ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ವರ್ಷವು ಪೂರ್ಣಗೊಂಡ ಸಂಭ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಈ ಮೊದಲು ಸ್ಥಗಿತಗೊಂಡಿದ್ದ ದೇಶದ ಆರ್ಥಿಕ ಪ್ರಗತಿಯನ್ನು ಸರಿಪಡಿಸಿರುವೆ, ಗಡಿಗಳು ಈಗ ಸುರಕ್ಷಿತವಾಗಿವೆ, ಪೊಲೀಸ್ ಪಡೆ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.
ಕಾನೂನುಬದ್ಧ ದಾಖಲೆ ಹೊಂದಿರುವ ವಲಸಿಗರಷ್ಟೇ ದೇಶವನ್ನು ಪ್ರವೇಶಿಸಿರುವುದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚೆಚ್ಚು ಅಮೆರಿಕನ್ನರು ಉದ್ಯೋಗಸ್ಥರಾಗಿದ್ದಾರೆ’ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಂಡಿದ್ದಾರೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯದೊಂದಿಗೇ ಗದ್ದುಗೆಯನ್ನು ಅಪ್ಪಿದ ಟ್ರಂಪ್ ಅವರು, ಅದು ಸಾಕಾರ ಗೊಳ್ಳುವ ಹಾದಿಯಲ್ಲಿದೆ ಎಂಬುದನ್ನು ಹೀಗೆ ಸಮರ್ಥಿಸಿಕೊಂಡಿರಲಿಕ್ಕೂ ಸಾಕು.
ಇದನ್ನೂ ಓದಿ: Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...
ಅಷ್ಟಕ್ಕೂ, ತನ್ನ ದೇಶದ ಮತ್ತು ದೇಶಸ್ಥರ ಹಿತವನ್ನು ಕಾಯುವುದು ಯಾವುದೇ ರಾಷ್ಟ್ರ ನಾಯಕನ ಆದ್ಯತೆಯಾಗಬೇಕು. ಹಾಗೆಂದ ಮಾತ್ರಕ್ಕೆ ಮಿಕ್ಕ ರಾಷ್ಟ್ರಗಳ ಹಿತವನ್ನು ಬಲಿಕೊಡಬೇಕು ಎಂದೇನೂ ಇಲ್ಲವಲ್ಲ? ತಮ್ಮ ಮಹತ್ವಾಕಾಂಕ್ಷೆಯ ‘ಸಸಿ’ಗೆ ನೀರೆರೆಯಲು ಟ್ರಂಪ್ ಅವರು ಸಾಕಷ್ಟು ರಾಷ್ಟ್ರಗಳ ‘ಪ್ರಗತಿ ವೃಕ್ಷ’ಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾ ಗಿದ್ದನ್ನು ಇಡೀ ಜಗತ್ತೇ ಕಂಡಿದೆ.
ಹೀಗಿರುವಾಗ ಟ್ರಂಪ್ ಈ ಸಂಭ್ರಮದ ವೇಳೆ ಕೊಂಚ ಆತ್ಮಾವಲೋಕನವನ್ನೂ ಮಾಡಿ ಕೊಂಡರೆ ಒಳಿತು. ‘ನಾನೊಬ್ಬನೇ ಉದ್ಧಾರವಾಗಬೇಕು’ ಎಂಬುದು ಸ್ವಾರ್ಥ ಚಿಂತನೆ ಯಾದರೆ, ‘ನನ್ನ ಜತೆಗಿರುವವರನ್ನೂ ಉದ್ಧರಿಸಬೇಕು’ ಎಂಬುದು ಆದರ್ಶ ನಾಯಕತ್ವ ಎನಿಸಿಕೊಳ್ಳುತ್ತದೆ. ಇದು ರಾಷ್ಟ್ರವೊಂದರ ವಿಷಯದಲ್ಲೂ ಅನ್ವಯವಾಗುವ ಮಾತು.
ಟ್ರಂಪ್ ಅವರು ಅಮೆರಿಕವನ್ನು ಮತ್ತೊಮ್ಮೆ ಮಹತ್ತರವಾಗಿಸಲಿ, ಅದಕ್ಕೆ ಯಾರದ್ದೇನೂ ಅಭ್ಯಂತರವಿಲ್ಲ. ಆದರೆ ಅದರ ನೆರವೇರಿಕೆಗೆ ಮಿಕ್ಕ ರಾಷ್ಟ್ರಗಳನ್ನು ಅವರು ಪಾತಾಳಕ್ಕೆ ಅಮುಕಲು ಯತ್ನಿಸದಿದ್ದರೆ ಸಾಕು...!