ಕರ್ನಾಟಕದ ವಿಧಾನಸಭೆ ಗೆಲುವಿಗೆ ಕಾಂಗ್ರೆಸ್ ಅನುಸರಿಸಿದ ಮಾದರಿ ಎಲ್ಲ ಕಡೆ ಜನಪ್ರಿಯ ವಾಗಿರುವುದನ್ನು ನಾವು ಈಗ ಮುಗಿದ ಪಂಚರಾಜ್ಯ ಚುನಾವಣೆಯ ಫಲಿತಾಂಶದಲ್ಲೂ ಕಾಣ ಬಹುದಾಗಿದೆ. ಕಾಂಗ್ರೆಸ್ ಪಂಚಗ್ಯಾರಂಟಿಗಳನ್ನು ನೀಡಿದ್ದರೆ, ತಮಿಳುನಾಡಿನಲ್ಲಿ ನಟ ವಿಜಯ್ ದಶ ಗ್ಯಾರಂಟಿಗಳನ್ನು ನೀಡಿ ಗೆದ್ದೂ ಬಂದಿದ್ದಾರೆ. ಅದರಲ್ಲೂ ಮಹಿಳೆಯರನ್ನೇ ಪ್ರಮುಖ ಗುರಿಯಾಗಿ ಇಟ್ಟುಕೊಂಡಿದ್ದಾರೆ.
ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಸವರಿನ್ ಚಿನ್ನ ಹಾಗೂ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನ ದುಂಗುರ ಹಾಗೂ ಕಿಟ್. ನಿರುದ್ಯೋಗಿ ಪದವಿಧರರಿಗೆ ಮಾಸಿಕ 4000 ರೂ., ಕೃಷಿ ಸಾಲ ಮನ್ನಾ, ಮಹಿಳೆಯರಿಗೆ ಉಚಿತ ಪ್ರಯಾಣ, 200 ಯುನಿಟ್ ವಿದ್ಯುತ್ ಉಚಿತ ಇತ್ಯಾದಿ ಇತ್ಯಾದಿ ಕಾಮನ ಬಿಲ್ಲನ್ನು ತೋರಿಸಿದ್ದಾರೆ.
ಇದನ್ನೂ ಓದಿ: Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ
ಕಾಂಗ್ರೆಸ್‌ನ್ನು ಈ ವಿಚಾರದಲ್ಲಿ ಟೀಕಿಸುತ್ತಿದ್ದ ಬಿಜೆಪಿ, ತಾನೇನೂ ಕಡಿಮೆ ಇಲ್ಲ ಎಂಬಂತೆ ಪಶ್ಚಿಮ ಬಂಗಾಳದಲ್ಲಿ ಮನೆ ಯಜಮಾನಿಯರಿಗೆ ಮಾಸಿಕ 3000 ರೂ. ನೀಡುವ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ 33 ಶೇಕಡ ಮೀಸಲು ನೀಡುವ ಭರವಸೆ ಬಿತ್ತಿದೆ. ಈಗ ಇವುಗಳನ್ನು ಈಡೇರಿಸ ಬೇಕಾದ ಕಾಲ.
ಬರಬರುತ್ತಾ ಚುನಾವಣೆ ಗೆಲ್ಲಲು ಇದೊಂದು ಸುಲಭ ಮಾರ್ಗವಾಗುತ್ತಿದೆಯೋ ಎಂದು ಯೋಚಿಸ ಬೇಕಾದ ಸನ್ನಿವೇಶ ಬರುತ್ತಿದೆ. ಎಲ್ಲ ಕಡೆಯೂ ಇದು ಸಾಮಾನ್ಯವಾಗುತ್ತಿದೆ. ಆದರೆ, ಯಾರೂ ಈ ಭರವಸೆಗಳನ್ನು ಈಡೇರಿಸುವುದು ಹೇಗೆ ಎಂದು ದೂರದೃಷ್ಟಿಯಿಂದ ಯೋಚಿಸಿದಂತಿಲ್ಲ.
ತೆರಿಗೆ ಸಂಗ್ರಹದಲ್ಲಿ ಸಂಪನ್ನ ರಾಜ್ಯವಾಗಿರುವ ಕರ್ನಾಟಕವೇ ಈ ಗ್ಯಾರಂಟಿಗಳನ್ನು ಈಡೇರಿಸು ವಲ್ಲಿ ಏದುಸಿರು ಬಿಡುತ್ತಿದೆ. ಹೀಗಿರುವಾಗ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂಬ ರಲಿರುವ ಸರ್ಕಾರಗಳು ಏನು ಮಾಡಲಿವೆ ಎಂಬುದು ಕುತೂಹಲಕಾರಿ. ಇದನ್ನೆಲ್ಲ ಈಡೇರಿಸಲು ಮತ್ತಷ್ಟು ಸಾಲ ಮಾಡಬೇಕಾಗಲಿದೆ.
ನಟ ವಿಜಯ್ ಅವರಂತೂ ಸರಕಾರ ರಚಿಸಿದರೆ ಈ ಗ್ಯಾರಂಟಿಗಳ ಭಾರದಲ್ಲಿ ನಲುಗಿ ಹೋದರೆ ಆಶ್ಚರ‍್ಯವಿಲ್ಲ. ಭರವಸೆಗಳನ್ನು ಕೊಡುವುದು ದೊಡ್ಡದಲ್ಲ, ಅದನ್ನು ಈಡೇರಿಸುವುದೇ ಬಹು ಮುಖ್ಯ. ಚುನಾವಣೆಗಳ ಮುನ್ನ ಇದೊಂದು ಅಲಿಖಿತ ರೂಢಿಯೇ ಆಗಿಹೋದಾಗ, ಪ್ರತಿ ಪಕ್ಷಕ್ಕೂ ಇದೊಂದು ಹೊರೆಯೇ ಆಗಲಿದೆ.
ಹಿಮಾಚಲ ಪ್ರದೇಶ ಸರಕಾರ, ನಮ್ಮಲ್ಲಿ ನೌಕರರ ತಿಂಗಳ ಸಂಬಳ ಕೊಡಲೂ ದುಡ್ಡಿಲ್ಲ ಎಂದು ಅಲವತ್ತುಕೊಂಡಿದ್ದಲ್ಲದೆ, ಬಜೆಟ್ ಗಾತ್ರ ಕಡಿಮೆ ಮಾಡಿತ್ತು. ಇಂಥ ಗತಿ, ಕೇಂದ್ರದ ಮುಂದೆ ಕೈಯೊಡ್ಡುವ ಸ್ಥಿತಿ ಯಾವುದೇ ರಾಜ್ಯ ಸರಕಾರಕ್ಕೆ ಬರಬಾರದು. ಕೊನೆಗೂ ಇದರ ಭಾರ ಹೊರು ವವರು ಜನಸಾಮಾನ್ಯರೇ ಆಗಿರುತ್ತಾರೆ ಎಂಬುದನ್ನು ಮರೆಯಬಾರದು.