್‌ಗಳ ವರೆಗೆ ವ್ಯವಸ್ಥೆಗಳು ಸ್ವಚ್ಛ ಹಾಗೂ ದೋಷರಹಿತವಾಗಿರಬೇಕು. ಅರ್ಚಕರಿಂದ ಹಿಡಿದು ಭದ್ರತಾ ಸಿಬ್ಬಂದಿಯವರೆಗೂ ಸರಿಯಾದ ಸಂಬಳ ಭತ್ಯೆ ವಸತಿ ಇತ್ಯಾದಿ ವ್ಯವಸ್ಥೆ ಇರುವವರೆಗೆ ಯಾರೂ ದೇವಾಲಯದ ಹಣಕ್ಕೆ ಕೈಹಾಕುವುದಿಲ್ಲ.
ದೊಡ್ಡ ದೊಡ್ಡ, ಹೆಸರಾಂತ ದೇವಾಲಯಗಳಲ್ಲಿ ವಿವಿಐಪಿ ದರ್ಶನಕ್ಕೆ ಸಾವಿರಾರು ರೂಪಾಯಿ ಮೊತ್ತದ ಟಿಕೆಟ್‌ಗಳು ಇವೆ. ಇವು ಸರತಿ ಸಾಲಿನಲ್ಲಿ ಸಾಮಾನ್ಯ ದರ್ಶನಕ್ಕೆ ನಿಂತ ಭಕ್ತರನ್ನು ಕೆರಳಿಸುವ ನಿದರ್ಶನಗಳಿವೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪರಿಪಾಲಿಸುವ ರೂಢಿ ಇದ್ದರೆ ಎಲ್ಲರಿಗೂ ನಿರಾಳ. ಹಾಗೆಯೇ ಶ್ರೀಮಂತ ದೇವಾಲಯಗಳು ಇರುವಂತೆಯೇ ದಿನ ನಿತ್ಯದ ಎಣ್ಣೆ- ಬತ್ತಿಗೂ ಸಂಪನ್ಮೂಲ ಇಲ್ಲದ ಬಡ ದೇವಾಲಯಗಳೂ ಇವೆ.
ಶ್ರೀಮಂತ ದೇವಾಲಯಗಳ ಆದಾಯದ ಒಂದಂಶವನ್ನು ಇವುಗಳಿಗೆ ವಿನಿಯೋಗಿಸುವುದರಲ್ಲಿ ತಪ್ಪಿಲ್ಲ. ಅಂತೂ ದೇವಾಲಯಗಳು ಭಕ್ತರಿಗೆ ನಿಜಾರ್ಥದಲ್ಲಿ ನೆಮ್ಮದಿಯ ತಾಣಗಳಾಗಬೇಕು, ಇಲ್ಲಿ ಬಂದವರು ಸಾರ್ಥಕತೆಯ ಭಾವ ಹೊತ್ತು ಹಿಂದಿರುಗಬೇಕು.