ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಥೆನಾಲ್ ಗುಮ್ಮ

ಇ20 ಪೆಟ್ರೋಲನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಇಂಜಿನ್‌ಗಳು ಇನ್ನೂ ಪೂರ್ಣಪ್ರಮಾಣ ದಲ್ಲಿ ಮಾರುಕಟ್ಟೆಗೆ ಸೇರಿಲ್ಲ. ಹಾಗಿರುವಾಗ, ಹೆಚ್ಚಿನ ಎಥೆನಾಲ್ ಮಿಶ್ರಗೊಳಿಸುವುದು ಗ್ರಾಹಕರಿಗೆ ಮಾಡುವ ಕಠೋರ ವಂಚನೆ. ತಾವು ನೀಡುವ ಹಣಕ್ಕೆ ಪರಿಶುದ್ಧ ವಸ್ತು ಪಡೆಯುವ ಹಕ್ಕು ಗ್ರಾಹಕರದ್ದಾಗಿದೆ.

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗುತ್ತಿದೆ ಎಂದು ರಾಜ್ಯ ಸರಕಾರ ಗಂಭೀರ ಆರೋಪ ಮಾಡಿದ್ದು, ಕಳೆದೆರಡು ದಿನಗಳಿಂದ ಈ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ನಿಜವಾಗಿಯೂ ಇ20ಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರ ಆಗುತ್ತಿದ್ದರೆ, ಅದು ಗಂಭೀರ ಸ್ವರೂಪದ ವಂಚನೆಯೇ ಆಗಿದೆ. ಈ ಕುರಿತು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ವರದಿಗೆ ತೈಲ ಮಾರಾಟ ಕಂಪನಿಗಳು ಈವರೆಗೂ ನೇರ ಉತ್ತರ ನೀಡಿಲ್ಲ. ತಾಂತ್ರಿಕ ವಿಚಾರಗಳನ್ನು ಮುಂದಿಟ್ಟು ಸುತ್ತುಬಳಸಿ ಉತ್ತರಿಸುತ್ತಿವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆರೋಪಿಸಿದ್ದಾರೆ. ರಾಜ್ಯ ಸರಕಾರ ಹೇಳುವಂತೆ, 63 ಪೆಟ್ರೋಲ್ ಬಂಕ್‌ಗಳಿಂದ ನಿಯಮಾನುಸಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ವರದಿಯಲ್ಲಿ, ಶೇ.31 ಎಥೆನಾಲ್ ಕಂಡುಬಂದಿದೆ.

ಇದಕ್ಕೆ ಯಾರು ಹೊಣೆ? ಈಗಾಗಲೇ 20 ಶೇಕಡ ಎಥೆನಾಲ್ ಬಳಸುತ್ತಿರುವುದರಿಂದಲೇ ಹಳೆಯ ಇಂಜಿನ್‌ನ ವಾಹನಗಳಲ್ಲಿ ಸಮಸ್ಯೆ, ಮೈಲೇಜ್ ಕೊರತೆ ಕಂಡುಬಂದಿದೆ ಎಂದು ಹೇಳಲಾಗಿದೆ. ಇ20 ಪೆಟ್ರೋಲನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಇಂಜಿನ್‌ಗಳು ಇನ್ನೂ ಪೂರ್ಣಪ್ರಮಾಣ ದಲ್ಲಿ ಮಾರುಕಟ್ಟೆಗೆ ಸೇರಿಲ್ಲ. ಹಾಗಿರುವಾಗ, ಹೆಚ್ಚಿನ ಎಥೆನಾಲ್ ಮಿಶ್ರಗೊಳಿಸುವುದು ಗ್ರಾಹಕರಿಗೆ ಮಾಡುವ ಕಠೋರ ವಂಚನೆ. ತಾವು ನೀಡುವ ಹಣಕ್ಕೆ ಪರಿಶುದ್ಧ ವಸ್ತು ಪಡೆಯುವ ಹಕ್ಕು ಗ್ರಾಹಕರದ್ದಾಗಿದೆ.

ಇದನ್ನೂ ಓದಿ: Vishwavani Editorial: ಬೆಳಕಿನ ಹಬ್ಬದ ಸಂದೇಶ

ಪೆಟ್ರೋಲ್ ಬಂಕ್‌ಗಳ ಡೀಲರ್‌ಗಳು ಹೆಚ್ಚುವರಿ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವೇ ಇಲ್ಲ. ಎಥೆನಾಲ್ ಮಿಶ್ರಣವು ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುವುದಿಲ್ಲ. ತೈಲ ಕಂಪನಿ ಗಳೇ ಇದನ್ನು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯಲ್ಲಿ ನಡೆಸುತ್ತವೆ ಎಂದು ಬಂಕ್‌ ಗಳವರು ತಿಳಿಸುತ್ತಾರೆ.

ಕರ್ನಾಟಕದಲ್ಲಿ ಆರು ತೈಲ ಟರ್ಮಿನಲ್‌ಗಳಿದ್ದು, ಅಲ್ಲಿಯೇ ಮಿಶ್ರಣ ಪ್ರಕ್ರಿಯೆ ನಡೆಯುತ್ತದೆ ಎನ್ನಲಾಗಿದೆ. ಹೀಗಾಗಿ ಇದಕ್ಕೆ ತೈಲ ಕಂಪನಿಗಳೇ ಹೊಣೆ ಹೊರಬೇಕು. ಆದರೆ ತೈಲ ಕಂಪನಿಗಳು ಇದುವರೆಗೂ ಸಮರ್ಪಕ ಉತ್ತರ ನೀಡಿಲ್ಲ. ಕೇಂದ್ರ ಸರಕಾರವೂ ಮುಗುಮ್ಮಾಗಿ ಕುಳಿತಿದೆ. ಎಥೆನಾಲ್‌ನಲ್ಲಿರುವ ಕ್ಲೋರೈಡ್ ಮತ್ತು ಸಲರ್ ಅಂಶಗಳಿಂದ ವಾಹನಗಳ ಎಂಜಿನ್‌ಗೆ ಹಾನಿ ಯಾಗುವ ಸಾಧ್ಯತೆಗಳಿವೆ.

ಶೇ.30ರಷ್ಟು ಎಥೆನಾಲ್ ಮಿಶ್ರಣವನ್ನು ಈಗಿನ ಯಾವುದೇ ಎಂಜಿನ್‌ಗಳು ಬೆಂಬಲಿಸುವುದಿಲ್ಲ. ಎಥೆನಾಲ್ ಮಿಶ್ರಣದ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಗ್ರಾಹಕರಿಗೆ ಆಯ್ಕೆ ಇರಬೇಕು. ಇ20 ಅಥವಾ ಇ10 ಪೆಟ್ರೋಲ್ ಯಾವುದನ್ನು ಬಳಸಬೇಕು ಎಂಬುದನ್ನು ಗ್ರಾಹಕರೇ ನಿರ್ಧರಿಸುವ ಅವಕಾಶ ಇರಬೇಕು. ಇ30 ಮಿಶ್ರಣದ ಜವಾಬ್ದಾರರನ್ನು ಕೃತ್ಯಕ್ಕೆ ಹೊಣೆ ಮಾಡಬೇಕು.