Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...
ಇಡೀ ಧಾರವಾಡ ನಗರವೇ ವಿದ್ಯಾರ್ಥಿಗಳಿಂದ ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಅಂತಹುದ್ದೇ ಒಂದು ಹೋರಾಟ ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆಯಿತು. ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಅಲ್ಲಿನ, ಆ ಭಾಗದ ಸ್ಥಳೀಯರು ರೊಚ್ಚಿ ಗೆದ್ದರು.
-
ಅದು ಸರಿಯಿಲ್ಲ, ಇದು ಸರಿಯಿಲ್ಲ, ಅದು ಸರಿಯಾಗಬೇಕು, ಇದು ಸರಿಯಾಗಬೇಕು ಎಂಬ ಕಾರಣಗಳನ್ನಿಟ್ಟುಕೊಂಡು ದೇಶದ ಮೂಲೆಮೂಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಪ್ರತಿಭಟನೆಗಳು ತಮ್ಮ ನಿರ್ದಿಷ್ಟ ಉದ್ದೇಶ ಸಾಧನೆ ಮಾಡುವುದು ಮಾತ್ರ
ತೀರಾ ಅಪರೂಪ. ಬಹುತೇಕ ಹೋರಾಟಗಳನ್ನು ನಮ್ಮ ವಿವಿಧ ವ್ಯವಸ್ಥೆಗಳು ತಮ್ಮ ತಂತ್ರಗಾರಿಕೆ ಬಳಸಿ ವಿಫಲ ಮಾಡಿಸುತ್ತವೆ. ಈ ಹೋರಾಟಗಳು ಸಮಾಜದ ಅಗತ್ಯಗಳನ್ನು ಗಮನಿಸಿಯೇ ಮೇಲೆದ್ದಿರುತ್ತವೆ. ವ್ಯವಸ್ಥೆ ಅದನ್ನು ಸತತವಾಗಿ ನಿರ್ಲಕ್ಷಿಸಿದ್ದರಿಂದಲೇ ಒಂದು ಹಂತದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ.
ಇಂತಹ ಹೋರಾಟಗಳನ್ನು ತಮ್ಮ ತೋಳ್ಬಲ ಬಳಸಿ ಹತ್ತಿಕ್ಕುವ ಬದಲು, ಅವುಗಳನ್ನು ಪರಿಶೀಲಿಸಿ ಸರಿಪಡಿಸುವ ದಿಕ್ಕಿನಲ್ಲಿ ಹೆಜ್ಜೆಯಿಡಬೇಕು. ಧಾರವಾಡದಲ್ಲಿ ಸೋಮವಾರ ವಿದ್ಯಾರ್ಥಿ ಸಂಘಟನೆಗಳು 2.7 ಲಕ್ಷ ಖಾಲಿಯಿರುವ ಸರಕಾರಿ ಹುದ್ದೆಗಳನ್ನು ತುಂಬಿ ಎಂದು ದೊಡ್ಡ ಹೋರಾಟ ಮಾಡಿದರು.
ಇದನ್ನೂ ಓದಿ: Vishwavani Editorial: ಮಾರಾಮಾರಿಯ ನೆಲೆಯಾಗದಿರಲಿ
ಇಡೀ ಧಾರವಾಡ ನಗರವೇ ವಿದ್ಯಾರ್ಥಿಗಳಿಂದ ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಅಂತಹುದ್ದೇ ಒಂದು ಹೋರಾಟ ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆಯಿತು. ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಅಲ್ಲಿನ, ಆ ಭಾಗದ ಸ್ಥಳೀಯರು ರೊಚ್ಚಿ ಗೆದ್ದರು.
ಅಲ್ಲಿನ ಕಾಡಾನೆ ದಾಳಿಯಿಂದ ಸಾಯುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಮಾತ್ರವಲ್ಲ ಕಾಡಾನೆ, ಕಾಡುಹಂದಿ, ಕಾಡುಕೋಣ, ನವಿಲು, ಮಂಗಗಳ ನಿರಂತರ ಹಾವಳಿಯಿಂದ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದು ಕೆಲವೇ ಗಂಟೆಗಳಲ್ಲಿ ನೆಲಸಮವಾಗುತ್ತಿದೆ. ಒಂದು ಕಡೆ ರೋಗಗಳು, ಇನ್ನೊಂದು ಕಡೆ ಪರಿಶ್ರಮಕ್ಕೆ ತಕ್ಕ ಲಾಭವಿಲ್ಲದ ಬೇಸರ, ಇನ್ನೊಂದು ಕಡೆ ಸರಕಾರದ ಲೆಕ್ಕಾಚಾರವೇ ಇಲ್ಲದ, ಜನರಿಗೆ ನಿಜಕ್ಕೂ ಉಪಯೋಗಕ್ಕೆ ಬರದ ನೀತಿಗಳು, ಇನ್ನೊಂದು ಕಡೆ ನಿರಂತರವಾಗಿ ಪ್ರಾಣಿಗಳ ದಾಳಿಯಾಗುತ್ತಿದ್ದರೂ, ಅವುಗಳನ್ನು ನಿಗ್ರಹಿಸಲು ಅವಕಾಶವಿಲ್ಲದ ಸ್ಥಿತಿ.
ಇದಕ್ಕೂ ಮೀರಿ ಕಾಡುಪ್ರಾಣಿಗಳಿಂದ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು. ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ, ಅವನ್ನು ವಿರೋಧಿಸಿ ಜನರು ಪ್ರಾಮಾಣಿಕವಾಗಿ ರಸ್ತೆಗಿಳಿದರೂ ಅದಕ್ಕೆ ರಾಜಕೀಯ ಬಣ್ಣ ಕಟ್ಟಿ, ಹೋರಾಟಗಾರರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ನ್ಯಾಯಾಲಯಕ್ಕೆ ಅಲೆಸಲಾಗುತ್ತದೆ. ಇದರಿಂದ ಸರಕಾರವೊಂದು ಇದೆ, ಅದು ನಮ್ಮ ಗೋಳು ಕೇಳುತ್ತದೆ ಎಂಬ ಜನರ ನಂಬಿಕೆ ಹಾಳಾಗುವುದಿಲ್ಲವೇ? ಸರಕಾರದ ಅಸ್ತಿತ್ವದ ಉದ್ದೇಶವಾದರೂ ಏನು ಹಾಗಾದರೆ?