ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ

ಜನಸಂಘದ ಮೂಲಪುರುಷರಾದ ಶ್ಯಾಮಪ್ರಸಾದ ಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಅಧಿಕಾರ ಕ್ಕೇರಿದೆ. ಮೂರು ಅವಧಿಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಮೊದಲ ಅವಧಿಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೂ ನಂತರದ ಎರಡು ಅವಧಿಗಳಲ್ಲಿ ಅದನ್ನು ಪೂರ್ತಿ ಕೈಬಿಟ್ಟು ಪಕ್ಷದ ಕಾರ‍್ಯಕರ್ತರ ಗೂಂಡಾಗಿರಿ, ಒಕ್ಕೂಟ ಸರ್ಕಾರದ ಜೊತೆಗೆ ನಿರಂತರ ಸಂಘರ್ಷಗಳಲ್ಲಿ ತೊಡಗಿಕೊಂಡು, ಮತಎಣಿಕೆ- ಮತದಾರರ ಯಾದಿ ತಿದ್ದುಪಡಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನೂ ಧಿಕ್ಕರಿಸುವ ಉದ್ಧಟತನ ತೋರಿದರು.

Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ

-

Profile
Ashok Nayak May 5, 2026 9:33 AM

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವು ನಿರೀಕ್ಷಿತ, ಜತೆಗೆ ಅನಿರೀಕ್ಷಿತ ಫಲಗಳನ್ನೂ ನೀಡಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪಶ್ಚಿಮ ಬಂಗಾಳದಲ್ಲಿ, ಹದಿನೈದು ವರ್ಷಗಳಿಂದ ಬಿಗಿ ಹಿಡಿತ ಇಟ್ಟುಕೊಂಡಿದ್ದ ದೀದಿಯನ್ನು ಬಿಜೆಪಿ ಮಣಿಸಿದೆ.

ಜನಸಂಘದ ಮೂಲಪುರುಷರಾದ ಶ್ಯಾಮಪ್ರಸಾದ ಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಮೂರು ಅವಧಿಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಮೊದಲ ಅವಧಿಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೂ ನಂತರದ ಎರಡು ಅವಧಿಗಳಲ್ಲಿ ಅದನ್ನು ಪೂರ್ತಿ ಕೈಬಿಟ್ಟು ಪಕ್ಷದ ಕಾರ‍್ಯಕರ್ತರ ಗೂಂಡಾಗಿರಿ, ಒಕ್ಕೂಟ ಸರ್ಕಾರದ ಜೊತೆಗೆ ನಿರಂತರ ಸಂಘರ್ಷಗಳಲ್ಲಿ ತೊಡಗಿಕೊಂಡು, ಮತಎಣಿಕೆ- ಮತದಾರರ ಯಾದಿ ತಿದ್ದುಪಡಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನೂ ಧಿಕ್ಕರಿಸುವ ಉದ್ಧಟತನ ತೋರಿದರು.

ಜೊತೆಗೆ ಬಾಂಗ್ಲಾ ನಿರಾಶ್ರಿತರ ಓಲೈಕೆ. ಇವೆಲ್ಲವನ್ನೂ ಮತದಾರ ಗ್ರಹಿಸಿ ಚೆನ್ನಾಗಿಯೇ ಪಾಠ ಕಲಿಸಿದ್ದಾನೆ. ಇದರ ಜೊತೆಗೆ ಆಡಳಿತ ವಿರೋಧಿ ಅಲೆ, ಬಿಜೆಪಿಯ ತಂತ್ರಗಾರಿಕೆ, ಬಾಂಗ್ಲಾ ನಿರಾಶ್ರಿತರನ್ನು ಮತದಾರರ ಯಾದಿಯಿಂದ ಹೊರಗಿಟ್ಟಿರುವುದು ಕೂಡ ಫಲ ನೀಡಿದಂತಿದೆ.

ಇದನ್ನೂ ಓದಿ: Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

ಇನ್ನು ತಮಿಳುನಾಡಿನ ಫಲಿತಾಂಶ ತುಸು ಅಚ್ಚರಿ ತರುವಂಥದ್ದು. ಇಲ್ಲಿ ದ್ರಾವಿಡ ಪಕ್ಷಗಳ ರಾಜಕಾರಣವನ್ನು ಮತದಾರ ತಿರಸ್ಕರಿಸಿದ್ದಾನೆ. ಟಿವಿಕೆ ಪಕ್ಷವನ್ನು ಸ್ಥಾಪಿಸಿದ ಸಿನಿಮಾ ನಟ ವಿಜಯ ಅವರ ಗೆಲುವು, ಪಡೆದ ಸ್ಥಾನಗಳ ಸಂಖ್ಯೆ ಗಮನಾರ್ಹ. ಜೆನ್ ಝೀ ಮತದಾರರನ್ನು ವಿಜಯ್ ಸೆಳೆದಂತಿದೆ. ಕೇರಳದ ಮತದಾರರು ಅಧಿಕಾರಸ್ಥರನ್ನು ಬದಲಿಸುವ ಜಾಣತನ ತೋರಿಸಿದ್ದಾರೆ.

ಪಿಣರಾಯಿ ವಿಜಯನ್ ವರ್ಚಸ್ಸು ಮಂಕಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಅನ್ನು ಆರಿಸಿಕೊಂಡಿದ್ದಾನೆ. ಇದರೊಂದಿಗೆ ಭಾರತದಲ್ಲಿದ್ದ ಕೊನೆಯ ಕಮ್ಯುನಿಸ್ಟ್ ಪಕ್ಷವನ್ನೂ ಮತದಾರ ಕೆಳಗಿಳಿಸಿದ್ದಾನೆ. ಪುದುಚೇರಿ ಹಾಗೂ ಅಸ್ಸಾಂಗಳ ಫಲಿತಾಂಶ ನಿರೀಕ್ಷಿತವೇ. ಯಾಕೆಂದರೆ ಅಲ್ಲಿ ಎನ್‌ಡಿಎಗೆ ಪ್ರಬಲವಾದ ಪ್ರತಿರೋಧ ಇರಲಿಲ್ಲ. ಅಧಿಕಾರದ ದುರುಪಯೋಗ, ಧ್ರುವೀಕರಣ ರಾಜಕೀಯದಿಂದ ಮತದಾರರು ಬೇಸತ್ತಿರುವುದು ಪ.ಬಂಗಾಳ, ತಮಿಳುನಾಡು, ಕೇರಳಗಳಲ್ಲಿ ದಾಖಲಾಗಿದೆ.

ಕರ್ನಾಟಕದ ೨ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್‌ಗೆ ಮತದಾರ ಜೈ ಎಂದಿದ್ದು, ಅದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅಬಾಧಿತವಾಗಿದೆ.