ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ರೋಡ್ ರೇಜ್‌ಗೆ ತಡೆ ಹಾಕಿ

ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು ನಗರಗಳನ್ನು ಕಂಗೆಡಿಸುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಿಳಿದರೆ ಸಾಕು ಒಂದಲ್ಲ ಒಂದು ರೋಡ್ ರೇಜ್ ಎದುರಿಸಬೇಕು ಎಂಬ ಪರಿಸ್ಥಿತಿ ಇದೆ. ಇತ್ತೀಚೆಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಒಂದು ಗುಂಪು ಹಲ್ಲೆ ಪ್ರಕರಣ, ಯಾರದೋ ಮೊಬೈಲ್‌ನಲ್ಲಿ ದಾಖಲಾಗಿ ವೈರಲ್ ಆದುದರಿಂದ ಸುದ್ದಿಯಾಯಿತು

Vishwavani Editorial: ರೋಡ್ ರೇಜ್‌ಗೆ ತಡೆ ಹಾಕಿ

-

Profile
Ashok Nayak Jul 10, 2026 6:00 AM

ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು ನಗರಗಳನ್ನು ಕಂಗೆಡಿಸುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಿಳಿದರೆ ಸಾಕು ಒಂದಲ್ಲ ಒಂದು ರೋಡ್ ರೇಜ್ ಎದುರಿಸಬೇಕು ಎಂಬ ಪರಿಸ್ಥಿತಿ ಇದೆ. ಇತ್ತೀಚೆಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಒಂದು ಗುಂಪು ಹಲ್ಲೆ ಪ್ರಕರಣ, ಯಾರದೋ ಮೊಬೈಲ್‌ನಲ್ಲಿ ದಾಖಲಾಗಿ ವೈರಲ್ ಆದುದರಿಂದ ಸುದ್ದಿಯಾಯಿತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ. ಆದರೆ ಹೀಗೆ ಎಲ್ಲ ಪ್ರಕರಣಗಳೂ ವರದಿಯಾಗುತ್ತವೆ, ಪೊಲೀಸ್ ಕ್ರಮ ನೆರವೇರುತ್ತದೆ ಎಂದೇನಿಲ್ಲ.

ಅನೇಕ ಕಡೆ ಸಂತ್ರಸ್ತರು ಕೂಡ ಇದನ್ನು ಅನಿವಾರ್ಯವಾಗಿ ನುಂಗಿಕೊಳ್ಳುವ, ಪೊಲೀಸರು ಕೂಡ ಕ್ಷುಲ್ಲಕ ಎಂದು ಭಾವಿಸಿ ಕಡೆಗಣಿಸಿಬಿಡಬಹುದಾದ ಸಾಧ್ಯತೆ ಉಂಟು. ಆದರೆ ಇದು ಇಂದಿನ ಆಧುನಿಕ ಜೀವನಶೈಲಿ, ಒತ್ತಡದೊಂದಿಗೇ ಬಂದಿರುವ ಒಂದು ರೋಗ. ಇದು ಕಾನೂನು ಸುವ್ಯವಸ್ಥೆ ಪಾಲನೆಯ ಸಮಸ್ಯೆಯೂ ಹೌದು, ಹಾಗೆಯೇ ಮಾನಸಿಕ ಆರೋಗ್ಯ ಸಮಸ್ಯೆಯೂ ಹೌದು.

ಇದನ್ನೂ ಓದಿ: Vishwavani Editorial: ಮತ್ತೆ ಕದನದ ಕಳವಳ

ಅನೇಕ ಸಲ ಕಳಪೆ ಚಾಲನೆ ಇಂಥ ರಸ್ತೆ ರೇಗುಗಳಿಗೆ ಕಾರಣವಾಗುತ್ತದೆ. ರಸ್ತೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸದವರನ್ನು ಪತ್ತೆ ಹಚ್ಚಿ ಅವರನ್ನು ಡ್ರೈವಿಂಗ್‌ನಿಂದಲೇ ನಿವಾರಿಸುವುದು ಅಗತ್ಯವಾಗಿದೆ. ಹಲ್ಲೆ ಮಾಡುವವರ ಬಂಧನ, ಶಿಕ್ಷೆಯ ಜೊತೆಗೆ ಅವರ ವಾಹನ ಜಪ್ತಿ ಮಾಡು ವುದು, ಲೈಸೆನ್ಸ್ ರದ್ದುಪಡಿಸುವುದು ಕೂಡ ಆಗಬೇಕು.

ಇನ್ನ ಸಜ್ಜನ- ಸಭ್ಯ ಎನ್ನಿಸಿಕೊಂಡವರು ಕೂಡ ರಸ್ತೆಯ ಮೇಲಿರುವಾಗ ತಮ್ಮ ತಾಳ್ಮೆ ಕಳೆದು ಕೊಂಡು ಕೂಗಾಡುವುದನ್ನು ಕಾಣುತ್ತೇವೆ. ಓವರ್‌ಟೇಕ್ ಮಾಡಿದಾಗ, ಎದುರಿನವನು ಸೈಡ್ ಕೊಡದೆ ಇದ್ದಾಗ, ಗುರಾಯಿಸುವುದು ಅಥವಾ ಕೆರಳಿಸುವ ಸನ್ನೆ ಮಾಡುವುದು, ನಿಂದಿಸುವುದು ಹಲ್ಲೆಗೆ ಪ್ರೇರಕ ಆಗುವುದುಂಟು. ಚಾಲನಾ ಪರವಾನಗಿ ಪಡೆಯುವ ವೇಳೆ ಎಲ್ಲ ಡ್ರೈವಿಂಗ್ ನಿಯಮ ಪಾಲಿಸುವಂತೆ, ರಸ್ತೆಯ ಮೇಲೆ ಸಂಯಮ ತಪ್ಪುವುದಿಲ್ಲ ಎಂಬ ಪ್ರಮಾಣ ಮಾಡಿಸು ವುದು ಕೂಡ ಇಂದಿನ ಅಗತ್ಯವೇನೋ.

ಶ್ರೇಷ್ಠ ಡ್ರೈವರ್‌ಗಳು ಆಗುವುದು ವೇಗವಾಗಿ ವಾಹನ ಓಡಿಸುವುದರಿಂದಲ್ಲ. ಎಷ್ಟೋ ವರ್ಷಗಳಿಂದ ನೂರಾರು ಜನರನ್ನು ತುಂಬಿಕೊಂಡು ದೂರದ ಗುರಿಗಳಿಗೆ ಅತ್ಯಂತ ಸಂಯಮದಿಂದ ಕರೆದೊ ಯ್ದು ತಲುಪಿಸುವವರು ಇದ್ದಾರೆ. ರಸ್ತೆ ಸೂಚನೆಗಳ ಸರಿಯಾದ ಅರ್ಥ ಮಾಡಿಕೊಳ್ಳುವಿಕೆ, ನಿಯಮಗಳ ಸೂಕ್ತ ಪಾಲನೆ, ವೇಗಕ್ಕಿಂತ ನಿಖರತೆ ಮುಖ್ಯ ಎಂಬ ನಿಲುವು, ರೇಗದಿರುವಿಕೆ, ಸಣ್ಣ ಪುಟ್ಟ ಅಪಘಾತವಾದಾಗ ತಾಳ್ಮೆ ಕಳೆದುಕೊಳ್ಳದೆ ಆ ಸನ್ನಿವೇಶವನ್ನು ನಿಯಂತ್ರಿಸುವುದು ಇದನ್ನು ಎಲ್ಲ ಚಾಲಕರೂ ಕಲಿಯುವುದು ಅಗತ್ಯ.