Vishwavani Editorial: ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ
ಅಫೀಮು, ಗಾಂಜಾ, ಹೆರಾ ಯಿನ್, ಮಾರ್ಫಿನ್, ಎಡಿಎಂಎ, ಎಲ್‌ಎಸ್‌ಡಿ, ಕೊಕೇನ್ ಮುಂತಾದ ಮಾದಕ ವಸ್ತುಗಳ ಮಾರಾಟ ಹಾಗೂ ಪೂರೈಕೆಗೆ ಇನ್ನೂ ಲಗಾಮು ಬಿದ್ದಿಲ್ಲ ಎಂಬ ಕಾರಣಕ್ಕೇ ರಾಜ್ಯ ದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಏಳು ಸಚಿವರ ಕಾರ್ಯಪಡೆಯನ್ನು ಕೆಲ ತಿಂಗಳ ಹಿಂದೆ ರಚಿಸಿ, ಈ ದಂಧೆಗೆ ಇತಿಶ್ರೀ ಹಾಡಲು ಸಂಕಲ್ಪಿಸಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು


ಅಮಲು ಪದಾರ್ಥಗಳಿಗೆ ದಾಸರಾಗಿರುವ ಜನರ ಪ್ರಮಾಣ ಹೆಚ್ಚುತ್ತಲೇ ಹೋದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯವು ‘ಉಡ್ತಾ ಪಂಜಾಬ್’ ಎಂಬ ಹಣೆಪಟ್ಟಿಯನ್ನು ಕಟ್ಟಿಸಿಕೊಳ್ಳುವಂತಾಗಿದ್ದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಈ ವಿಷಯದಲ್ಲಿ ತಾವೇನೂ ಕಮ್ಮಿಯಿಲ್ಲ ಎನ್ನುವ ರೀತಿ ಯಲ್ಲಿ ದೇಶದ ಮತ್ತಷ್ಟು ರಾಜ್ಯಗಳು ಮಾದಕವಸ್ತುಗಳ ಮಾರಾಟ ಜಾಲಕ್ಕೆ ಮಡಿಲಾದುದನ್ನು ಕಾಲಾನುಕಾಲಕ್ಕೆ ಕೇಳುತ್ತಲೇ ಬಂದಿದ್ದೇವೆ.
ಇದಕ್ಕೆ ಕರ್ನಾಟಕ ರಾಜ್ಯವೂ ಹೊರತಲ್ಲ. ಡ್ರಗ್ಸ್ ಪೂರೈಕೆ ಮತ್ತು ಮಾರಾಟದ ಆರೋಪಗಳ ಅಡಿಯಲ್ಲಿ 2024ರಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 3500ಕ್ಕೂ ಹೆಚ್ಚು ಎಫ್ಐಆರ್‌ಗಳು ದಾಖಲಾಗಿದ್ದವು ಮತ್ತು 2417 ಆರೋಪಿಗಳನ್ನು ಬಂಧಿಸಲಾಗಿತ್ತು. ಅಫೀಮು, ಗಾಂಜಾ, ಹೆರಾ ಯಿನ್, ಮಾರ್ಫಿನ್, ಎಡಿಎಂಎ, ಎಲ್‌ಎಸ್‌ಡಿ, ಕೊಕೇನ್ ಮುಂತಾದ ಮಾದಕ ವಸ್ತುಗಳ ಮಾರಾಟ ಹಾಗೂ ಪೂರೈಕೆಗೆ ಇನ್ನೂ ಲಗಾಮು ಬಿದ್ದಿಲ್ಲ ಎಂಬ ಕಾರಣಕ್ಕೇ ರಾಜ್ಯದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಏಳು ಸಚಿವರ ಕಾರ್ಯಪಡೆಯನ್ನು ಕೆಲ ತಿಂಗಳ ಹಿಂದೆ ರಚಿಸಿ, ಈ ದಂಧೆಗೆ ಇತಿಶ್ರೀ ಹಾಡಲು ಸಂಕಲ್ಪಿಸಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: Vishwavani Editorial: ಹೃದಯಾಘಾತ: ಆತಂಕ ಬೇಡ
ಈ ಜಾಲವು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ ಎಂಬುದಕ್ಕೆ ಪುಷ್ಟಿ ನೀಡುವಂಥ ಸುದ್ದಿ ಯು ಹೈದರಾಬಾದ್‌ನಿಂದ ಬಂದಿದೆ. ‘ಮುತ್ತಿನ ನಗರಿ’ ಎಂದೇ ಖ್ಯಾತವಾಗಿದ್ದು ದೇಶದ ಮಾಹಿತಿ ತಂತ್ರಜ್ಞಾನದ ಹಬ್ ಎಂದೇ ಕರೆಸಿಕೊಳ್ಳುತ್ತಿರುವ ಹೈದರಾಬಾದ್‌ನಲ್ಲಿ ಮರಿಜುವಾನಾ ಮತ್ತು ಗಾಂಜಾದ ಹಾವಳಿ ಮಿತಿಮೀರಿದ್ದು, ಈ ಸಂಬಂಧವಾಗಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ ಅಲ್ಲಿನ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ ಎನ್ನುತ್ತವೆ ಲಭ್ಯ ವರದಿಗಳು.
ನಮ್ಮ ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವಜನರೇ ಡ್ರಗ್ಸ್ ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆಘಾತಕಾರಿ ಸಂಗತಿ. ಹೀಗಾಗಿ ಆಯಾ ರಾಜ್ಯಗಳ ಆಳುಗರು ಡ್ರಗ್ಸ್ ದಂಧೆ ಯನ್ನು ಮಟ್ಟ ಹಾಕಲು ಆದ್ಯಗಮನವನ್ನು ನೀಡಬೇಕಿದೆ.