ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಕೆಪಿಎಸ್‌ಸಿಯ ಕಾಯಿಲೆ

ಅಕ್ರಮ ಮಾರ್ಗದಲ್ಲಿ ಪ್ರಶ್ನೆಗಳನ್ನು ದಕ್ಕಿಸಿಕೊಂಡು ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳೇ ತಪ್ಪು ಒಪ್ಪಿಕೊಂಡಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಒಂದು ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 40 ಲಕ್ಷ ರೂಪಾಯಿಗೆ ಡೀಲ್ ಮಾಡಲಾಗಿದೆ. ಇದಲ್ಲದೇ 2023-24ರಲ್ಲಿ ನಡೆದ ಗಜೆಟೆಡ್ ಪ್ರೊಬೇಶನರಿ ಪರೀಕ್ಷೆ, ಡಿವೈಎಸ್‌ಪಿ ನೇಮಕದಲ್ಲೂ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಇಡೀ ಅಂಗವೇ ಕೊಳೆತರೆ ಗ್ಯಾಂಗ್ರಿನ್ ಎನ್ನುತ್ತಾರೆ. ಅನಪೇಕ್ಷಿತ ಜೀವಕೋಶಗಳು ಹೆಚ್ಚಿ ಜೀವಕ್ಕೇ ಅಪಾಯ ಉಂಟುಮಾಡುವುದನ್ನು ಕ್ಯಾನ್ಸರ್ ಎನ್ನುತ್ತಾರೆ. ಸದ್ಯ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಆಗಿರುವುದು ಕ್ಯಾನ್ಸರೋ, ಗ್ಯಾಂಗ್ರಿನ್ನೋ ಎಂಬುದನ್ನು ಸರಕಾರವೇ ಹೇಳಬೇಕು. ಸದ್ಯದ ಹಲವು ಹಗರಣಗಳಲ್ಲಿ ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರ ಕುಮಾರ್ ಮೇಲೆ ಸಿಐಡಿ ತನಿಖೆ ನಡೆಯುತ್ತಿದೆ. 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಆಗಿರುವ ಭಾರಿ ಅಕ್ರಮದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಸಿಐಡಿಗೆ ದೊರೆತಿವೆ.

ಅಕ್ರಮ ಮಾರ್ಗದಲ್ಲಿ ಪ್ರಶ್ನೆಗಳನ್ನು ದಕ್ಕಿಸಿಕೊಂಡು ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳೇ ತಪ್ಪು ಒಪ್ಪಿಕೊಂಡಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಒಂದು ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 40 ಲಕ್ಷ ರೂಪಾಯಿಗೆ ಡೀಲ್ ಮಾಡಲಾಗಿದೆ. ಇದಲ್ಲದೇ 2023-24ರಲ್ಲಿ ನಡೆದ ಗಜೆಟೆಡ್ ಪ್ರೊಬೇಶನರಿ ಪರೀಕ್ಷೆ, ಡಿವೈಎಸ್‌ಪಿ ನೇಮಕದಲ್ಲೂ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: KPSC Recruitment Scam: ಕೆಪಿಎಸ್‌ಸಿ: 6 ಫಲಾನುಭವಿಗಳಿಂದ ತಪ್ಪೊಪ್ಪಿಗೆ

