ಮಧ್ಯಪ್ರಾಚ್ಯ ಯುದ್ಧದಲ್ಲಿ ಕದನ ವಿರಾಮದ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಮಾಡಿದ ಕಸರತ್ತು ಲೇವಡಿಗೆ ಒಳಗಾಗಿದೆ. ದೆಹಲಿಯಲ್ಲಿ ಮೊನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಾತನಾಡುತ್ತಾ ಪಾಕಿಸ್ತಾನಕ್ಕೆ ‘ದಲ್ಲಾಳಿ ದೇಶ’ ಎಂದು ಹಣೆಪಟ್ಟಿ ಕಟ್ಟಿ, ಪಾಕ್‌ನಂತೆ ಭಾರತವು ಹೀಗೆ ಮಧ್ಯವರ್ತಿ ರಾಷ್ಟ್ರವಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.
ಮತ್ತೊಂದೆಡೆ, ಹೊರ್ಮುಜ್ ಜಲಸಂಧಿಯ ಮೂಲಕ ಪಾಕಿಸ್ತಾನದ ಹಡಗು ಹಾದು ಹೋಗುವುದಕ್ಕೆ ಇರಾನ್ ‘ನಿರಾಕರಣೆ’ಯ ಅಸ್ತ್ರವನ್ನು ಪ್ರಯೋಗಿಸಿರುವುದು ವರದಿ ಯಾಗಿದೆ. ಕರಾಚಿಗೆ ತೆರಳುತ್ತಿದ್ದ ಹಡಗನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಪಡೆಗಳು ತಡೆದು ಹಿಂದಿರುಗುವಂತೆ ಸೂಚಿಸಿರುವುದು ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮುಖಭಂಗ ವನ್ನು ಉಂಟು ಮಾಡಿದೆ.
ಇದನ್ನೂ ಓದಿ: Vishwavani Editorial: ಭಾರತದ ನಿಲುವು ಜಗತ್ತಿಗೆ ಭರವಸೆ
ಈ ಬೆಳವಣಿಗೆಯಲ್ಲಿ ಅಚ್ಚರಿಯೇನೂ ಇಲ್ಲ. ‘ಶಾಂತಿಪಾಲನೆ’, ‘ಕದನ ವಿರಾಮದ ಮಧ್ಯ ಸ್ಥಿಕೆ’ ಎಂಬ ಪರಿಭಾಷೆಗಳು ಪಾಕಿಸ್ತಾನದ ಧೋರಣೆಗೆ ಹೊಂದುವಂಥವಲ್ಲ; ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತ ಮತ್ತು ಗಡಿ ಪ್ರದೇಶಗಳಲ್ಲಿ ಪದೇ ಪದೆ ಕಿತಾಪತಿ-ಕಿರಿಕಿರಿಗಳನ್ನು ಉಂಟು ಮಾಡುತ್ತ ಬಂದಿದ್ದ ಪಾಕಿಸ್ತಾನವು ತನ್ನನ್ನು ‘ಶಾಂತಿಪಾಲಕ’ನ ಮತ್ತು ‘ಕದನವಿರಾಮದ ಮಧ್ಯಸ್ಥಿಕೆ ದಾರ’ನ ಸ್ಥಾನದಲ್ಲಿ ಕಲ್ಪಿಸಿಕೊಂಡಿದ್ದೇ ಹಾಸ್ಯಾಸ್ಪದ ಸಂಗತಿ.
ಪಾಕಿಸ್ತಾನದ ಇಂಥ ಇಬ್ಬಂದಿತನ ಮತ್ತು ಮಾರ್ಜಾಲ ನೀತಿಗಳು ಇರಾನ್‌ಗೂ ಸ್ಪಷ್ಟವಾಗಿ ಅರಿವಾಗಿವೆ ಎಂಬುದರ ದ್ಯೋತಕವಿದು. ಉಗ್ರವಾದಿಗಳಿಗೆ ಕುಮ್ಮಕ್ಕು ನೀಡಿ ಕಾಶ್ಮೀರದ ಪಹಲ್ಗಾಮ್ʼನಲ್ಲಿ 26 ಮಂದಿ ಅಮಾಯಕರ ಮಾರಣಹೋಮಕ್ಕೆ ಕಾರಣವಾಗಿ, ಜಾಗತಿಕ ಸಮುದಾಯದ ಮುಂದೆ ಯಾವಾಗಲೋ ಮಾನವನ್ನು ಹರಾಜು ಮಾಡಿಕೊಂಡಿರುವ ಪಾಕಿಸ್ತಾನವು ಅದನ್ನು ಮರು ಸ್ಥಾಪಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ ಎಂಬುದನ್ನು ಇಂಥ ಬೆಳವಣಿಗೆಗಳೇ ಹೇಳಬಲ್ಲವು. ಆದರೆ ಇಂಥ ಯಾವುದೇ ನಾಟಕವನ್ನು ಜಗತ್ತಿನ ಮಿಕ್ಕ ರಾಷ್ಟ್ರಗಳು ಇನ್ನು ಮುಂದೆ ನಂಬುವುದು ದುಸ್ತರವೇ. ಭಾರತದ ‘ಮಗ್ಗುಲುಮುಳ್ಳು’ ದೇಶ ಇದನ್ನು ಅರಿತರೆ ಒಳಿತು..!