ಬಹುಶಃ ಅಕ್ರಮ ನಡೆಯದ ಪರೀಕ್ಷೆಗಳು ಇಲ್ಲಿ ನಡೆದೇ ಇಲ್ಲ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಯದಿದ್ದರೇ ಅದನ್ನು ಪವಾಡ ಎನ್ನಬಹುದು. ಇದಕ್ಕೆ ಹೋಲಿಸಿದರೆ ನೀಟ್ ಪರೀಕ್ಷೆಯ ಪ್ರಶ್ನೆ‌ ಪತ್ರಿಕೆ ಸೋರಿಕೆ ಏನೇನೂ ಅಲ್ಲ ಎನ್ನಬಹುದು. ಆದರೂ ಇಲ್ಲಿ ಯಾರಿಗೂ ಶಿಕ್ಷೆಯೂ ಆಗಿಲ್ಲ. ತನಿಖೆಗೆ ಒಳಗಾದವರು, ಅಮಾನತಾದವರು ಕೂಡ ಕೋರ್ಟಿನಿಂದ ತಡೆಯಾಜ್ಞೆ ತಂದು ಮತ್ತೆ ಅಧ್ಯಕ್ಷ ಹುದ್ದೆಗೆ ವಕ್ಕರಿಸುವುದು ಕ್ರೂರ ವ್ಯಂಗ್ಯ. ಮಾಧ್ಯಮಗಳು, ಸಾರ್ವಜನಿಕರು ಎಷ್ಟು ಟೀಕಿಸಿ ದರೂ ನಾಟದ ದಪ್ಪ ಚರ್ಮದ ಹೊಲಸು ವ್ಯವಸ್ಥೆ ಇದು.

ಅಕ್ರಮಿಗಳನ್ನು ಸರಕಾರ ಕೂಡ ರಕ್ಷಿಸುತ್ತಿದೆ ಎಂಬ ಆರೋಪವೂ ಇದೆ. 1998, 99, 2004ರಲ್ಲಿ ಅರ್ಹತೆ ಇದ್ದರೂ ಹಲವು ಐಎಎಸ್ ಅಧಿಕಾರಿಗಳ ಬಡ್ತಿಯನ್ನು ಸರಕಾರ ತಡೆಹಿಡಿದಿದ್ದು, ಇದನ್ನು ಪ್ರಶ್ನಿಸಿ ಅಧಿಕಾರಿಗಳು ಕೋರ್ಟಿಗೆ ಹೋಗಿದ್ದಾರೆ. ಇನ್ನು ಹಲವಾರು ಅಧಿಕಾರಿಗಳು ಹಗರಣಗಳಲ್ಲಿ ಆರೋಪಿ ಗಳಾಗಿದ್ದು, ಅವರನ್ನು ಲಾಭದಾಯಕ ಜಾಗಗಳಿಗೆ ಬಡ್ತಿ ಮಾಡಿ ಕಳಿಸಲಾಗಿದೆ. ಈ ನಡೆಯನ್ನು ಹಲವು ಅಧಿಕಾರಿಗಳೇ ಪ್ರಶ್ನಿಸಿದ್ದಾರೆ.

ಈ ಹೊಲಸು ವ್ಯವಹಾರದಲ್ಲಿ ಸರಕಾರ ಕೂಡ ಕೈಯನ್ನು ಸಾಕಷ್ಟು ಕೊಳಕು ಮಾಡಿಕೊಂಡಂತಿದೆ. ಈ ಹಿಂದಿನ ಸರಕಾರಗಳೆಲ್ಲ ಇದರಲ್ಲಿ ಪಾಲುದಾರರು. ಗ್ಯಾಂಗ್ರಿನ್ ಆದರೆ ಇಡೀ ಅಂಗವನ್ನೆ ಕತ್ತರಿಸಿ ಎಸೆಯಬೇಕಾಗುತ್ತದೆ. ಕ್ಯಾನ್ಸರ್ ಜೀವಕೋಶಗಳನ್ನು ಸುಟ್ಟು ಹಾಕದಿದ್ದರೆ ಅದು ಇಡೀ ದೇಹವನ್ನು ಆವರಿಸಿಕೊಂಡು ಮುಗಿಸುತ್ತದೆ. ಕೆಪಿಎಸ್‌ಸಿ ಈಗ ಹಾಗಾಗಿದೆ. ಇದಕ್ಕೆ ಯಾವ ಚಿಕಿತ್ಸೆ ಆಗಬೇಕು ಎಂಬುದು ತಜ್ಞರಿಗೇ ಬಿಟ್ಟದ್ದು.